ಟೀಮ್ ಇಂಡಿಯಾ ಐಸಿಸಿ ಟ್ರೋಫಿ ಗೆದ್ದು ಅದಾಗಲೇ ಒಂದು ದಶಕವೇ ಆಗಿದೆ. 2013ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ 8 ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡ ಭಾಗವಹಿಸಿದೆ. ಆದರೆ ಎಲ್ಲದರಲ್ಲಿಯೂ ಅನುಭವಿಸಿದ್ದು ಆಘಾತವನ್ನೇ!. ಇದೀಗ ಭಾರತ ಆಡಲು ಸಜ್ಜಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ 9ನೇ ಐಸಿಸಿ ಟೂರ್ನಿಯಾಗಿದ್ದು ಇದರಲ್ಲಿ ಗೆದ್ದು ಐಸಿಸಿ ಟ್ರೋಫಿಯ ಬರ ನೀಗಿಸಿಕೊಳ್ಳಲಿದೆಯಾ ಎಂಬುದು ಸದ್ಯದ ಪ್ರಶ್ನೆ.
ಇನ್ನು ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನು ಗೆದ್ದರೆ ನಾಯಕನಾಗಿ ರೋಹಿತ್ ಶರ್ಮಾ ಅಪರೂಪದ ದಾಖಲೆ ಮಾಡುವ ಅವಕಾಶ ಹೊಂದಿದ್ದಾರೆ. ಭಾರತದ ಶ್ರೇಷ್ಠ ನಾಯಕರಾದ ಎಂಎಸ್ ಧೋನಿ, ಕಪಿಲ್ ದೇವ್ ಮಾಡಿದ ಸಾಧನೆಗೆ ಸಮನಾದ ಸಾಧನೆ ಮಾಡುವ ಅದ್ಭುತ ಅವಕಾಶ ರೋಹಿತ್ ಶರ್ಮಾ ಮುಂದಿದೆ.

ಭಾರತ ತಂಡದ ಪರವಾಗಿ ಐಸಿಸಿ ಟೂರ್ನಿಯನ್ನು ಮೊದಲ ಬಾರಿಗೆ ಗೆದ್ದುಕೊಂಡ ನಾಯಕ ಕಪಿಲ್‌ದೇವ್. 1983ರ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಕಪಿಲ್ ಈ ಸಾಧನೆ ಮಾಡಿದ್ದರು. ಅದಾದ ಬಳಿಕ 2011ರಲ್ಲಿ ಎಂಎಸ್ ಧೋನಿ ನೇತೃತ್ವದಲ್ಲಿ 28 ವರ್ಷಗಳ ಬಳಿಕ ಭಾರತ ಮತ್ತೊಮ್ಮೆ ಈ ಸಾಧನೆ ಮಾಡಿತ್ತು. ಆದರೆ ಅದಕ್ಕೂ ಮುನ್ನ 2007ರಲ್ಲಿ ಧೋನಿ ನಾಯಕತ್ವದಲ್ಲಿಯೇ ಐಸಿಸಿ ಟಿ20 ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯನ್ನು ಭಾರತ ಗೆದ್ದುಕೊಂಡಿತ್ತು. ನಂತರ ಧೋನಿ ನಾಯಕತ್ವದಲ್ಲಿ 2013ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಕೂಡ ಗೆಲ್ಲುವ ಮೂಲಕ ಧೋನಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.
ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯನ್ನು ಟೀಮ್ ಇಂಡಿಯಾ ಗೆದ್ದರೆ ಕಪಿಲ್ ದೇವ್ ಹಾಗೂ ಎಂಎಸ್ ಧೋನಿ ಬಳಿಕ ಐಸಿಸಿ ಜಾಗತಿಕ ಟೂರ್ನಿಯನ್ನು ಗೆದ್ದ ಭಾರತದ ಮೂರನೇ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರವಾಗಲಿದ್ದಾರೆ. ಈ ಮೂಲಕ ಭಾರತ ಒಂದು ದಶಕದ ಐಸಿಸಿ ಟ್ರೋಫಿಯ ಬರವನ್ನೂ ನೀಗಿಸಿಕೊಂಡಂತಾಗುತ್ತದೆ.
ಇನ್ನು ಕಳೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿಯೂ ಭಾರತ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು. ಆದರೆ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತ ಕಳಪೆ ಪ್ರದರ್ಶನ ನೀಡುವ ಮೂಲಕ ಸೋಲು ಅನುಭವಿಸಿತು. ಇದೀಗ ಸತತ ಎರಡನೇ ಬಾರಿಗೆ ಭಾರತ ಈ ಪ್ರತಿಷ್ಠಿತ ಟೂರ್ನಿತ ಫೈನಲ್‌ಗೆ ಪ್ರವೇಶಿಸಿದ್ದು ದೀರ್ಘ ಮಾದರಿಯಲ್ಲಿ ಚಾಂಪಿಯನ್ ಪಟ್ಟಕ್ಕೇರುವ ಅದ್ಭುತ ಅವಕಾಶವನ್ನು ಹೊಂದಿದೆ.
2013ರ ಬಳಿಕ ICC ಟೂರ್ನಿಗಳಲ್ಲಿ ಭಾರತದ ಸಾಧನೆ
ಟಿ20 ವಿಶ್ವಕಪ್ 2014: ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸೋಲು
ICC ಏಕದಿನ ವಿಶ್ವಕಪ್ 2015: ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ ಸೋಲು
ಟಿ20 ವಿಶ್ವಕಪ್ 2016: ವೆಸ್ಟ್ ಇಂಡೀಸ್ ವಿರುದ್ಧ ಸೆಮಿಫೈನಲ್‌ನಲ್ಲಿ ಸೋಲು
ICC ಚಾಂಪಿಯನ್ಸ್ ಟ್ರೋಫಿ 2017: ಪಾಕಿಸ್ತಾನದ ವಿರುದ್ಧ ಫೈನಲ್‌ನಲ್ಲಿ ಸೋಲು
ICC ಏಕದಿನ ವಿಶ್ವಕಪ್ 2019: ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಸೋಲು
ಟಿ20 ವಿಶ್ವಕಪ್ 2021: ಮೊದಲ ಸುತ್ತಿನಲ್ಲಿ ನಿರ್ಗಮನ
WTC ಫೈನಲ್ 2021: ನ್ಯೂಜಿಲೆಂಡ್ ವಿರುದ್ಧ ಫೈನಲ್‌ನಲ್ಲಿ ಸೋಲು
T20 ವಿಶ್ವಕಪ್ 2022: ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಸೋಲು