ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಅಂತ್ಯವಾಗಿದ್ದು ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಪಂದ್ಯದ ಮುಕ್ತಾಯದ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ಎರಡು ತಂಡಗಳಿಗೂ ಐಸಿಸಿ ತಂಡ ವಿಧಿಸಿದೆ. ಅದರಲ್ಲೂ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ 115% ದಂಡಕ್ಕೆ ಗುರಿಯಾಗಿದ್ದಾರೆ.
ಈ ಫೈನಲ್ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ನಡೆಸಿದ ಕಾರಣಕ್ಕೆ ಇಡೀ ಭಾರತ ತಂಡದ ಆಟಗಾರರು ಪಂದ್ಯದ ಸಂಭಾವನೆಯ 100 ಶೇಕಡಾ ದಂಡಕ್ಕೆ ಗುರಿಯಾಗಿದ್ದಾರೆ. ಆಸ್ಟ್ರೇಲಿಯಾ ತಂಡ ಕೂಡ ನಿಧಾನಗತಿಯ ಬೌಲಿಂಗ್‌ನ ಕಾರಣಕ್ಕೆ 80 ಶೇಕಡಾ ದಂಡ ಕಟ್ಟಬೇಕಿದೆ. ಇದರ ಜೊತೆಗೆ ಟೀಮ್ ಇಂಡಿಯಾದ ಯುವ ಆಟಗಾರ ಶುಬ್ಮನ್ ಗಿಲ್ ಮೂರನೇ ಅಂಪೈರ್ ನಿರ್ಧಾರಕ್ಕೆ ಅಸಮ್ಮತಿ ಸೂಚಿಸಿದ ಕಾರಣಕ್ಕೆ 15 ಶೇಕಡಾ ದಂಡಕ್ಕೆ ಗುರಿಯಾಗಿದ್ದಾರೆ.

ಶುಬ್ಮನ್ ಗಿಲ್‌ಗೆ ದಂಡ ವಿಧಿಸಿರುವ ವಿಚಾರವಾಗಿ ನೀಡಿರುವ ಪ್ರಕಟಣೆಯಲ್ಲಿ ಐಸಿಸಿ ನಿರ್ಧಾರದ ಬಗ್ಗೆ ಕಾರಣ ನೀಡಿದೆ. "ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.7 ಅನ್ನು ಶುಬ್ಮನ್ ಗಿಲ್ ಉಲ್ಲಂಘಿಸಿರುವುದು ಕಂಡುಬಂದಿದೆ. ಈ ನೀತಿಸಂಹಿತೆ ಅಂತಾರಾಷ್ಟ್ರೀಯ ಕ್ರಿಕೆಟ್ ಬಗ್ಗೆ ಸಾರ್ವಜನಿಕವಾಗಿ ಟೀಕೆ, ಅಂತರಾಷ್ಟ್ರೀಯ ಪಂದ್ಯದ ಬಗ್ಗೆ ಅನುಚಿತ ಪ್ರತಿಕ್ರಿಯೆಗೆ ಸಂಬಂಧಿಸಿದಾಗಿದೆ" ಎಂದು ಐಸಿಸಿ ಉಲ್ಲೇಖಿಸಿದೆ.
"ಈ ಘಟನೆ ನಾಲ್ಕನೇ ದಿನದಾಟದ ಬಳಿಕ ನಡೆದಿದ್ದು ಶುಬ್ಮನ್ ಗಿಲ್ ಎರಡನೇ ಇನ್ನಿಂಗ್ಸ್‌ನಲ್ಲಿ ತಮ್ಮ ಔಟ್ ನಿರ್ಧಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದರು" ಎಂದು ಐಸಿಸಿ ಈ ನಿರ್ಧಾರದ ಬಗ್ಗೆ ವಿವರಣೆ ನೀಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟುವ ವೇಳೆ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಅವರ ಕ್ಯಾಚನ್ನು ಕ್ಯಾಮರೂನ್ ಗ್ರೀನ್ ಪಡೆದುಕೊಂಡಿದ್ದರು. ಥರ್ಡ್ ಅಂಪೈರ್ ಈ ಕ್ಯಾಚ್ ಪಡೆದ ವಿಡಿಯೋವನ್ನು ಪರಿಶೀಲಿಸಿ ಚೆಂಡು ನೆಲಕ್ಕೆ ತಾಗುತ್ತಿರುವಂತೆ ಕಾಣಿಸಿದರೂ ಔಟ್ ಎಂದ ತೀರ್ಪು ನೀಡಿದ್ದರು. ಈ ತೀರ್ಪಿನ ಬಗ್ಗೆ ಗಿಲ್ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಿದ್ದರು.
ಇನ್ನು ನಿಧಾನಗರಿಯ ಬೌಲಿಂಗ್ ಕಾರಣಕ್ಕೆ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಎರಡು ತಂಡಗಳಿಗೂ ಐಸಿಸಿ ದಂಡ ವಿಧಿಸಿದೆ. ಅದರಲ್ಲೂ ಭಾರತ ತಂಡದ ಆಟಗಾರರಿಗೆ ಪಂದ್ಯದ ಸಂಭಾವನೆಯ ಶೇಕಡಾ 100ರಷ್ಟು ದಂಡವನ್ನು ವಿಧಿಸಲಾಗಿದೆ. ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಕೂಡ 80 ಶೇಕಡಾ ದಂಡವನ್ನು ವಿಧಿಸಲಾಗಿದೆ.
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಮೈಕೆಲ್ ನೆಸರ್, ಮಾರ್ಕಸ್ ಹ್ಯಾರಿಸ್
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಇಶಾನ್ ಕಿಶನ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್