ಭಾರತದ ವಿರುದ್ಧ ಮುಂದುವರಿದ ಸ್ಟೀವ್ ಸ್ಮಿತ್ ಅಬ್ಬರ: ರಿಕಿ ಪಾಂಟಿಂಗ್ ದಾಖಲೆ ಮುರಿದ ಆಸಿಸ್ ಆಟಗಾರ
ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಶುಕ್ರವಾರ 31ನೇ ಟೆಸ್ಟ್ ಶತಕ ಸಿಡಿಸಿದ್ದು ಹಲವು ಮೈಲಿಗಲ್ಲುಗಳನ್ನು ದಾಟಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದ ಆಸಿಸ್ ಸ್ಟಾರ್ ಸ್ಮಿತ್ ಟ್ರೆವಿಸ್ ಹೆಡ್ ಜೊತೆಗೂಡಿ ಭಾರೀ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ಇನ್ನು ಈ ಶತಕದೊಂದಿಗೆ ಸ್ಟೀವ್ ಸ್ಮಿತ್ ಆಸಿಸ್ ದಿಗ್ಗಜ ರಿಕಿ ಪಾಂಟಿಂಗ್ ದಾಖಲೆಯೊಂದನ್ನು ಮುರಿದಿದ್ದಾರೆ.
ಮೊದಲ ದಿನದಾಟದ ಅಂತ್ಯದಲ್ಲಿ 227 ಎಸೆತಗಳನ್ನು ಎದುರಿಸಿ 95 ರನ್‌ಗಳನ್ನು ಗಳಿಸಿ ಅಜೇಯವಾಗುಳಿದಿದ್ದ ಸ್ಮಿತ್ ಎರಡನೇ ದಿನದಾಟದ ಮೊದಲ ಎರಡು ಎಸೆತಗಳಲ್ಲಿಯೇ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಟ್ರೆವೊಸ್ ಹೆಡ್ ಜೊತೆಗೆ 285 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ ಸ್ಮಿತ್. ಹೆಡ್ 163 ರನ್‌ಗಳಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ ಈ ಜೊತೆಯಾಟ ಬೇರ್ಪಟ್ಟಿದೆ. ಉಸ್ಮಾನ್ ಖವಾಜ, ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲ್ಯಾಬುಶೇನ್ ವಿಕೆಟ್‌ಗಳನ್ನು ಆರಂಭಿಕ ಸೆಶನ್‌ನಲ್ಲಿ ಕಳೆದುಕೊಂಡ ಬಳಿಕ ಈ ಜೊತೆಯಾಟ ಆಸಿಸ್ ಪಡೆಗೆ ಆಧಾರವಾಗಿದ್ದಲ್ಲದೆ ದೊಡ್ಡ ಮೊತ್ತದತ್ತ ಹೆಜ್ಜೆಯಿಡಲು ಕಾರಣವಾಗಿದೆ.

ಸ್ಟೀವ್ ಸ್ಮಿತ್ ಸಿಡಿಸಿದ ಈ ಶತಕ ಭಾರತದ ವಿರುದ್ಧ ಟೆಸ್ಟ್‌ನಲ್ಲಿ ಸಿಡಿಸಿದ 9ನೇ ಶತಕವಾಗಿದೆ. ಈ ಮೂಲಕ ಭಾರತದ ವಿರುದ್ಧ ಆಸ್ಟ್ರೇಲಿಯಾ ಆಟಗಾರನೋರ್ವ ಸಿಡಿಸಿದ ಅತಿ ಹೆಚ್ಚಿನ ಶತಕ ಇದಾಗಿದೆ. ಇದಕ್ಕೂ ಮುನ್ನ ರಿಕಿ ಪಾಂಟಿಂಗ್ ಹೆಸರಿನಲ್ಲಿ ಈ ದಾಖಲೆಯಿದ್ದು ಅದನ್ನು ಮುರಿದಿದ್ದಾರೆ. ಇನ್ನು ಭಾರತ ಹಾಗೂ ಆಸ್ಟ್ರೇಲಿಯಾ ತಮಡಗಳ ಮುಖಾಮುಖಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದು ಸಚಿನ್ 11 ಶತಕ ಸಿಡಿಸಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಮುಖಾಮುಖಿಯಲ್ಲಿ ಅತಿ ಹೆಚ್ಚು ಶತಕಗಳಿಸಿದ ಆಟಗಾರರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಜೊತೆಗೆ ಭಾರತದ ವಿರಾಟ್ ಕೊಹ್ಲಿಯನ್ನು ಕೂಡ ಹಿಂದಿಕ್ಕಿದ್ದಾರೆ ಸ್ಟೀವ್ ಸ್ಮಿತ್. ಭಾರತದ ವಿರುದ್ಧ 19 ಟೆಸ್ಟ್ ಪಂದ್ಯಗಳನ್ನಾಡಿರುವ ಸ್ಮಿತ್ 36 ಇನ್ನಿಂಗ್ಸ್‌ಗಳಲ್ಲಿ 9 ಶತಕ ಸಿಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ 39 ಟೆಸ್ಟ್ ಪಂದ್ಯಗಳನ್ನಾಡಿದ್ದು 11 ಶತಕ ಹಾಗೂ 16 ಅರ್ಧ ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ.
ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ದಿನದಾಟದಲ್ಲಿ ಕೇವಲ ಮೂರು ವಿಕೆಟ್‌ಗಳನ್ನು ಪಡೆದಿದ್ದ ಭಾರತ ಎರಡನೇ ದಿನದಾಟದ ಮೊದಲ ಸೆಶನ್‌ನಲ್ಲಿ ಟ್ರೆವಿಸ್ ಹೆಡ್ ವಿಕೆಟ್ ಕಬಳಿಸುವ ಮೂಲಕ ಭಾರತ ಮೊದಲ ಯಶಸ್ಸು ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications