WTC ವಿಶ್ವಕಪ್‌ನಷ್ಟು ಪ್ರಮುಖವಲ್ಲ, ಇಷ್ಟು ಪ್ರಚಾರದ ಅಗತ್ಯವಿರಲಿಲ್ಲ: ಗೌತಮ್ ಗಂಭೀರ್

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಹೋರಾಡಲು ಅಂತಿಮ ಹಂತದ ಸಿದ್ಧತೆಯನ್ನು ನಡೆಸುತ್ತಿದ್ದರೆ ಅಭಿಮಾನಿಗಳಿಗೆ ಈ ಮಹತ್ವದ ಪಂದ್ಯದ ಮೇಲಿನ ಕುತೂಹಲ ಹೆಚ್ಚಾಗುತ್ತಿದೆ. ಚೊಚ್ಚಲ ಬಾರಿಗೆ ನಡೆಯುತ್ತಿರುವ ಈ ಟೆಸ್ಟ್ ಚಾಂಪಿಯನ್‌ಶಿಪ್‌ನ ಚಾಂಪಿಯನ್ ಪಟ್ಟ ಯಾರ ಮುಡಿಗೇರಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಆದರೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಇದಕ್ಕೆ ವ್ಯತಿರಿಕ್ತವಾದ ಹೇಳಿಕೆಯನ್ನು ನೀಡಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ದೊರೆಯುತ್ತಿರುವ ಪ್ರಚಾರಕ್ಕೆ ಗೌತಮ್ ಗಂಭೀರ್ ಅಚ್ಚರಿಯನ್ನು ವ್ಯಕ್ತಪಡಿಸಿದ್ದು ಇದಕ್ಕೆ ಇಷ್ಟೊಂದು ಪ್ರಮಾಣದ ಪ್ರಚಾರ ನೀಡುವ ಅವಶ್ಯಕತೆಯಿರಲಿಲ್ಲ ಎಂದಿದ್ದಾರೆ. ಜೊತೆಗೆ ವಿಶ್ವಕಪ್‌ನಷ್ಟು ಪ್ರಮುಖವಾದ ಪಂದ್ಯ ಇದಲ್ಲ ಎಂದು ಗೌತಮ್ ಗಂಭೀರ್ ನೇರವಾಗಿ ಹೇಳಿದ್ದಾರೆ.
ಆಜ್‌ತಕ್ ಜೊತೆಗೆ ಮಾತನಾಡಿದ ಸಂದರ್ಭದಲ್ಲಿ ಗಂಭೀರ್ ಈ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ. "ಇದು ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್. ಖಂಡಿತವಾಗಿಯೂ ನೀವು ಗೆಲುವನ್ನು ಸಾಧಿಸಲು ಬಯಸುತ್ತೀರಿ. ಹಾಗಾಗಿ ಎರಡೂ ತಂಡಗಳು ಗೆಲುವಿಗಾಗಿ ತೀವ್ರ ಪೈಪೋಟಿಯನ್ನು ನಡೆಸಲಿವೆ. ಆದರೆ ಇದನ್ನು ವಿಶ್ವಕಪ್ ಜೊತೆಗೆ ಹೋಲಿಕೆ ಮಾಡುವುದು ಉತ್ಪ್ರೇಕ್ಷೆಯಾಗುತ್ತದೆ" ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ
"ಆದರೆ ಕೇವಲ ಟೆಸ್ಟ್ ಪಂದ್ಯಗಳಲ್ಲಿ ಮಾತ್ರವೇ ಭಾಗಿಯಾಗುತ್ತಿರುವ ಆಟಗಾರರು ಇದನ್ನು ವಿಶ್ವಕಪ್‌ನಂತೆ ಉತ್ಪ್ರೇಕ್ಷೆ ಮಾಡುತ್ತಿದ್ದಾರೆ. ಎಲ್ಲಾ ಮಾದರಿಯಲ್ಲೂ ಆಡುವ ಆಟಗಾರರು ಇದನ್ನು ಅಷ್ಟು ದೊಡ್ಡ ಮಟ್ಟದಲ್ಲಿ ಪರಿಗಣಿಸದಿರಬಹುದು. ಯಾಕೆಂದರೆ ಶೀಘ್ರದಲ್ಲಿಯೇ ವಿಶ್ವಕಪ್ ಮತ್ತೆ ಬರಲಿದೆ ಎಂದು ಅವರಿಗೆ ಗೊತ್ತಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ವರ್ಷದಿಂದ ವರ್ಷ ಇದು ನಡೆಯುತ್ತಿದ್ದರೆ ಇದಕ್ಕೆ ಹೆಚ್ಚಿನ ಪ್ರಚಾರ ನೀಡುವ ಅಗತ್ಯವಿರುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ ಗೌತಮ್ ಗಂಭೀರ್.
ಇನ್ನು ಇದೇ ಸಂದರ್ಭದಲ್ಲಿ ವಿಶ್ವಕಪ್ ಯಾಕೆ ಬಹಳ ಮುಖ್ಯವಾಗುತ್ತದೆ ಎಂದು ಕೂಡ ಗಂಭೀರ್ ವಿವರಿಸಿದ್ದಾರೆ. ವಿಶ್ವಕಪ್‌ಅನ್ನು ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಈ ಅವಧಿಯಲ್ಲಿ ಎಲ್ಲಾ ತಂಡಗಳಲ್ಲಿಯೂ ಸಾಕಷ್ಟು ಬದಲಾವಣೆಗಳು ನಡೆದಿರುತ್ತವೆ. ವಿಶ್ವಕಪ್ ಮೇಲೆ ಅಷ್ಟೊಂದು ಭಾವನಾತ್ಮಕ ನಂಟು ಹೊಂದಲು ಆ ನಾಲ್ಕು ವರ್ಷಗಳ ಸುದೀರ್ಘ ಅಂತರ ಕಾರಣ ಎಂದು ಗೌತಮ್ ಗಂಭೀರ್ ಹೇಳಿಕೆಯನ್ನು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications