WTC 2023: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ಸನಿಹ: ಯಾಮಾರಿದರೆ ಆಸ್ಟ್ರೇಲಿಯಾ ತಂಡವೇ ಹೊರಗೆ!

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲೂ ಗೆಲುವು ಸಾಧಿಸಿದ ಭಾರತ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ದೆಹಲಿಯಲ್ಲಿ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳುವ ಸನಿಹಕ್ಕೆ ಬಂದು ನಿಂತಿದೆ. ಉಳಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತ ಕನಿಷ್ಠ ಒಂದು ಪಂದ್ಯ ಗೆದ್ದರು ಅಥವಾ ಎರಡೂ ಪಂದ್ಯಗಳನ್ನು ಡ್ರಾ ಮಾಡಿಕೊಂಡರೂ ಅದು ಫೈನಲ್‌ಗೆ ಅರ್ಹತೆ ಪಡೆಯಲಿದೆ.
ಆದರೆ ಭಾರತ ಏನಾದರೂ ಉಳಿದ ಎರಡೂ ಪಂದ್ಯಗಳನ್ನು ಗೆದ್ದರೆ ಆಸ್ಟ್ರೇಲಿಯಾ ತಂಡ ಸಂಕಷ್ಟಕ್ಕೆ ಸಿಲುಕಲಿದೆ. ಭಾರತ 4-0 ಅಂತರದಲ್ಲಿ ಸರಣಿಯನ್ನು ಗೆದ್ದರೆ, ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಬರಲು ಶ್ರೀಲಂಕಾ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿ ಫಲಿತಾಂಶದ ಮೇಲೆ ಅವಲಂಬನೆಯಾಗಬೇಕಾಗುತ್ತದೆ.
ಭಾರತ ತಂಡ ಎರಡನೇ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಿಂದಲೇ ಹೊರಬಿದ್ದಿದೆ. ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ ತಂಡಗಳು ಮಾತ್ರ ಫೈನಲ್‌ಗೆ ತಲುಪಲು ಸ್ಪರ್ಧೆಯಲ್ಲಿ ಉಳಿದುಕೊಂಡಿವೆ.

ಶ್ರೀಲಂಕಾಗೆ ಇದೆ ಅವಕಾಶ
ಒಂದು ವೇಳೆ ಭಾರತ ಆಸ್ಟ್ರೇಲಿಯಾ ವಿರುದ್ಧ 4-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದರೆ, ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಆಸ್ಟ್ರೇಲಿಯಾ ಎರಡನೇ ಸ್ಥಾನಕ್ಕೆ ಕುಸಿಯಲಿದೆ.
ಶ್ರೀಲಂಕಾ ನ್ಯೂಜಿಲೆಂಡ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು, ಎರಡೂ ಪಂದ್ಯಗಳಲ್ಲಿ ಗೆದ್ದರೆ, ಶ್ರೀಲಂಕಾ ಫೈನಲ್ ತಲುಪುವ ಸಾಧ್ಯತೆ ಹೆಚ್ಚಾಗಿದೆ. ಆಸ್ಟ್ರೇಲಿಯಾ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡರೂ ಶ್ರೀಲಂಕಾ ಫೈನಲ್ ತಲುಪುವ ಹಾದಿ ಕೊನೆಯಾಗಲಿದ್ದು, ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್‌ನಲ್ಲಿ ಸೆಣೆಸಲಿವೆ.

ಅಗ್ರಸ್ಥಾನಕ್ಕೇರಲು ಭಾರತಕ್ಕೆ ಅವಕಾಶ
ದೆಹಲಿ ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ಭಾರತ 64.06 ಗೆಲುವಿನ ಶೇಕಡಾವಾರು ಪ್ರಮಾಣ (ಪಿಸಿಟಿ)ಯೊಂದಿಗೆ ಎರಡನೇ ಸ್ಥಾನದಲ್ಲಿ ಭದ್ರವಾಗಿದೆ. ಎರಡನೇ ಟೆಸ್ಟ್ ಆರಂಭಕ್ಕೆ ಮುನ್ನ ಭಾರತ 61.67 ಪಿಸಿಟಿ ಹೊಂದಿತ್ತು.
ದೆಹಲಿ ಟೆಸ್ಟ್‌ಗೆ ಮುನ್ನ 70.83 ಪಿಸಿಟಿಯೊಂದಿಗೆ ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಎರಡನೇ ಟೆಸ್ಟ್ ಸೋಲಿನ ಬಳಿಕ 66.67 ಪಿಸಿಟಿಗೆ ಕುಸಿದಿದೆ. ಭಾರತದ ವಿರುದ್ಧದ ಸರಣಿಗೆ ಮುನ್ನ ಅದು 75.56 ಪಿಸಿಟಿ ಹೊಂದಿತ್ತು. ಆದರೂ ಅಗ್ರಸ್ಥಾನದಲ್ಲಿ ಮುಂದುವರೆಯುವಲ್ಲಿ ಯಶಸ್ವಿಯಾಗಿದೆ. ಶ್ರೀಲಂಕಾ 53.33 ಪಿಸಿಟಿಯೊಂದಿಗೆ ಮೂರನೇ ಸ್ಥಾನದಲ್ಲಿದೆ.
ಒಂದು ವೇಳೆ ಭಾರತ ಉಳಿದ ಎರಡು ಟೆಸ್ಟ್ ಪಂದ್ಯಗಳನ್ನು ಸೋತು ಶ್ರೀಲಂಕಾ ನ್ಯೂಜಿಲೆಂಡ್ ವಿರುದ್ಧ ಎರಡೂ ಟೆಸ್ಟ್ ಪಂದ್ಯಗಳನ್ನು ಗೆದ್ದರೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರೇಸ್‌ನಿಂದ ಹೊರಬೀಳಲಿದೆ. ಭಾರತ ಇನ್ನೊಂದು ಪಂದ್ಯವನ್ನು ಗೆದ್ದರೂ ಫೈನಲ್‌ಗೆ ಲಗ್ಗೆಯಿಡಲಿದೆ. ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲಿ ಒಂದು ಪಂದ್ಯ ಡ್ರಾನಲ್ಲಿ ಅಂತ್ಯವಾದರೆ, ಶ್ರೀಲಂಕಾ ನ್ಯೂಜಿಲೆಂಡ್ ವಿರುದ್ಧ ಒಂಡು ಟೆಸ್ಟ್‌ನಲ್ಲಿ ಸೋತರೂ, ಭಾರತ ಆಸ್ಟ್ರೇಲಿಯಾ ತಂಡಗಳು ಫೈನಲ್‌ಗೆ ಪ್ರವೇಶ ಪಡೆಯಲಿವೆ.

ಕೆನ್ನಿಂಗ್ಟನ್ ಓವಲ್‌ನಲ್ಲಿ ಫೈನಲ್ ಪಂದ್ಯ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಈಗಾಗಲೇ ಮುಹೂರ್ತ ನಿಗದಿಯಾಗಿದೆ. ಜೂನ್ 7 ರಂದು ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಪ್ರತಿಷ್ಠಿತ ಕಪ್‌ಗಾಗಿ ವಿಶ್ವದ ಎರಡು ಅಗ್ರ ಟೆಸ್ಟ್ ತಂಡಗಳು ಸೆಣೆಸಲಿವೆ. ಮಳೆ ಪಂದ್ಯಕ್ಕೆ ಅಡ್ಡಿಪಡಿಸುವ ಸಮಸ್ಯೆಯನ್ನು ಎದುರಿಸಲು ಒಂದು ದಿನವನ್ನು ಹೆಚ್ಚುವರಿಯಾಗಿ ನಿಗದಿಪಡಿಸಲಾಗಿದೆ.
ಕಳೆದ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ-ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದವು, ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯುಂಟಾಗಿದ್ದರೂ ನ್ಯೂಜಿಲೆಂಡ್ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications