19ನೇ ಆವೃತ್ತಿಯ ಐಪಿಎಲ್‌ಗೆ ದಿನಗಣನೆ ಆರಂಭವಾಗಿದೆ. ಈ ವೇಳೆ ಆರ್‌ಸಿಬಿ ಆಟಗಾರರು ಸಹ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ. ತಂಡದ ಸ್ಟಾರ್ ಆಟಗಾರರು ಸಹ ತಂಡದ ಭಾಗವಾಗಿದ್ದು, ಅಭ್ಯಾಸ ಆರಂಭಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅಭ್ಯಾಸ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆ ಒಬ್ಬ ಆಟಗಾರ ಕಾಣಿಸಿಕೊಂಡಿಲ್ಲ. ಆತ ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ತನ್ನ ಅಭ್ಯಾಸವನ್ನು ಆರಂಭಿಸಿದೆ. ಮಾರ್ಚ್ 18 ರಿಂದ ಅಭ್ಯಾಸ ಶಿಬಿರಗಳು ಆರಂಭವಾಗಿವೆ. ಈ ಶಿಬಿರದಲ್ಲಿ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಕೃನಾಲ್ ಪಾಂಡ್ಯ, ಜಿತೇಶ್ ಶರ್ಮಾ ಸೇರಿದಂತೆ ಹಲವು ಆಟಗಾರರು ಭಾಗವಹಿಸಿದ್ದಾರೆ. ಆದರೆ ಕಳೆದ ಆವೃತ್ತಿಯಲ್ಲಿ ಬಿಗುವಿನ ದಾಳಿ ನಡೆಸಿ ತಂಡ ಚಾಂಪಿಯನ್ ಆಗುವಲ್ಲಿ ಮಹತ್ವದ ಕಾಣಿಕೆ ನೀಡಿದ್ದ ಬೌಲರ್ ಯಶ್ ದಯಾಳ್ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅವರ ಅನುಪಸ್ಥಿತಿಯ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಆರ್‌ಸಿಬಿ ಫ್ರಾಂಚೈಸಿ ತನ್ನ ಅಭ್ಯಾಸ ಶಿಬಿರದ ವಿಡಿಯೋಗಳನ್ನು ಹಾಗೂ ಫೋಟೋಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಆದರೆ ಈ ವಿಡಿಯೋಗಳಲ್ಲಿ ಎಡಗೈ ವೇಗದ ಬೌಲರ್ ಯಶ್ ದಯಾಳ್ ಕಾಣಿಸಿಕೊಂಡಿಲ್ಲ. ಇವರು ಕಾಣಿಸಿಕೊಳ್ಳದೇ ಇರುವುದು ಪ್ರಶ್ನೆಗಳನ್ನು ಹುಟ್ಟಿಹಾಕಿದೆ.
ಇತ್ತೀಚಿಗೆ ಯಶ್ ದಯಾಳ್ ಮದುವೆ ಸುದ್ದಿ ಹೊರ ಬಂದಿತ್ತು. ಅವರ ಪತ್ನಿ ಶ್ವೇತಾ ಪುಂಡಿರ್ ಇನ್‌ಸ್ಟಾಗ್ರಾಮ್‌ನಲ್ಲಿ ಯಶ್ ಅಭ್ಯಾಸ ನಡೆಸುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ ಅವರು ಬೆಂಗಳೂರು ಕ್ಯಾಂಪ್‌ನ ಭಾಗವಾಗಿಲ್ಲ. ಈ ಬಗ್ಗೆ ಆರ್‌ಸಿಬಿ ಮ್ಯಾನೇಜ್ಮೆಂಟ್‌ನಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಯಶ್ ದಯಾಳ್ ಅವರನ್ನು ಕಳೆದ ಆವೃತ್ತಿಯಲ್ಲಿ ಫ್ರಾಂಚೈಸಿ 5 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿತ್ತು. ಇವರು ಕಳೆದ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಆದರೆ ಇವರು ಕಳೆದ ಬಾರಿಯ ಐಪಿಎಲ್ ಫೈನಲ್ ಪಂದ್ಯದ ಬಳಿಕ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಅಂದಿನಿಂದ ಕ್ರಿಕೆಟ್ ಮೈದಾನದಿಂದ ಯಶ್ ದೂರವಿದ್ದಾರೆ. ಉತ್ತರ ಪ್ರದೇಶದ ದೇಶೀಯ ತಂಡವು ಅವರನ್ನು ಇಡೀ ಋತುವಿಗೆ ಆಯ್ಕೆ ಮಾಡಿರಲಿಲ್ಲ. ಇವರು ಕಳೆದ ವರ್ಷ ಕಾನೂನು ಪ್ರಕರಣದಿಂದಾಗಿ ಸುದ್ದಿಯಾಗಿದ್ದರು.

ಯಶ್ ದಯಾಳ್ ಈ ಬಾರಿ ಆರ್‌ಸಿಬಿ ಪರ ಕಣಕ್ಕೆ ಇಳಿಯುತ್ತಾರೋ ಇಲ್ಲವೋ ಎಂಬುದು ಇನ್ನು ಪ್ರಶ್ನೆಯಾಗಿಯೇ ಉಳಿದಿದೆ. ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ವೇಗಿ ಭುವಿ ಸೇರಿದಂತೆ ಹಲವು ಆಟಗಾರರು ಪ್ರಶಸ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ. ಆರ್‌ಸಿಬಿ ಈ ಬಾರಿ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕೆ ಇಳಿಯಲಿದೆ. ಬೆಂಗಳೂರು ತಂಡ ತನ್ನ ಮೊದಲ ಪಂದ್ಯವನ್ನು ತವರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಆಡಲಿದೆ. ಸಂಪ್ರದಾಯದಂತೆ ಹಾಲಿ ಚಾಂಪಿಯನ್ ಮೊದಲ ಪಂದ್ಯವನ್ನು ಆಡಲಿದ್ದು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕಾದಾಟ ನಡೆಸಲಿದೆ.