RCB Yash Dayal: ಐಪಿಎಲ್ 19ನೇ ಸೀಸನ್ ಮಾರ್ಚ್ 28ರಿಂದ ಆರಂಭವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಎಡಗೈ ವೇಗಿ ಯಶ್ ದಯಾಳ್ ಅವರು ಈ ಸೀಸನ್‌ನಿಂದ ಹೊರಗುಳಿದಿದ್ದಾರೆ ಎಂದು ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಖಚಿತಪಡಿಸಿದ್ದಾರೆ.
ಯಶ್ ದಯಾಳ್ ಅವರು ಫ್ರಾಂಚೈಸಿಯೊಂದಿಗೆ ಒಪ್ಪಂದದಲ್ಲಿದ್ದರೂ ಸಹ, ಈ ಬಾರಿಯ ಐಪಿಎಲ್ ಅಭಿಯಾನದಲ್ಲಿ ತಂಡವನ್ನು ಸೇರಿಕೊಳ್ಳುತ್ತಿಲ್ಲ. ಯಶ್ ದಯಾಳ್ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಇದ್ದು, ಇದೀಗ ಅವರು ಕಾನೂನು ಪ್ರಕ್ರಿಯೆಯಲ್ಲಿದ್ದಾರೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೊ ಬೊಬಾಟ್ ತಿಳಿಸಿದ್ದಾರೆ.

ಟೂರ್ನಿ ಆರಂಭಕ್ಕೂ ಮುನ್ನ ನಡೆಯುತ್ತಿರುವ ಆರ್‌ಸಿಬಿ ತರಬೇತಿ ಶಿಬಿರಗಳಲ್ಲಿ ದಯಾಳ್ ಕಾಣಿಸಿಕೊಳ್ಳದಿದ್ದಾಗ ಅವರ ಅನುಪಸ್ಥಿತಿಯ ಬಗ್ಗೆ ವದಂತಿಗಳು ಹಬ್ಬಿದ್ದವು. ಇದೀಗ ಆ ವದಂತಿಗಳಿಗೆ ಅಧಿಕೃತ ತೆರೆ ಬಿದ್ದಂತಾಗಿದೆ. ಹರಾಜಿಗೂ ಮುನ್ನ ಆರ್‌ಸಿಬಿ ತಂಡವು ದಯಾಳ್ ಅವರನ್ನು ಉಳಿಸಿಕೊಂಡಾಗ ಅಭಿಮಾನಿಗಳಲ್ಲಿ ಮತ್ತು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗಳು ಹಾಗೂ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಈ ವೇಗಿಯ ಅನುಪಸ್ಥಿತಿಯು ಆರ್‌ಸಿಬಿ ಬೌಲಿಂಗ್ ವಿಭಾಗಕ್ಕೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ. ಯಶ್ ದಯಾಳ್ ಅವರ ಬದಲಿ ಆಟಗಾರನಾಗಿ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಕುರಿತು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಇನ್ನು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಯಶ್ ದಯಾಳ್ ಈ ಬಾರಿ ತಂಡವನ್ನು ಸೇರಿಕೊಳ್ಳುತ್ತಿಲ್ಲ ಎಂಬುದನ್ನು ನಾನು ಖಚಿತಪಡಿಸುತ್ತಿದ್ದೇನೆ. ನಿಮಗೆ ತಿಳಿದಿರುವಂತೆ, ಅವರು ಪ್ರಸ್ತುತ ಕೆಲವು ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ವಿಷಯದಲ್ಲಿ ನಾವು ಅವರಿಗೆ ಮೊದಲಿನಿಂದಲೂ ಸಂಪೂರ್ಣ ಬೆಂಬಲ ನೀಡುತ್ತಾ ಬಂದಿದ್ದೇವೆ. ಆಟಗಾರರನ್ನು ಉಳಿಸಿಕೊಳ್ಳುವ ಅಥವಾ ಬಿಡುಗಡೆ ಮಾಡುವ ಅವಕಾಶವಿದ್ದಾಗ, ನಾವು ಅವರ ಮೇಲೆ ನಂಬಿಕೆಯಿಟ್ಟು ಅವರನ್ನು ತಂಡದಲ್ಲೇ ಉಳಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ ಎಂದು ಮೊ ಬೊಬಾಟ್ ಹೇಳಿದ್ದಾರೆ.
"ನಾವು ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಬಯಸಿದ್ದೆವು. ಅವರು ಸದ್ಯ ಫ್ರಾಂಚೈಸಿಯೊಂದಿಗೆ ಒಪ್ಪಂದದಲ್ಲಿದ್ದಾರೆ ಮತ್ತು ಮುಂದಿನ ಅಲ್ಪಾವಧಿಯವರೆಗೂ ಅವರು ಒಪ್ಪಂದದ ಅಡಿಯಲ್ಲೇ ಇರಲಿದ್ದಾರೆ. ನಾವು ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಇಂದು ಬೆಳಿಗ್ಗೆ ಕೂಡ ನಾನು ಅವರೊಂದಿಗೆ ಮಾತನಾಡಿದ್ದೇನೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅವರು ತಂಡವನ್ನು ಸೇರಿಕೊಳ್ಳುವುದು ಅವರ ಹಿತದೃಷ್ಟಿಯಿಂದಾಗಲಿ ಅಥವಾ ಫ್ರಾಂಚೈಸಿಯ ಹಿತದೃಷ್ಟಿಯಿಂದಾಗಲಿ ಸರಿಯಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ," ಎಂದು ತಿಳಿಸಿದ್ದಾರೆ.
"ನಮ್ಮ ಬೆಂಬಲ ಅವರಿಗೆ ಯಾವಾಗಲೂ ಇರುತ್ತದೆ ಮತ್ತು ಅವರು ಫ್ರಾಂಚೈಸಿಯೊಂದಿಗೆ ಒಪ್ಪಂದದಲ್ಲೇ ಮುಂದುವರಿಯಲಿದ್ದಾರೆ. ಅವರು ಎದುರಿಸುತ್ತಿರುವ ಈ ವೈಯಕ್ತಿಕ ಸನ್ನಿವೇಶದ ಸಮಯದಲ್ಲಿ ನಾವು ಅವರೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿರುತ್ತೇವೆ," ಎಂದು ತಿಳಿಸಿದ್ದಾರೆ.
2025ರ ಐಪಿಎಲ್ ಸೀಸನ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದ ಯಶ್ ದಯಾಳ್, ಇಡೀ ಟೂರ್ನಿಯಲ್ಲಿ 13 ವಿಕೆಟ್‌ಳನ್ನು ಕಬಳಿಸುವ ಮೂಲಕ ಆರ್‌ಸಿಬಿ ಚೊಚ್ಚಲ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2025ರ ಐಪಿಎಲ್ ಫೈನಲ್ ಪಂದ್ಯದ ನಂತರ ದಯಾಳ್ ಅವರು ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಮೂಲಗಳ ಪ್ರಕಾರ, ಅವರ ಅನುಪಸ್ಥಿತಿಯು ಪ್ರಸ್ತುತ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳಿಗೆ ಸಂಬಂಧಿಸಿದೆ ಎನ್ನಲಾಗಿದೆ. ಈ ಕಾರಣದಿಂದಾಗಿಯೇ ಅವರು ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.
ಅತ್ಯಂತ ಪ್ರಮುಖ ವಿಷಯವೆಂದರೆ, ಯಶ್ ದಯಾಳ್ ಇನ್ನು ಆರ್‌ಸಿಬಿ ಜೊತೆ ಒಪ್ಪಂದದಲ್ಲೇ ಇರುವುದರಿಂದ, ನಿಯಮಗಳ ಪ್ರಕಾರ ಅವರ ಸ್ಥಾನಕ್ಕೆ ಮತ್ತೊಬ್ಬ ಹೊಸ ಬದಲಿ ಆಟಗಾರನನ್ನು ಆಯ್ಕೆ ಮಾಡಿಕೊಳ್ಳಲು ಫ್ರಾಂಚೈಸಿಗೆ ಅವಕಾಶವಿಲ್ಲ. ಈ ಸೀಸನ್‌ನಲ್ಲಿ ಆರ್‌ಸಿಬಿ ಲಭ್ಯವಿರುವ ಆಟಗಾರರನ್ನೇ ಬಳಸಿಕೊಂಡು ಪಂದ್ಯಗಳನ್ನು ಎದುರಿಸಬೇಕಾಗುತ್ತದೆ. ಎಡಗೈ ವೇಗಿಯ ಅಲಭ್ಯತೆಯು ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ತಂಡದ ತಂತ್ರಗಾರಿಕೆಯ ಮೇಲೆ ಪ್ರಭಾವ ಬೀರಬಹುದು.
ಹಿರಿಯ ಆಟಗಾರ ಭುವನೇಶ್ವರ್ ಕುಮಾರ್ ಮತ್ತು ಆಸ್ಟ್ರೇಲಿಯಾದ ಸ್ಟಾರ್ ವೇಗಿ ಜೋಶ್ ಹ್ಯಾಜಲ್‌ವುಡ್ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಶ್ರೀಲಂಕಾದ ಮಲಿಂಗಾ ಶೈಲಿಯ ವೇಗಿ ನುವಾನ್ ತುಷಾರ, ನ್ಯೂಜಿಲೆಂಡ್‌ನ ಜೇಕಬ್ ಡಫಿ ಮತ್ತು ಆಲ್‌ರೌಂಡರ್ ರೊಮಾರಿಯೋ ಶೆಫರ್ಡ್ ಅವರು ತಂಡಕ್ಕೆ ಆಸರೆಯಾಗಲಿದ್ದಾರೆ.
1. ಗಾಜಿಯಾಬಾದ್ ಪ್ರಕರಣ (ಜುಲೈ 2025): ಮೊದಲ ಎಫ್‌ಐಆರ್ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಐದು ವರ್ಷಗಳ ಕಾಲ ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಮತ್ತು ಮಾನಸಿಕ ಶೋಷಣೆ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ದಯಾಳ್ ವಿರುದ್ಧ ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ದಯಾಳ್ ಅವರ ಬಂಧನಕ್ಕೆ ತಡೆಯಾಜ್ಞೆ ನೀಡಿದೆ.
2. ಜೈಪುರ ಪೋಕ್ಸೋ (POCSO) ಪ್ರಕರಣ: ಗಾಜಿಯಾಬಾದ್ ಪ್ರಕರಣದ ಬೆನ್ನಲ್ಲೇ ಜೈಪುರದಲ್ಲಿ ಮತ್ತೊಂದು ಗಂಭೀರ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕಿಯೊಬ್ಬಳು ದಯಾಳ್ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ದೂರು ನೀಡಿದ್ದಾಳೆ. 2023ರಿಂದ ತನ್ನ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ. 2025ರ ಐಪಿಎಲ್ ಸೀಸನ್ ವೇಳೆ ಹೋಟೆಲ್‌ವೊಂದರಲ್ಲಿ ವೃತ್ತಿಜೀವನಕ್ಕೆ ಸಹಾಯ ಮಾಡುವ ಭರವಸೆ ನೀಡಿ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಡಿಸೆಂಬರ್ 2025ರಲ್ಲಿ ಜೈಪುರದ ಪೋಕ್ಸೋ ನ್ಯಾಯಾಲಯವು ಯಶ್ ದಯಾಳ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಸಾಕ್ಷ್ಯಗಳ ಗಂಭೀರತೆ ಮತ್ತು ತನಿಖೆ ಇನ್ನೂ ನಡೆಯುತ್ತಿರುವುದನ್ನು ಗಮನಿಸಿದ ನ್ಯಾಯಾಲಯವು ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.