
ಇರಾನಿ ಕಪ್ ಪಂದ್ಯದಲ್ಲಿ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಇತಿಹಾಸ ನಿರ್ಮಿಸಿದ್ದಾರೆ. ಇರಾನಿ ಕಪ್‌ನ ಒಂದೇ ಪಂದ್ಯದಲ್ಲಿ ದ್ವಿಶತ ಮತ್ತು ಸಿಡಿಸಿದ ಮೊದಲ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ.
ಮಧ್ಯ ಪ್ರದೇಶದ ವಿರುದ್ಧದ ಇರಾನಿ ಕಪ್ ಪಂದ್ಯದಲ್ಲಿ ಶೇಷ ಭಾರತ (ರೆಸ್ಟ್ ಆಫ್ ಇಂಡಿಯಾ) ತಂಡದ ಪರವಾಗಿ ಆಡುತ್ತಿರುವ ಯಶಸ್ವಿ ಜೈಸ್ವಾಲ್, ಶನಿವಾರ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ.
ಮುಂಬೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮಧ್ಯಪ್ರದೇಶದ ವಿರುದ್ಧ ಆರ್ಭಟಿಸಿದ್ದಾರೆ ಮೊದಲ ಇನ್ನಿಂಗ್ಸ್‌ನಲ್ಲಿ 213 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 144 ರನ್ ಗಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇರಾನಿ ಕಪ್ ಪಂದ್ಯದಲ್ಲಿ 300ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಎಡಗೈ ಬ್ಯಾಟರ್ ಒಂದೇ ಇರಾನಿ ಕಪ್‌ನಲ್ಲಿ ದ್ವಿಶತಕ ಮತ್ತು ಶತಕ ಬಾರಿಸಿದ ಮೊದಲ ಆಟಗಾರ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 11 ನೇ ಆಟಗಾರ ಎನಿಸಿಕೊಂಡಿದ್ದಾರೆ.

ಅತ್ಯುತ್ತಮ ಫಾರ್ಮ್‌ನಲ್ಲಿರುವ ಜೈಸ್ವಾಲ್
21 ವರ್ಷದ ಜೈಸ್ವಾಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ 2022ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ಎ ವಿರುದ್ಧ ಭಾರತ ಎ ಪರ 146 ರನ್ ಗಳಿಸಿದರು. ಡಿಸೆಂಬರ್ ತಿಂಗಳಿನಲ್ಲಿ ರಣಜಿ ಟ್ರೋಫಿ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಮುಂಬೈ ಪರ 162 ರನ್ ಗಳಿಸಿದರು.
ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಜೈಸ್ವಾಲ್‌ರನ್ನು ಭಾರತ ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅತಿ ಶೀಘ್ರದಲ್ಲೇ ಅವರು ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದು ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೃಹತ್ ಮುನ್ನಡೆ ಪಡೆದುಕೊಂಡ ಶೇಷ ಭಾರತ
ಯಶಸ್ವಿ ಜೈಸ್ವಾಲ್ ದ್ವಿಶತಕ ಮತ್ತು ಅಭಿಮನ್ಯು ಈಶ್ವರನ್ ಶತಕದ ನೆರವಿನಿಂದ ಶೇಷ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 484 ರನ್‌ಗಳನ್ನು ಕಲೆಹಾಕಿತು. ನಂತರ ಬ್ಯಾಟಿಂಗ್ ಮಾಡಿದ ಮಧ್ಯ ಪ್ರದೇಶ 294 ರನ್ ಗಳಿಸಿದರು.
ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಶೇಷ ಭಾರತಕ್ಕೆ ಮತ್ತೆ ಯಶಸ್ವಿ ಜೈಸ್ವಾಲ್ ಆಸರೆಯಾದರು. ಎರಡನೇ ಇನ್ನಿಂಗ್ಸ್‌ನಲ್ಲಿ 246 ರನ್ ಗಳಿಸಿ ಆಲೌಟ್ ಆಗುವ ಮೂಲಕ ಶೇಷ ಭಾರತ ತಂಡ 436 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿದೆ. ಜೈಸ್ವಾಲ್ ಎರಡನೇ ಇನ್ನಿಂಗ್ಸ್‌ನಲ್ಲಿ 144 ರನ್ ಗಳಿಸಿದರು.
ಮಧ್ಯಪ್ರದೇಶದ ಪರವಾಗಿ ಆವೇಶ್ ಖಾನ್, ಅಂಕಿತ್ ಕುಶ್ವಂತ್, ಸಾರಂಶ್ ಜೈನ್ ಮತ್ತು ಶುಭಂ ಶರ್ಮಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಕಳೆದ ಬಾರಿ ಚಾಂಪಿಯನ್ ಆಗಿರುವ ರೆಸ್ಟ್ ಆಫ್ ಇಂಡಿಯಾ ಈ ಬಾರಿ ಕೂಡ ಗೆಲ್ಲುವ ನೆಚ್ಚಿನ ತಂಡವಾಗಿದೆ.