ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಶುಕ್ರವಾರ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಯುವ ಆಟಗಾರರನ್ನು ಕಣಕ್ಕೆ ಇಳಿಸಲಿದೆ. ಈ ವೇಳೆ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಮೇಲೆ ನೆಟ್ಟಿರಲಿವೆ. ಇವರು ಭಾರತದಲ್ಲಿ ನಡೆದಿದ್ದ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಿದ್ದರು. ಹೀಗಾಗಿ ಇಂಗ್ಲೆಂಡ್ ಬೌಲರ್‌ಗಳಿಗೆ ಇವರ ಭಯ ಇದೆ.
ಯಶಸ್ವಿ ಜೈಸ್ವಾಲ್ ಕಳೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸೈಕಲ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಎರಡನೇ ಆಟಗಾರ. ಜೋ ರೂಟ್ ಬಳಿಕ ಅತಿ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಇವರು ಇದೇ ಫಾರ್ಮ್‌ನ್ನು ಮುಂದುವರೆಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಸರಣಿಯಲ್ಲೂ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಹೀಗಾಗಿ ಇವರು ಇಂಗ್ಲೆಂಡ್‌ನಲ್ಲಿ ಅಬ್ಬರಿಸಬಲ್ಲರು ಎಂಬ ಲೆಕ್ಕಾಚಾರಗಳು ಆರಂಭವಾಗಿವೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಪರ ಆರಂಭಿಕರಾಗಿ ಕಣಕ್ಕೆ ಇಳಿಯುವ ಯಶಸ್ವಿ ರನ್ ಮಹಲ್ ಕಟ್ಟಿದ್ದಾರೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಳಸಿಕೊಂಡಿರುವ ಇವರು ದೊಡ್ಡ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 700ಕ್ಕೂ ಅಧಿಕ ರನ್ ಬಾರಿಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಒಂದೇ ಸರಣಿಯಲ್ಲಿ 700ಕ್ಕೂ ಹೆಚ್ಚು ರನ್ ಸಿಡಿಸಿದ ಭಾರತದ ಎರಡನೇ ಆಟಗಾರ ಎಂಬ ಶ್ರೇಯ ಇವರಿಗೆ ಸಲ್ಲುತ್ತದೆ. ಇದಕ್ಕೂ ಮೊದಲು ಈ ಸಾಧನೆಯನ್ನು ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಮಾಡಿದ್ದರು.
ಯಶಸ್ವಿ ಜೈಸ್ವಾಲ್ ಭಾರತದ ಪರ ಈಗಾಗಲೇ 36 ಟೆಸ್ಟ್ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಈ ವೇಳೆ 52ರ ಸರಾಸರಿಯಲ್ಲಿ 1798 ರನ್ ಕಲೆ ಹಾಕಿದ್ದಾರೆ. ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ ಮೊದಲ ಮೂರು ಇನ್ನಿಂಗ್ಸ್‌ಗಳಲ್ಲಿ 202 ರನ್ ಗಳಿಸಿದರೆ, ದೊಡ್ಡ ದಾಖಲೆಯನ್ನು ಬರೆಯಬಹುದಾಗಿದೆ. ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಕನಿಷ್ಠ ಇನಿಂಗ್ಸ್‌ಗಳಲ್ಲಿ 2 ಸಾವಿರ ರನ್ ಪೂರ್ಣಗೊಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ. ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಇಬ್ಬರೂ 40 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಈ ದಾಖಲೆಯ ಮೇಲೆ ಯಶಸ್ವಿ ಕಣ್ಣು ನೆಟ್ಟಿದ್ದಾರೆ.

ಯಶಸ್ವಿ ಜೈಸ್ವಾಲ್ 2023 ರಲ್ಲಿ ಭಾರತದ ಪರ ಟೆಸ್ಟ್‌ಗೆ ಪದಾರ್ಪಣೆ ಮಾಡಿದರು. ಇವರು 19 ಟೆಸ್ಟ್ ಪಂದ್ಯಗಳ 36 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಶತಕಗಳು ಮತ್ತು 10 ಅರ್ಧಶತಕ ಸೇರಿದಂತೆ ಒಟ್ಟು 1798 ರನ್ ಸಿಡಿಸಿದ್ದಾರೆ. ಇವರು ಇಂಗ್ಲೆಂಡ್ ವಿರುದ್ಧ ದ್ವಿಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.