ಈ ವರ್ಷ ಅದೆಷ್ಟೋ ಕ್ರಿಕೆಟ್ ಆಟಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ತಂಡದ ಪ್ರದರ್ಶನದಿಂದ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವಂತೆ ಆಗಿದೆ. ಬ್ಯಾಟರ್‌ಗಳು ಬೌಲರ್‌ಗಳು ಸ್ಥಿರ ಪ್ರದರ್ಶನ ನೀಡಿದ್ದಾರೆ. ಆದರೆ 2024ರಲ್ಲಿ ಭರವಸೆಯನ್ನು ಮೂಡಿಸಿರುವ ಬ್ಯಾಟರ್ ಒಬ್ಬರೆ. ಇವರು ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸುತಲೇ ಇದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಅಬ್ಬರಿಸಿ ಬೊಬ್ಬಿರಿದ ಯಂಗ್ ಪ್ಲೇಯರ್ ಭವಿಷ್ಯದ ಆಸೆಯನ್ನು ಚಿಗುರಿಸಿದ್ದಾರೆ.
ಆರಂಭದಲ್ಲಿ ಇವರು ಮೈದಾನಕ್ಕೆ ಇಳಿಯುತ್ತಾರೆ ಎಂಬ ಸುದ್ದಿ ತಿಳಿದಾಗಲೇ ಅಭಿಮಾನಿಗಳು ಹಿಗ್ಗಿದ್ದರು. ಇದಕ್ಕೆ ಕಾರಣ ಹಲವು ವಯೋಮಿತಿ ಕ್ರಿಕೆಟ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ಭರ್ಜರಿ ಬ್ಯಾಟಿಂಗ್ ಮೂಲಕ ಸಾಧನೆ ಮಾಡಿ, ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಅಷ್ಟೇ ಅಲ್ಲ ಸದ್ಯಕ್ಕಂತೂ ಭಾರತ ಟೆಸ್ಟ್ ತಂಡದ ಖಾಯಂ ಸದಸ್ಯ. ರೋಹಿತ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಯಶಸ್ವಿ ಜೈಸ್ವಾಲ್.

ಕಳೆದ ವರ್ಷ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತದ ಪರ ಪದಾರ್ಪಣೆ ಮಾಡುವ ಅವಕಾಶ ಪಡೆದ ಯಶಸ್ವಿ ಜೈಸ್ವಾಲ್ ಮೊದಲ ಪಂದ್ಯದಲ್ಲಿ 171 ರನ್‌ಗಳ ಬಿಗ್ ಇನಿಂಗ್ಸ್ ಕಟ್ಟಿದರು. ಎರಡನೇ ಟೆಸ್ಟ್‌ನಲ್ಲೂ ಇವರು ಅರ್ಧಶತಕ ಬಾರಿಸಿ ತಮ್ಮಲ್ಲಿಯ ಬ್ಯಾಟಿಂಗ್ ಕ್ಷಮತೆಯನ್ನು ಸಾರಿ ಹೇಳಿದ್ದರು. ಇದರ ಫಲವಾಗಿಯೇ ಇವರಿಗೆ ತಂಡದಲ್ಲಿ ಅರ್ಧ ಸ್ಥಾನ ಪಕ್ಕಾ ಆಗಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲವಾಗಿದ್ದು, ಪ್ರಶ್ನೆಗಳು ಏಳುವಂತೆ ಮಾಡಿತ್ತು.
ತಮ್ಮ ಮೇಲೆ ಇದ್ದ ಎಲ್ಲ ಪ್ರಶ್ನೆಗಳಿಗೆ ಮೈದಾನದಲ್ಲಿ ಉತ್ತರ ನೀಡಿದ ಯಶಸ್ವಿ ಜೈಸ್ವಾಲ್ ತಾವೊಬ್ಬ ನುರಿತ ಆಟಗಾರನ ರೀತಿ ಬ್ಯಾಟ್ ಮಾಡಿದರು. ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ಇವರು ಆಡಿದ 5 ಪಂದ್ಯಗಳಲ್ಲಿ 700ಕ್ಕೂ ಹೆಚ್ಚು ರನ್ ಬಾರಿಸಿ ಅಬ್ಬರಿಸಿದರು. ಅಲ್ಲದೆ ಈ ಸಾಧನೆ ಮಾಡಿದ ಭಾರತದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇಂಗ್ಲೆಂಡ್ ವಿರುದ್ಧ ವಿಶಾಖಪಟ್ಟಣಂನಲ್ಲಿ 209, ರಾಜಕೋಟ್‌ನ ಎರಡನೇ ಇನಿಂಗ್ಸ್‌ನಲ್ಲಿ 214 ರನ್ ಸಿಡಿಸಿ ಅಬ್ಬರಿಸಿದರು. ಇಷ್ಟೇ ಅಲ್ಲದೆ ಈ ಸರಣಿಯಲ್ಲಿ ಇವರು ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ.

ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಆಡಿದ ನಾಲ್ಕು ಇನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕ ಬಾರಿಸಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದರು. ಇತ್ತೀಚಿಗೆ ಪರ್ತ್‌ನಲ್ಲಿ ತಂಡಕ್ಕೆ ಅಗತ್ಯವಿದ್ದಾಗ ನೆಲಕಚ್ಚಿ ನಿಂತು ಬ್ಯಾಟ್ ಮಾಡಿ 161 ರನ್‌ಗಳ ಬಿಗ್ ಇನಿಂಗ್ಸ್ ಕಟ್ಟಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಪ್ರಸಕ್ತ ವರ್ಷ ಟಿ20ಯಲ್ಲಿ ಆಡುವ ಅಷ್ಟೊಂದು ಅವಕಾಶಗಳು ಸಿಗದೇ ಇದ್ದರೂ ಸಹ ಸಿಕ್ಕ ಅವಕಾಶಗಳನ್ನು ಬಳಸಿಕೊಂಡಿದ್ದಾರೆ.
ಈ ಋತುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಯಶಸ್ವಿ ಜೈಸ್ವಾಲ್ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು 29 ಇನಿಂಗ್ಸ್‌ಗಳಲ್ಲಿ 56ರ ಸರಾಸರಿಯಲ್ಲಿ 1568 ರನ್ ಸಿಡಿಸಿದ್ದಾರೆ. ತವರು ಹಾಗೂ ವಿದೇಶಿ ನೆಲದಲ್ಲಿ ಇವರ ಬ್ಯಾಟಿಂಗ್ ಧಾಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಎಲ್ಲ ಪಿಚ್‌ಗಳಲ್ಲಿ ಸಲೀಸಾಗಿ ಆಡುತ್ತಾರೆ.
ಯಶಸ್ವಿ ಜೈಸ್ವಾಲ್ ಪ್ರಸಕ್ತ ವರ್ಷ ಆಡಿದ 13 ಟೆಸ್ಟ್ ಪಂದ್ಯಗಳ 24 ಇನಿಂಗ್ಸ್‌ಗಳಲ್ಲಿ 1280 ರನ್ ಸಿಡಿಸಿದ್ದರು. ಇದರಲ್ಲಿ ಮೂರು ಶತಕ ಹಾಗೂ ಏಳು ಅರ್ಧಶತಕಗಳು ಸೇರಿವೆ.