Year End 2024: ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿಜಯೋತ್ಸವ ಹೇಗಿತ್ತು?
ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಚಾಂಪಿಯನ್ ಪಟ್ಟಕ್ಕೇರಿತ್ತು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮೇ 26 ರಂದು ನಡೆದ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡವನ್ನು ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ ಸೋಲಿಸಿತ್ತು. ಈ ಮೂಲಕ ಐಪಿಎಲ್‌ನಲ್ಲಿ 2012 ಮತ್ತು 2014 ರ ನಂತರ ಮೂರನೇ ಬಾರಿಗೆ ಕೆಕೆಆರ್ ಪ್ರಶಸ್ತಿ ಎತ್ತಿ ಹಿಡಿದಿತ್ತು. ಪ್ರಸ್ತುತ ಭಾರತ ತಂಡದ ಹೆಡ್‌ಕೋಚ್ ಆಗಿರುವ ಗೌತಮ್ ಗಂಭೀರ್ ಅವರು ಕೆಕೆಆರ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕೆಕೆಆರ್ ತಂಡದ ಮೆಂಟರ್ ಆಗಿದ್ದ ಅವರು ಶ್ರೇಯಸ್ ಅಯ್ಯರ್ ಜೊತೆಗೂಡಿ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದರು.
ಕೆಕೆಆರ್ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9ರಲ್ಲಿ ಗೆದ್ದಿತ್ತು. ಎರಡು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದರೂ, 20 ಅಂಕಗಳೊಂದಿಗೆ ಕೆಕೆಆರ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಇದಾದ ನಂತರ ಕ್ವಾಲಿಫೈಯರ್ 1 ರಲ್ಲಿ ಎಸ್‌ಆರ್‌ಹೆಚ್ ವಿರುದ್ಧ ಕೆಕೆಆರ್ ಅಮೋಘ ಗೆಲುವು ಸಾಧಿಸಿ ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು.

ಕ್ವಾಲಿಫೈಯರ್ 2 ರಲ್ಲಿ ಎಸ್‌ಆರ್‌ಹೆಚ್ ಕೂಡ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಪುನಃ ಫೈನಲ್‌ನಲ್ಲಿ ಮುಖಾಮುಖಿಯಾದ ಕೆಕೆಆರ್ ಮತ್ತು ಎಸ್‌ಆರ್‌ಹೆಚ್ ನಡುವೆ ಪ್ರಶಸ್ತಿಗಾಗಿ ಕಾದಾಟ ನಡೆಯಿತು. ಆದರೆ, ಫೈನಲ್ ಪಂದ್ಯದಲ್ಲಿ ಸಂಪೂರ್ಣ ಮಂಕಾದ ಎಸ್‌ಆರ್‌ಹೆಚ್ ಸೋಲು ಕಂಡಿತ್ತು. ಇತ್ತ ಕೆಕೆಆರ್ ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿತ್ತು.
ನರೈನ್ ಆಲ್‌ರೌಂಡರ್ ಪ್ರದರ್ಶನ
ಐಪಿಎಲ್ 2024ರಲ್ಲಿ ಸುನಿಲ್ ನರೈನ್ ಅದ್ಭುತ ಆಲ್‌ರೌಂಡರ್ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೆಕೆಆರ್ ತಂಡಕ್ಕೆ ಕೊಡುಗೆ ನೀಡಿದರು. ಅವರು 180.74 ರ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 488 ರನ್ ಬಾರಿಸಿದರೆ, 17 ವಿಕೆಟ್‌ಗಳನ್ನೂ ಪಡೆದ್ದರು. ಈ ಅದ್ಭುತ ಪ್ರದರ್ಶನಕ್ಕೆ ಅವರಿಗೆ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಸಿಕ್ಕಿತ್ತು. ಇವರೊಂದಿಗೆ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಕೂಡ 435 ರನ್‌ಗಳನ್ನು ಗಳಿಸುವ ಮೂಲಕ ಕೆಕೆಆರ್ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ್ದರು.
ಕೆಕೆಆರ್ ಬೌಲಿಂಗ್ ಪರಾಕ್ರಮ
ಐಪಿಎಲ್ 2024 ಟೂರ್ನಿಯುದ್ದಕ್ಕೂ ಕೆಕೆಆರ್ ಬೌಲರ್‌ಗಳು ಮಿಂಚಿನ ಬೌಲಿಂಗ್ ದಾಳಿ ನಡೆಸಿದ್ದರು. ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ಮತ್ತು ಮಿಚೆಲ್ ಸ್ಟಾರ್ಕ್ ಎದುರಾಳಿ ತಂಡಗಳ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದ್ದರು. ವರುಣ್ ಚಕ್ರವರ್ತಿ 21 ವಿಕೆಟ್‌ಗಳನ್ನು ಪಡೆದರೆ, ಯುವ ವೇಗಿ ಹರ್ಷಿತ್ ರಾಣಾ 19 ವಿಕೆಟ್ ಕಬಳಿಸಿದ್ದರು. ಮಿಚೆಲ್ ಸ್ಟಾರ್ಕ್ ಅವರು ಕೆಕೆಆರ್‌ನ ಎರಡೂ ಪ್ಲೇಆಫ್ ಪಂದ್ಯಗಳಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆಯುವಲ್ಲಿ ಯಶಸ್ವಿಯಾದರು. ಇದಲ್ಲದೆ, ಸುನಿಲ್ ನರೈನ್ ಮತ್ತು ಆಂಡ್ರೆ ರಸೆಲ್ ಕ್ರಮವಾಗಿ 13 ಮತ್ತು 12 ವಿಕೆಟ್ ಪಡೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications