Year Ender 2023: ಈ ವರ್ಷದ ಟಾಪ್ 5 ಕ್ರಿಕೆಟ್ ಸುದ್ದಿಗಳು
2023ರ ವರ್ಷ ಕೊನೆಗೊಳ್ಳಲು ಕೆಲವೇ ದಿನಗಳು ಬಾಕಿ ಉಳಿದಿದ್ದು, ಇದು ಕ್ರಿಕೆಟ್‌ಗೆ ಪ್ರಮುಖ ವರ್ಷವಾಗಿತ್ತು. ಕೆಲವು ಅಗ್ರ ಕ್ರಿಕೆಟಿಗರು ಈ ವರ್ಷ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ. ಆದರೆ, ದಶಕದಿಂದ ಐಸಿಸಿ ಟ್ರೋಫಿಗಾಗಿ ಕಾಯುತ್ತಿರುವ ಭಾರತದ ಕಾಯುವಿಕೆ ಇನ್ನೂ ಹಾಗೇ ಉಳಿದಿದೆ.
ಭಾರತ ಈ ವರ್ಷ ಎರಡು ಬಾರಿ ಐಸಿಸಿ ಟ್ರೋಫಿ ಗೆಲ್ಲುವ ಸಮೀಪಕ್ಕೆ ಬಂದಿತ್ತು. ಆದರೆ ಎರಡೂ ಸಂದರ್ಭಗಳಲ್ಲಿ ಆಸ್ಟ್ರೇಲಿಯಾ ಭಾರತದ ಪ್ರಶಸ್ತಿ ಗೆಲ್ಲುವ ಕನಸನ್ನು ನುಚ್ಚುನೂರು ಮಾಡಿತು. ಈ ವರ್ಷ ಮುಗಿಯುವ ಮೊದಲು 2023ರಲ್ಲಿ ಟಾಪ್ 5 ಕ್ರಿಕೆಟ್ ಸುದ್ದಿಗಳ ಮಾಹಿತಿ ಇಲ್ಲಿದೆ.

ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ದಾಖಲೆ ಮುರಿದ ವಿರಾಟ್ ಕೊಹ್ಲಿ
2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಭಾರತ ತಂಡಕ್ಕೆ ಅದ್ಭುತವಾಗಿದ್ದರು. ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದ 10 ಸ್ಥಳಗಳಲ್ಲಿ ನಡೆದ 50 ಓವರ್‌ಗಳ ಐಸಿಸಿ ಟೂರ್ನಿಯ 11 ಪಂದ್ಯಗಳಲ್ಲಿ ಅವರು 765 ರನ್ ಗಳಿಸಿದರು. ಇದು ವಿಶ್ವಕಪ್ ಇತಿಹಾಸದಲ್ಲಿ ಆಟಗಾರನೊಬ್ಬನಿಂದ ಅತಿ ಹೆಚ್ಚು ರನ್‌ಗಳ ದಾಖಲೆಯಾಗಿದೆ.
2023ರ ಏಕದಿನ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಮೂರು ಶತಕಗಳನ್ನು ಬಾರಿಸಿದರು ಮತ್ತು ನವೆಂಬರ್ 15ರಂದು ಮುಂಬೈನ ವಾಂಖೆಡೆಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಭಾರತದ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ 50ನೇ ಏಕದಿನ ಶತಕವನ್ನು ಗಳಿಸುವ ಮೂಲಕ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳನ್ನು ಗಳಿಸಿದ್ದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದರು.
2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಸೋಲು
ಭಾರತ ತಂಡವು ಲೀಗ್ ಹಂತದ ಎಲ್ಲಾ 10 ಪಂದ್ಯಗಳನ್ನು ಗೆಲ್ಲುವ ಮೂಲಕ 2023ರ ಏಕದಿನ ವಿಶ್ವಕಪ್ ಫೈನಲ್ ತಲುಪಿತು. ಆದರೆ, ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡವನ್ನು ಮಣಿಸಲು ವಿಫಲವಾಯಿತು. ಫೈನಲ್ ಪಂದ್ಯವನ್ನು ಆರು ವಿಕೆಟ್‌ಗಳಿಂದ ಸೋತಿತು.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನವೆಂಬರ್ 19ರಂದು ನಡೆದ ಫೈನಲ್ ಪಂದ್ಯದಲ್ಲಿ, ಭಾರತ ನೀಡಿದ್ದ 241 ರನ್‌ಗಳ ಗುರಿಯನ್ನು, ಆಸ್ಟ್ರೇಲಿಯಾ 43 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು.
2024ರ ಐಪಿಎಲ್ ಹರಾಜಿನಲ್ಲಿ ಇತಿಹಾಸ ಸೃಷ್ಟಿಸಿದ ಮಿಚೆಲ್ ಸ್ಟಾರ್ಕ್
ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಅವರು ಡಿಸೆಂಬರ್ 19ರಂದು ದುಬೈನ ಕೋಕಾ-ಕೋಲಾ ಅರೆನಾದಲ್ಲಿ ನಡೆದ 2024ರ ಐಪಿಎಲ್ ಹರಾಜಿನಲ್ಲಿ ಇತಿಹಾಸ ನಿರ್ಮಿಸಿದರು.
ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) 24.75 ಕೋಟಿ ರೂಪಾಯಿಗೆ ಖರೀದಿಸಿತು. ಐಪಿಎಲ್ ಮತ್ತು ಫ್ರಾಂಚೈಸಿ ಲೀಗ್ ಇತಿಹಾಸದಲ್ಲಿ ಯಾವುದೇ ಆಟಗಾರ ಇದುವರೆಗೆ ಪಡೆದ ಅತ್ಯಧಿಕ ಮೊತ್ತದ ಹೊಸ ವಿಶ್ವ ದಾಖಲೆಯಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಅಕ್ಟೋಬರ್ 11ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತದ 2023ರ ಏಕದಿನ ವಿಶ್ವಕಪ್‌ನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿಶ್ವದಾಖಲೆ ಬರೆದರು.
ಆ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 84 ಎಸೆತಗಳಲ್ಲಿ 16 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 131 ರನ್ ಗಳಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 553 ಸಿಕ್ಸರ್‌ಗಳನ್ನು ಬಾರಿಸಿದ್ದ ಕ್ರಿಸ್ ಗೇಲ್ ಅವರ ವಿಶ್ವದಾಖಲೆಯನ್ನು ಮುರಿದರು. ರೋಹಿತ್ ಶರ್ಮಾ ಇದುವರೆಗೆ ಆಡಿರುವ 462 ಪಂದ್ಯಗಳಲ್ಲಿ 582 ಸಿಕ್ಸರ್ ಸಾಧನೆ ಮಾಡಿದ್ದಾರೆ.
ಮೂರು ಸ್ವರೂಪಗಳಲ್ಲಿ ಐಸಿಸಿ ಟ್ರೋಫಿ ಗೆದ್ದ ಮೊದಲ ತಂಡ ಆಸ್ಟ್ರೇಲಿಯಾ
ಜೂನ್ 7ರಿಂದ 11ರವರೆಗೆ ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ 209 ರನ್‌ಗಳಿಂದ ಗೆಲುವು ಸಾಧಿಸಿತು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ, ಆಸ್ಟ್ರೇಲಿಯಾ ತಂಡವು ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಐಸಿಸಿ ಟ್ರೋಫಿಯನ್ನು ಗೆದ್ದ ಮೊದಲ ತಂಡವೆನಿಸಿತು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯ ಹೊರತಾಗಿ, ಆಸ್ಟ್ರೇಲಿಯಾ ತಂಡವು 6 ಏಕದಿನ ವಿಶ್ವಕಪ್ ಟ್ರೋಫಿಗಳು, 2 ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಗಳು ಮತ್ತು 1 ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications