ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಐದು ಪಂದ್ಯಗಳ ಬಾರ್ಡರ್-ಗವಸ್ಕಾರ್ ಟ್ರೋಫಿ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಈ ಸರಣಿಯಲ್ಲಿ ಭಾರತ ತಂಡದ ಟಾಪ್ ಆರ್ಡರ್ ಬ್ಯಾಟರ್ಸ್ ಕಳಪೆ ಫಾರ್ಮ್ ಮುಂದುವರೆದಿದೆ. ಆದರೆ, ಈಗಾಗಲೇ ನಡೆದಿರುವ ಮೂರು ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಒಬ್ಬರಲ್ಲ, ಒಬ್ಬರೂ ಹೀರೋ ಆಗುತ್ತಿದ್ದಾರೆ. 2024ರ ವರ್ಷದಲ್ಲಿ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ಐತಿಹಾಸಿ ಸರಣಿಗಳನ್ನು ಗೆದ್ದಿದೆ.
ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿ ಸೋತು ಭಾರತ ಮುಖಭಂಗ ಅನುಭವಿಸಿದೆ. ಆದರೆ, ಭಾರತ ತಂಡದ ಬ್ಯಾಟರ್‌ಗಳು ರನ್‌ಗಳಿಸುವುದರಲ್ಲಿ ಹಿಂದೆ ಉಳಿದಿಲ್ಲ. ಈ ವರ್ಷ ಭಾರತದ ಪರ ಗರಿಷ್ಠ ಟೆಸ್ಟ್ ರನ್ ಗಳಿಸಿದ ಟಾಪ್-5 ಬ್ಯಾಟರ್ಸ್ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ವಿ ಜೈಸ್ವಾಲ್ ರನ್ ಹೊಳೆ ಹರಿಸಿದ್ದಾರೆ. ಶತಕದ ಮೇಲೆ ಶತಕ ಸಿಡಿಸುವ ಮೂಲಕ ಹಲವು ದಿಗ್ಗಜ ಬ್ಯಾಟರ್ಸ್ ದಾಖಲೆಯನ್ನು ಮುರಿದ್ದಾರೆ. ಆರಂಭಿಕ ಬ್ಯಾಟರ್ ಆಗಿರುವ ಜೈಸ್ವಾಲ್ ಈ ವರ್ಷ ಇದುವರಗೆ 14 ಟೆಸ್ಟ್ ಪಂದ್ಯಗಳ 27 ಇನ್ನಿಂಗ್ಸ್‌ಗಳಿಂದ 1312 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 3 ಶತಕ ಮತ್ತಿ 7 ಅರ್ಧಶತಕ ಕೂಡಿವೆ. ಅವರ ಅತ್ಯುತ್ತಮ ಸ್ಕೋರ್ ಅಜೇಯ 214 ರನ್ ಆಗಿದೆ.
ಯಶಸ್ವಿ ಜೈಸ್ವಾಲ್ ಭಾರತದ ಪರ 2024ರಲ್ಲಿ ಗರಿಷ್ಠ ಟೆಸ್ಟ್ ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ, ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿಯೂ 1000 ರನ್‌ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಇಂಗ್ಲೆಂಡ್‌ನ ಜೋ ರೂಟ್ 1556 ರನ್‌ಗಳಿಸಿ ಇದ್ದಾರೆ.
ಪ್ರಸ್ತುತ ಆಸ್ಟ್ರೇಲಿಯಾ ವಿರುದ್ದ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ಭಾರತದ ಪರ 2024ರಲ್ಲಿ ಗರಿಷ್ಠ ಟೆಸ್ಟ್ ರನ್ ಗಳಿಸಿದವರ ಪಟ್ಟಿಯಲ್ಲಿ ಸ್ಟಾರ್ ಯುವ ಬ್ಯಾಟರ್ ಶುಭಮನ್ ಗಿಲ್ ಅವರಿದ್ದಾರೆ. ಈ ವರ್ಷ ಗಿಲ್ ಆಡಿರುವ 12 ಟೆಸ್ಟ್ ಪಂದ್ಯಗಳ 22 ಇನ್ನಿಂಗ್ಸ್‌ಗಳಿಂದ 866 ಗಳಿಸಿದ್ದಾರೆ. ತಲಾ 3 ಶತಕ ಮತ್ತು ಅರ್ಧಶತಕಗಳನ್ನು ಹೊಂದಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ ಅಜೇಯ 119 ರನ್.
ನಾಯಕ ರೋಹಿತ್ ಶರ್ಮಾ ಭಾರತದ ಪರ 2024ರಲ್ಲಿ ಗರಿಷ್ಠ ಟೆಸ್ಟ್ ರನ್‌ಗಳಿಸಿ ಮೂರನೇ ಬ್ಯಾಟರ್ ಆಗಿದ್ದಾರೆ. ರೋಹಿತ್ ಆಡಿರುವ 13 ಟೆಸ್ಟ್ ಪಂದ್ಯಗಳ 24 ಇನ್ನಿಂಗ್ಸ್‌ಗಳಿಂದ 607 ರನ್ ಕಲೆ ಹಾಕಿದ್ದಾರೆ. ಅವರ ಇನ್ನಿಂಗ್ಸ್‌ಗಳಲ್ಲಿ 2 ಶತಕ ಹಾಗು 1 ಅರ್ಧಶತಕ ಕೂಡಿವೆ. ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಗಳಲ್ಲಿ ರೋಹಿತ್ ಅಬ್ಬರಿಸಿರಲಿಲ್ಲ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ರೋಹಿತ್ ಶರ್ಮಾ ಬ್ಯಾಟ್ ಸೈಲೆಂಟ್ ಆಗಿದೆ.
ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ಭಾರತ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಮಿಂಚಿದ್ದಾರೆ. ಪಂತ್ ಆಡಿರುವ 8 ಟೆಸ್ಟ್ ಪಂದ್ಯಗಳ 15 ಇನ್ನಿಂಗ್ಸ್‌ಗಳಿಂದ 518 ರನ್ ಗಳಿಸಿದ್ದಾರೆ. 1 ಶತಕ ಹಾಗು 3 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಬೌಲಿಂಗ್ ಮಾತ್ರವಲ್ಲದೆ, ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದಾರೆ. ಭಾರತದ ಪರ 2024ರಲ್ಲಿ ಗರಿಷ್ಠ ಟೆಸ್ಟ್ ರನ್‌ಗಳಿಸಿದವರ ಪಟ್ಟಿಯಲ್ಲ ಜಡೇಜಾ ಐದನೇ ಸ್ಥಾನದಲ್ಲಿದ್ದಾರೆ. 11 ಟೆಸ್ಟ್ ಪಂದ್ಯಗಳ 16 ಇನ್ನಿಂಗ್ಸ್‌ಗಳಿಂದ 508 ರನ್ ಬಾರಿಸಿದ್ದಾರೆ. ಅವರು 1 ಶತಕ ಮತ್ತು 3 ಅರ್ಧಶತಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.