ಫ್ಲ್ಯಾಶ್‌ಬ್ಯಾಕ್ 2020: ಈ ವರ್ಷ ನಿವೃತ್ತಿ ಹೇಳಿದ ಟಾಪ್ 5 ಕ್ರಿಕೆಟಿಗರು ಇವರು

ಪ್ರತಿವರ್ಷವೂ ಸಾಕಷ್ಟು ಕ್ರಿಕೆಟಿಗರು ಪದಾರ್ಪಣೆ ಮಾಡುತ್ತಾರೆ ಹಲವಾರು ಕ್ರಿಕೆಟಿಗರು ನಿವೃತ್ತರಾಗುತ್ತಾರೆ. ಕೆಲವರ ನಿವೃತ್ತಿ ಅಷ್ಟೇನೂ ಸುದ್ದಿಯಾಗದಿದ್ದರೂ ಇನ್ನು ಕೆಲವರ ನಿವೃತ್ತಿ ಮಾತ್ರ ಅಭಿಮಾನಿಗಳ ಪಾಲಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. 2020ರ ವರ್ಷವೂ ಕೂಡ ಇಂತಾ ಕೆಲ ನಿವೃತ್ತಿಯ ಘಟನೆಗಳಿಗೆ ಸಾಕ್ಷಿಯಾಯಿತು.
ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಾರಿಯ ಕ್ರೀಡಾ ಚಟುವಟಿಕೆಗಳು ಬಹುತೇಕ ಸ್ತಬ್ಧವಾಗಿತ್ತು. ಹೀಗಾಗಿ ಕ್ರೀಡಾಪಟುಗಳು ಕೂಡ ಈ ಬಾರಿ ಸುದೀರ್ಘ ಕಾಲ ವಿಶ್ರಾಂತಿಯಲ್ಲಿ ಕಳೆದರು. ನಿಧಾನವಾಗಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಕ್ರೀಡಾಚಟುವಟಿಕೆಯನ್ನು ಆರಂಭಿಸಲಾಯಿತು. ಇದರ ಜೊತೆಗೆ ಕೆಲ ಆಟಗಾರರು ತಮ್ಮ ನಿವೃತ್ತಿಯ ಘೋಷಣೆಯನ್ನೂ ಮಾಡಿದ್ದಾರೆ.
ಕ್ರಿಕೆಟ್ ಲೋಕದಲ್ಲಿ 2020ರ ವರ್ಷದಲ್ಲಿ ಯಾವೆಲ್ಲಾ ಕ್ರಿಕೆಟ್ ಆಟಗಾರರು ನಿವೃತ್ತಿ ಹೇಳಿದ್ದಾರೆ? ಅಂತಾ ಪ್ರಮುಖ ಐವರಿ ಕ್ರಿಕೆಟಿಗರ ವಿವರ ಇಲ್ಲಿದೆ.

ಎಂಎಸ್ ಧೋನಿ
ಈ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮದ ಸಂಜೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬಹುದೊಡ್ಡ ಆಘಾತವನ್ನು ನೀಡಿದ್ದು ಮಾಜಿ ನಾಯಕ ಎಂಎಸ್ ಧೋನಿ. ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡ ಧೋನಿ ತಮ್ಮ ನಿವೃತ್ತಿಯನ್ನು ಈ ರೀತಿಯಾಗಿ ಬಹಿರಂಗಪಡಿಸಿದ್ದರು. ಈ ಮೂಲಕ 16 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿ ಜೀವನಕ್ಕೆ ಅಂತ್ಯ ಹಾಡಿದ್ದರು ಮಾಹಿ.

ಸುರೇಶ್ ರೈನಾ
ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ನಿವೃತ್ತಿಯನ್ನು ಘೋಷಿಸಿದ ಕೆಲವೇ ಹೊತ್ತಿನಲ್ಲಿ ಸುರೇಶ್ ರೈನಾ ಕೂಡ ಭಾರತೀಯ ಕ್ರಿಎಕಟ್ ಅಭಿಮಾನಿಗಳಿಗೆ ಆಘಾತವನ್ನು ನೀಡಿದ್ದರು. ಧೋನಿಯ ಅತ್ಯಾಪ್ತರಾಗಿದ್ದ ಸುರೇಶ್ ರೈನಾ ಧೋನಿಯ ಹಾದಿಯನ್ನು ತುಳಿಯುವ ನಿರ್ಧಾರ ಮಾಡಿದ್ದರು.

ಪಾರ್ಥೀವ್ ಪಟೇಲ್
17ರ ಹರೆಯದಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಪ್ರವೇಶಿಸಿ ಅಚ್ಚರಿಯನ್ನು ಮೂಡಿಸಿದ್ದ ಆಟಗಾರ ಪಾರ್ಥೀವ್ ಪಟೇಲ್ ಕೂಡ ಈ ವರ್ಷಾಂತ್ಯದಲ್ಲಿ ನಿವೃತ್ತಿಯನ್ನು ಹೇಳಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್‌ನಿಂದಲೂ ನಿವೃತ್ತಿಯನ್ನು ಪಡೆದುಕೊಳ್ಳುವುದಾಗಿ ಪಾರ್ಥೀವ್ ಪಟೇಲ್ ಡಿಸೆಂಬರ್ 9ರಂದು ಘೋಷಿಸಿದ್ದರು. ಭಾರತದ ಪರವಾಗಿ ಪಾರ್ಥೀವ್ ಪಟೇಲ್ 25 ಟೆಸ್ಟ್, 38 ಏಕದಿನ ಪಂದ್ಯ ಹಾಗೂ ಎರಡು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.

ಮೊಹಮ್ಮದ್ ಆಮಿರ್
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಅಚ್ಚರಿಯ ನಿವೃತ್ತಿ ಘೊಷಿಸಿದ್ದು ಪಾಕಿಸ್ತಾನ ಕ್ರಿಕೆಟ್‌ನ ವೇಗದ ಬೌಲರ್ ಮೊಹಮ್ಮದ್ ಆಮಿರ್. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಆಮಿರ್ ಪ್ರತಿಭಾವಂತ ಬೌಲರ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿ ಐದು ವರ್ಷ ನಿಷೇಧಕ್ಕೆ ಒಳಗಾಗಿ ಬಳಿಕ ಮತ್ತೆ ತಂಡವನ್ನು ಸೇರಿಕೊಂಡು ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದರು. ಆದರೆ ಡಿಸೆಂಬರ್ 17ರಂದು ತಮ್ಮ 28ನೇ ವಯಸ್ಸಿನಲ್ಲಿ ಆಮಿರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಇರ್ಫಾನ್ ಪಠಾಣ್
ಭಾರತೀಯ ಕ್ರಿಕೆಟ್‌ನ ಉತ್ತಮ ಆಲ್‌ರೌಂಡರ್ ಎನಿಸಿಕೊಂಡಿದ್ದ ಇರ್ಫಾನ್ ಪಠಾಣ್ ಕೂಡ ಇದೇ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್‌ನಿಮದ ನಿವೃತ್ತಿಯನ್ನು ಘೋಷಿಸಿದ್ದಾರೆ. 35ರ ಹರೆಯದ ಇರ್ಫಾನ್ ಪಠಾಣ್ ಕಪಿಲ್ ದೇವ್ ಬಳಿಕ ಭಾರತ ಕಂಡ ಅತ್ಯುತ್ತಮ ಸ್ವಿಂಗ್ ಬೌಲರ್ ಎಂದು ಹಲವಾರಿಂದ ಕರೆಸಿಕೊಂಡಿದ್ದರು. ಭಾರತ ತಂಡಕ್ಕೆ ಅನೇಕ ಗೆಲುವುಗಳನ್ನು ತಂದುಕೊಟ್ಟ ಪಠಾಣ್ ಸುದೀರ್ಘ ಕಾಲ ಟೀಮ್ ಇಂಡಿಯಾ ಪರವಾಗಿ ಆಡಲು ಸಾಧ್ಯವಾಗಲಿಲ್ಲ. 29 ಟೆಸ್ಟ್, 120 ಏಕದಿನ ಹಾಗೂ 24 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications