ಜಗತ್ತಿಗೆ ಕಿಂಗ್ ಕೊಹ್ಲಿ, ಆದರೆ ನನಗೆ ಚೀಕೂ; "ಡೆಲ್ಲಿಯಿಂದ ಬಂದ ಪುಟ್ಟ ಹುಡುಗನಿಗೆ.." ಯುವಿ ಭಾವುಕ ಪತ್ರ!

ಭಾರತೀಯ ಕ್ರಿಕೆಟ್ ಕಂಡ ಅದ್ಭುತ ಆಲ್‌ರೌಂಡರ್‌ಗಳಲ್ಲಿ ಒಬ್ಬರು ಯುವರಾಜ್ ಸಿಂಗ್. ಭಾರತ ಟಿ20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ಗೆಲ್ಲಲು ಪ್ರಮುಖ ಕಾರಣವಾಗಿದ್ದ ಯುವರಾಜ್ ಸಿಂಗ್ ನಿವೃತ್ತಿಯ ಬಳಿಕವೂ ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಆದರೆ ಮಂಗಳವಾರ ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪತ್ರವೊಂದನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಭಾವುಕರನ್ನಾಗಿಸಿದ್ದಾರೆ. ಟೀಮ್ ಇಂಡಿಯಾ ನಾಯಕತ್ವದಿಂದ ಇತ್ತೀಚೆಗಷ್ಟೇ ಕೆಳಗಿಳಿದಿರುವ ವಿರಾಟ್ ಕೊಹ್ಲಿ ಕುರಿತಾಗಿ ಬರೆದಿರುವ ಈ ಪತ್ರ ಇಬ್ಬರು ಕ್ರಿಕೆಟಿಗರ ನಡುವಿನ ಅನ್ಯೋನ್ಯತೆಗೆ ಕೈಗನ್ನಡಿಯಂತಿದೆ.
ಇನ್ನು ಈ ಪತ್ರದೊಂದಿಗೆ ಯುವರಾಜ್ ಸಿಂಗ್ ವಿಶೇಷ 'ಶೂ'ವೊಂದನ್ನು ಕೂಡ ವಿರಾಟ್ ಕೊಹ್ಲಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಯುವ ಆಟಗಾರನಾಗಿ ಹಾಗೂ ಓರ್ವ ವ್ಯಕ್ತಿಯಾಗಿ ವಿರಾಟ್ ಕೊಹ್ಲಿ ಹೇಗೆ ಬೆಳವಣಿಗೆ ಕಂಡರು ಎಂಬ ಬಗ್ಗೆಯೂ ಬರೆದುಕೊಂಡಿದ್ದಾರೆ. ಸುದೀರ್ಘ ಕಾಲ ಭಾರತ ತಂಡದ ನಾಯಕತ್ವ ವಹಿಸಿ ಈಗ ನಾಯಕತ್ವದಿಂದ ಕೆಳಗಿಳಿದಿರುವ ಹಿನ್ನೆಲೆಯಲ್ಲಿ ಯುವಿ ಈ ಪತ್ರವನ್ನು ಬರೆದಿದ್ದಾರೆ.
ಹಾಗಾದರೆ ಯುವರಾಜ್ ಸಿಂಗ್ ಬರೆದಿರುವ ಪತ್ರದಲ್ಲಿ ಏನಿದೆ? ಯಾವೆಲ್ಲಾ ಸಂಗತಿಗಳನ್ನು ಯುವಿ ಈ ಪತ್ರದಲ್ಲಿ ಹಂಚಿಕೊಂಡಿದ್ದಾರೆ? ಯುವಿ ಬರೆದ ಪತ್ರದ ಸಂಪೂರ್ಣ ಸಾರಾಂಶ ಇಲ್ಲದೆ.

ಡೆಲ್ಲಿಯಿಂದ ಬಂದ ಪುಟ್ಟ ಹುಡುಗನಿಗಾಗಿ..
ಕೈಬರಹದಲ್ಲಿ ಬರೆದಿರುವ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಯುವರಾಜ್ ಸಿಂಗ್ ಹಂಚಿಕೊಂಡಿದ್ದಾರೆ. ಈ ಪತ್ರವನ್ನು ಹಂಚಿಕೊಂಡಿರುವ ಪೋಸ್ಟ್‌ಗೆ ಯುವರಾಜ್ ಬರೆದಿರುವ ಒಕ್ಕಣೆ ಕೂಡ ಅಷ್ಟೇ ಭಾವನಾತ್ಮಕವಾಗಿದೆ. "ಡೆಲ್ಲಿಯಿಂದ ಬಂದ ಪುಟ್ಟ ಹುಡುಗ ವಿರಾಟ್ ಕೊಹ್ಲಿ.. ನಾನು ಈ ವಿಶೇಷ ಶೂಗಳನ್ನು ನಿಮಗಾಗಿ ಅರ್ಪಿಸಲು ಬಯಸುತ್ತೇನೆ. ವೃತ್ತಿ ಜೀವನದಲ್ಲಿ ನಾಯಕನಾಗಿ ನಿಮ್ಮ ಸಾಧನೆ ಲಕ್ಷಂತರ ಅಭಿಮಾನಿಗಳಲ್ಲಿ ನಗು ಮೂಡಿಸಿದೆ, ಹಾಗಾಗಿ ಅದನ್ನು ಸಂಭ್ರಮಿಸಬೇಕಿದೆ. ನೀವು ಹೇಗಿದ್ದೀರೋ ಹಾಗೆಯೇ ಇರಿ. ನೀವು ಹೇಗೆ ಆಟವಾಡುತ್ತಿದ್ದೀರೀ ಆಗೆಯೇ ಆಡಿ. ಆ ಮೂಲಕ ದೇಶವನ್ನು ಹೆಮ್ಮೆ ಪಡುವಂತೆ ಮಾಡಿ" ಎಂದು ಯುವರಾಜ್ ಸಿಂಗ್ ಪತ್ರವವನ್ನು ಹಂಚಿಕೊಂಡಿದ್ದಾರೆ.

"ದೇಶದ ಯುವ ಜನಾಂಗಕ್ಕೆ ಸ್ಪೂರ್ತಿ"
ಇನ್ನು ಯುವರಾಜ್ ಸಿಂಗ್ ಬರೆದಿರುವ ಪತ್ರದಲ್ಲಿ ಆರಂಭಿಕ ದಿನಗಳಿಂದ ಕೊಹ್ಲಿ ಬೆಳೆದುಬಂದ ಹಾದಿಯನ್ನು ಯುವಿ ತಮ್ಮದೇ ಪದಗಳಲ್ಲಿ ಬರೆದುಕೊಂಡಿದ್ದಾರೆ. ಯುವರಾಜ್ ಪತ್ರದ ಸಾರಾಂಶ ಹೀಗಿದೆ. "ಆತ್ಮೀಯ ವಿರಾಟ್, ಕ್ರಿಕೆಟಿಗನಾಗಿ ಹಾಗೂ ವ್ಯಕ್ತಿಯಾಗಿ ನಿಮ್ಮ ಬೆಳವಣಿಗೆಯನ್ನು ನಾನು ನೋಡಿದ್ದೇನೆ. ನೆಟ್ಸ್‌ನಲ್ಲಿ ಚಿಕ್ಕ ಹುಡುನಾಗಿದ್ದಾಗಿನಿಂದ ಭಾರತೀಯ ಕ್ರಿಕೆಟ್‌ನ ದಿಗ್ಗಜರೊಂದಿಗೆ ಹೆಗಲಿಗೆ ಹೆಗಲಾಗಿ ನಿಂತು ಈಗ ನೀವೇ ಓರ್ವ ದಿಗ್ಗಜ ಆಟಗಾರನಾಗಿ ಯುವ ಆಟಗಾರರಿಗೆ ಮಾದರಿಯಾಗಿದ್ದೀರಿ. ಅಂಗಳದಲ್ಲಿ ಕ್ರಿಕೆಟ್‌ನ ಮೇಲೆ ನಿಮ್ಮಲ್ಲಿರುವ ಶಿಸ್ತು ಹಾಗೂ ಬದ್ಧತೆ ಪ್ರತಿಯೊಬ್ಬ ಯುವ ಆಟಗಾರನನ್ನು ಕೂಡ ಸ್ಪೂರ್ತಿಗೊಳಿಸುತ್ತದೆ. ನಿಮ್ಮ ಆ ಬದ್ಧತೆ ಹಾಗೂ ಶಿಸ್ತಿನ ಕಾರಣದಿಂದಾಗಿಯೇ ದೇಶದ ಸಣ್ಣ ಮಕ್ಕಳು ಕ್ರಿಕೆಟ್ ಬ್ಯಾಟ್ ಹಿಡಿದು ದೇಶದ ಪರವಾಗಿ ನೀಲಿ ಜರ್ಸಿ ತೊಡುವ ಕನಸು ಕಾಣುತ್ತಾರೆ"

ದಿಗ್ಗಜ ಹಾಗೂ ಅದ್ಭುತ ನಾಯಕ
"ನೀವು ಪ್ರತೀ ವರ್ಷವೂ ನಿಮ್ಮಲ್ಲಿನ ಕ್ರಿಕೆಟ್‌ನ ಗುಣಮಟ್ಟವನ್ನು ಹೆಚ್ಚಿಸುತ್ತಲೇ ಬಂದಿದ್ದೀರಿ. ಈ ಅದ್ಭುತವಾದ ಕ್ರೀಡೆಯಲ್ಲಿ ನೀವು ಈಗಾಗಲೇ ಸಾಕಷ್ಟು ಸಾಧನೆ ಮಾಡಿದ್ದೀರಿ. ನಿಮ್ಮ ವೃತ್ತಿ ಜೀವನದಲ್ಲಿ ಈಗ ಹೊಸ ಅಧ್ಯಾಯವನ್ನು ನೋಡಲು ನಾನು ಮತ್ತಷ್ಟು ಉತ್ಸುಕನಾಗಿದ್ದೇನೆ. ನೀವೋರ್ವ ದಿಗ್ಗಜ ಮತ್ತು ಅದ್ಭುತವಾದ ನಾಯಕ. ನಿಮ್ಮಿಂದ ಮತ್ತಷ್ಟು ಪ್ರಖ್ಯಾತ ರನ್ ಚೇಸ್‌ಗಳನ್ನು ನಾನು ನಿರೀಕ್ಷಿಸುತ್ತಿದ್ದೇನೆ" ಎಂದು ಯುವರಾಜ್ ಸಿಂಗ್ ಬರೆದುಕೊಂಡಿದ್ದಾರೆ.

ಜಗತ್ತಿಗೆ ನೀವು ಕಿಂಗ್ ಕೊಹ್ಲಿ ಆದರೆ ನನಗೆ ಚೀಕು!
ಯುವರಾಜ್ ಸಿಂಗ್ ವಿರಾಟ್ ಕೊಹ್ಲಿಗೆ ವಿಶೇಷ ಶೂಗಳನ್ನು ಉಡುಗೊರೆಯಾಗಿ ನೀಡಿದ್ದು ಈ ಉಡುಗೊರೆಯ ಜೊತೆಗೆ ಬರೆದಿರುವ ಪತ್ರದಲ್ಲಿ ಮತ್ತೊಂದು ವಿಶೇಷ ಸಾಲುಗಳನ್ನು ಕೂಡ ಸೇರಿಸಿದ್ದಾರೆ. "ಜಗತ್ತಿಗೆ ನೀವು ಕಿಂಗ್ ಕೊಹ್ಲಿ ಆಗಿದ್ದೀರಿ, ಆದರೆ ನನಗೆ ನೀವು ಚೀಕೂನೆ ಆಗಿ ಉಳಿದಿದ್ದೀರಿ. ನಿಮ್ಮೊಳಗಿನ ಬೆಂಕಿ ಮತ್ತಷ್ಟು ಪ್ರಜ್ವಲಿಸಲಿ. ನೀವೋರ್ವ ಧ್ರುವತಾರೆ. ನಿಮಗಾಗಿ ವಿಶೇಷ ಗೋಲ್ಡನ್ ಬೂಟ್ ಇಲ್ಲಿದೆ. ದೇಶ ಹೆಮ್ಮೆ ಪಡುವಂತೆ ಮಾಡುವುದನ್ನು ಮುಂದುವರಿಸಿ" ಎಂದು ಯುವರಾಜ್ ಸಿಂಗ್ ವಿರಾಟ್ ಕೊಹ್ಲಿಗೆ ಬರೆದಿರುವ ಪತ್ರವನ್ನು ಕೊನೆಗೊಳಿಸಿದ್ದಾರೆ. ಪತ್ರದೊಂದಿಗೆ ಕೊಹ್ಲಿ ಜೊತೆಗಿನ ಫೊಟೋವನ್ನು ಕೂಡ ಯುವರಾಜ್ ಸಿಂಗ್ ಹಂಚಿಕೊಂಡಿದ್ದಾರೆ. ಯುವರಾಜ್ ಸಿಂಗ್ ಬರೆದ ಪತ್ರದ ಲಿಂಕ್ ಇಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications