ಕೈ ಕೊಟ್ಟ ಯುವಕರು: ನೆನಪಾಗುತ್ತಿರುವ ಅನುಭವಿಗಳು
ಟೀಮ್ ಇಂಡಿಯಾದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ಅನುಭವಿ ಆಟಗಾರರು ನಿವೃತ್ತಿ ಪಡೆದ ಬಳಿಕ, ತಂಡದಲ್ಲಿ ಯುವಕರ ಕಾರುಬಾರು ಜೋರಾಗಿದೆ. ಕಳೆದ ಕೆಲವು ವರ್ಷಗಳಿಂದ ತಂಡದ ಬ್ಯಾಟಿಂಗ್ ಬೆನ್ನೆಲುಬು ಎಂದೇ ಗುರುತಿಸಿಕೊಂಡಿದ್ದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಟೀಮ್ ಇಂಡಿಯಾಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡಿ, ತವರಿನಲ್ಲಿ ಅಬ್ಬರಿಸಿದ್ದ ಭಾರತ ತಂಡ, ಈಗ ದಕ್ಷಿಣ ಆಫ್ರಿಕಾ ಎದುರು ಹೀನಾಯ ಪ್ರದರ್ಶನ ನೀಡುತ್ತಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಡಿಯಲ್ಲಿ ಆಡಲಾಗುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಗುವಾಹಟಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬಿಗಿ ಹಿಡಿತ ಸಾಧಿಸಿದೆ. ಮೊದಲ ಇನಿಂಗ್ಸ್ ಆರಂಭಿಸಿದ ಬ್ಯಾಟರ್‌ಗಳು ಭರವಸೆ ಮೂಡಿಸಿದ್ದರು. ಆದರೆ ಪ್ರವಾಸಿ ತಂಡದ ಸ್ಪಿನ್ ಬೌಲರ್‌ಗಳು ಅಬ್ಬರಿಸುತ್ತಿದ್ದಾಗ, ಡ್ರೆಸ್ಸಿಂಗ್ ರೂಮ್‌ನಲ್ಲಿ ಚಿಂತೆಯ ಗೆರೆಗಳು ಕಾಣಿಸಿಕೊಂಡವು.

ನಾಯಕ ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ಟೆಸ್ಟ್ ಪಂದ್ಯದ ನಾಯಕತ್ವ ಪಡೆದ ಪಂತ್ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಇತ್ತು. ಈ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಪಂತ್ ಕೊಂಚ ಎಡವಿದ್ದಾರೆ. ಆರಂಭದಲ್ಲಿ ವಿಕೆಟ್ ಬೇಟೆಯನ್ನು ನಡೆಸುವಲ್ಲಿ ಹಿನ್ನಡೆ ಅನುಭವಿಸಿದ್ದ ಪಂತ್ ಪಡೆ, ಬಳಿಕ ರನ್ ಕಲೆ ಹಾಕುವಲ್ಲಿಯೂ ಸಹ ತಡಕಾಡಿತು. ಗುವಾಹಟಿಯ ಪಿಚ್ ಮೇಲೆ ಟೀಮ್ ಇಂಡಿಯಾದ ಯುವ ಆಟಗಾರರು ಪಟಪಟನೆ ಬಂದು ಹೋಗಲು ಆರಂಭಿಸಿದರು. ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಅನುಭವಿಗಳ ಕೊರತೆ ಎದ್ದು ಕಂಡಿತು.
ಯುವಕರ ವೈಫಲ್ಯ
ಟೀಮ್ ಇಂಡಿಯಾ ಸದ್ಯ ಕಠಿಣ ಸ್ಥಿತಿಯಲ್ಲಿದೆ. ಈ ಸ್ಥಿತಿಯಿಂದ ಮೇಲೆದ್ದು ಬರುವುದು ನಿಜಕ್ಕೂ ಸವಾಲೇ ಆಗಿದೆ. ಟೀಮ್ ಇಂಡಿಯಾದ ಯುವ ಬ್ಯಾಟರ್‌ಗಳು ನೆಲಕಚ್ಚಿನಿಂತು ಆಡುವಲ್ಲಿ ವಿಫಲರಾಗುತ್ತಿದ್ದಾರೆ. ಇದೇ ಪಿಚ್ ಮೇಲೆ ದಕ್ಷಿಣ ಆಫ್ರಿಕಾದ 7ನೇ ಕ್ರಮಾಂಕದ ಬ್ಯಾಟರ್ ಶತಕ ಬಾರಿಸಿ ಮಿಂಚಿದ್ದರು. ಆದರೆ ಭಾರತೀಯ ಬ್ಯಾಟರ್‌ಗಳು 122 ರನ್ ಆಗುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರು. ಅಲ್ಲದೆ ಪಂತ್ ಪಡೆ ಈ ಪಂದ್ಯದಲ್ಲಿ ಫಾಲೋ ಆನ್ ಭೀತಿಯನ್ನು ಸಹ ಅನುಭವಿಸುತ್ತಿದೆ.
ಭಾರತ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಸತತ ಅವಕಾಶಗಳನ್ನು ಪಡೆಯುತ್ತಿರುವ ಸಾಯಿ ಸುದರ್ಶನ್ ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದರು. ಇನ್ನು ಗಿಲ್ ಅನುಪಸ್ಥಿತಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಧ್ರುವ್ ಜುರೇಲ್, ಖಾತೆಯನ್ನೇ ತೆರೆಯಲಿಲ್ಲ. ನಾಯಕ ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ ಸಹ ಬಂದು ಹೋಗುವ ಸಂಪ್ರದಾಯ ಮುಗಿಸಿದರು. ಯುವಕರು ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications