ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಕೊನೆಗೊಂಡಿದೆ. ಧರ್ಮಶಾಲಾದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಇಂಗ್ಲೆಂಡ್ ತಂಡವನ್ನು ಮಣಿಸಿದೆ. ಈ ಗೆಲುವಿನ ಮೂಲಕ ಟೀಮ್ ಇಂಡಿಯಾ, ತವರಿನಲ್ಲಿ ನಡೆದ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು 4-1ರಿಂದ ಗೆದ್ದು ಕೊಂಡಿದೆ. ಅಲ್ಲದೆ ಡಬ್ಲ್ಯುಟಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ.
ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡ ಯಶಸ್ವಿ ಜೈಸ್ವಾಲ್ ರೂಪದಲ್ಲಿ ಯುವ ಆಟಗಾರನನ್ನು ಪಡೆದಿದೆ. ಯಶಸ್ವಿ ಜೈಸ್ವಾಲ್ ಇಡೀ ಇಂಗ್ಲೆಂಡ್ ಸರಣಿಯಲ್ಲಿ ಮೇಲುಗೈ ಸಾಧಿಸಿದ್ದರು. ಇದೇ ಕಾರಣಕ್ಕೆ ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಯಶಸ್ವಿ ಇಂಗ್ಲೆಂಡ್ ವಿರುದ್ಧದ ಈ ಐದು ಪಂದ್ಯಗಳ ಸರಣಿಯಲ್ಲಿ 89 ಸರಾಸರಿಯಲ್ಲಿ 9 ಇನ್ನಿಂಗ್ಸ್‌ಗಳಲ್ಲಿ ಒಟ್ಟು 712 ರನ್ ಗಳಿಸಿದರು. ಇದರಲ್ಲಿ 2 ದ್ವಿಶತಕ ಮತ್ತು 3 ಅರ್ಧ ಶತಕಗಳು ಸೇರಿವೆ. ಅವರು ಅತಿ ಹೆಚ್ಚು ರನ್ ಗಳಿಸಿದ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಅವರ ದಾಖಲೆಯನ್ನು ಹಿಂದಿಕ್ಕುವಲ್ಲಿ ವಂಚಿತರಾದರು.

1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯ 8 ಇನ್ನಿಂಗ್ಸ್‌ಗಳಲ್ಲಿ ಸುನಿಲ್ ಗವಾಸ್ಕರ್ ಭಾರತದ ಪರ 774 ರನ್ ಗಳಿಸಿದ್ದರು. ಇದು ಭಾರತದ ಪರ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿದೆ. ಇದರ ಹೊರತಾಗಿಯೂ ಯಶಸ್ವಿ 700 ರನ್‌ಗಳ ಗಡಿ ದಾಟುವ ಮೂಲಕ ಇತಿಹಾಸ ಸೃಷ್ಟಿಸಿದರು.
ಟೆಸ್ಟ್ ಸರಣಿಯಲ್ಲಿ ಎರಡು ಬಾರಿ 700ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಏಕೈಕ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್. ಎರಡೂ ಬಾರಿ ಅವರು ವೆಸ್ಟ್ ಇಂಡೀಸ್ ವಿರುದ್ಧ ಈ ಸಾಧನೆ ಮಾಡಿದ್ದರು. 1971 ರ ನಂತರ, ಲಿಟಲ್ ಮಾಸ್ಟರ್ 1979 ರಲ್ಲಿ 91.5 ರ ಸರಾಸರಿಯಲ್ಲಿ 732 ರನ್ ಗಳಿಸಿದ್ದರು, ಇದರಲ್ಲಿ 4 ಶತಕಗಳು ಮತ್ತು ಒಂದು ಅರ್ಧ ಶತಕ ಸೇರಿದ್ದವು.
ಇದೀಗ ಟೀಂ ಇಂಡಿಯಾದ ಇನ್ನೊಬ್ಬ ಆಟಗಾರ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾನೆ. ತಮ್ಮ ವೃತ್ತಿಜೀವನದ 9 ನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ 700 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ, ಭವಿಷ್ಯದಲ್ಲಿ ಟೀಂ ಇಂಡಿಯಾದ ಸೂಪರ್ ಸ್ಟಾರ್ ಆಗಲಿದ್ದಾರೆ ಎಂದು ತೋರಿಸಿದರು.
ಸುನಿಲ್ ಗವಾಸ್ಕರ್ - 774 ರನ್, ವೆಸ್ಟ್ ಇಂಡೀಸ್ ವಿರುದ್ಧ 1971 ರಲ್ಲಿ
ಸುನಿಲ್ ಗವಾಸ್ಕರ್- 732 ರನ್, ವೆಸ್ಟ್ ಇಂಡೀಸ್ ವಿರುದ್ಧ 1979 ರಲ್ಲಿ
ಯಶಸ್ವಿ ಜೈಸ್ವಾಲ್ - 2024 ರಲ್ಲಿ ಇಂಗ್ಲೆಂಡ್ ವಿರುದ್ಧ 712 ರನ್
ವಿರಾಟ್ ಕೊಹ್ಲಿ - 2015 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 692 ರನ್
ವಿರಾಟ್ ಕೊಹ್ಲಿ - 2016 ರಲ್ಲಿ ಇಂಗ್ಲೆಂಡ್ ವಿರುದ್ಧ 655 ರನ್