ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮಂಗಳವಾರ ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರನ್ನು ಸನ್ಮಾನಿಸಲಿದೆ. ಇದಲ್ಲದೆ, 2023 ರಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಯುವ ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್‌ಗೆ ದೊಡ್ಡ ಪ್ರಶಸ್ತಿ ನೀಡಲಿದೆ.
ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರಿಗೆ ಬಿಸಿಸಿಐನ 'ಜೀವಮಾನ ಸಾಧನೆ ಪ್ರಶಸ್ತಿ' ನೀಡಿ ಗೌರವಿಸಲಾಗುವುದು. ಕಳೆದ ವರ್ಷದ ಅತ್ಯುತ್ತಮ ಪ್ರದರ್ಶನಕ್ಕಾಗಿ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರಿಗೆ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ನೀಡಲಾಗುವುದು.

ಶುಭಮನ್ ಗಿಲ್ ಕಳೆದ 12 ತಿಂಗಳಲ್ಲಿ ಏಕದಿನ ಪಂದ್ಯಗಳಲ್ಲಿ ಐದು ಶತಕಗಳನ್ನು ಗಳಿಸಿದ್ದಾರೆ. ಇದಲ್ಲದೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿ ವೇಗವಾಗಿ ಎರಡು ಸಾವಿರ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಬಿಸಿಸಿಐ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ತನ್ನ ಆಟಗಾರರನ್ನು ಗೌರವಿಸುತ್ತದೆ. ಇದಕ್ಕೂ ಮೊದಲು 2019ರಲ್ಲಿ ಕೊನೆಯ ಬಾರಿಗೆ ಬಿಸಿಸಿಐ ತನ್ನ ಆಟಗಾರರನ್ನು ಗೌರವಿಸಿತ್ತು. ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳ ಆಟಗಾರರು ಬಿಸಿಸಿಐ ಕಾರ್ಯದಲ್ಲಿ ಭಾಗವಹಿಸಬಹುದು.
61 ವರ್ಷದ ರವಿಶಾಸ್ತ್ರಿ ಭಾರತ ಪರ 80 ಟೆಸ್ಟ್ ಹಾಗೂ 150 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಕ್ರಿಕೆಟ್ ಗೆ ವಿದಾಯ ಹೇಳಿದ ನಂತರ ಕಾಮೆಂಟೇಟರ್ ಆಗಿಯೂ ಸಾಕಷ್ಟು ಫೇಮಸ್ ಆಗಿದ್ದರು. ಇದಾದ ಬಳಿಕ ಟೀಂ ಇಂಡಿಯಾದ ನಿರ್ದೇಶಕರಾಗಿ ನಂತರ ಕೋಚ್ ಕೂಡ ಆಗಿದ್ದರು.
ರವಿಶಾಸ್ತ್ರಿ ಎರಡು ಬಾರಿ ಟೀಂ ಇಂಡಿಯಾ ಕೋಚ್ ಆಗಿದ್ದರು. ಅವರು 2014 ರಿಂದ 2016 ರವರೆಗೆ ತಂಡದ ನಿರ್ದೇಶಕರಾಗಿ ರಾಷ್ಟ್ರೀಯ ತಂಡದ ಜೊತೆ ಕೆಲಸವನ್ನು ಮಾಡಿದ್ದಾರೆ. ಮತ್ತು ನಂತರ 2017 ರಿಂದ 2021 ರಲ್ಲಿ ಟಿ 20 ವಿಶ್ವಕಪ್ ವರೆಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮುಖ್ಯ ಕೋಚ್ ಪಾತ್ರವನ್ನು ನಿರ್ವಹಿಸಿದ್ದಾರೆ.

ಅವರ ಮಾರ್ಗದರ್ಶನದಲ್ಲಿ ಭಾರತ ಆಸ್ಟ್ರೇಲಿಯಾದಲ್ಲಿ ಸತತ ಎರಡು ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡಿತು. ಶಾಸ್ತ್ರಿಯವರು ಕೋಚ್ ಆಗಿ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧ ಸೋತಿತ್ತು. ಇದಲ್ಲದೆ, ಅವರ ಕೋಚಿಂಗ್ ಅಡಿಯಲ್ಲಿ ಭಾರತವು 2019 ರ ODI ವಿಶ್ವಕಪ್‌ನ ಸೆಮಿಫೈನಲ್‌ಗೆ ತಲುಪಿತ್ತು. ಇವರ ಕ್ರಿಕೆಟ್ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಬಿಸಿಸಿಐ ಸನ್ಮಾನ ಮಾಡಲಿದೆ.
ಇನ್ನು ಶುಭ್‌ಮನ್ ಗಿಲ್ ಕಳೆದ ವರ್ಷ ಭರ್ಜರಿ ಫಾರ್ಮ್ನಲ್ಲಿದ್ದರು. ಇವರು ಮುಟ್ಟಿದ್ದೆಲ್ಲವೂ ಚಿನ್ನದ ರೀತಿ ಆಗಿತ್ತು. 2023ರಲ್ಲಿ ಗಿಲ್ ಆಡಿದ 29 ಏಕದಿನ ಪಂದ್ಯಗಳಲ್ಲಿ 63.36ರ ಸರಾಸರಿಯಲ್ಲಿ 1584 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 5 ಶತಕ ಹಾಗೂ 9 ಅರ್ಧಶತಕಗಳು ಸೇರಿವೆ.
ಇನ್ನು ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಗಿಲ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 9 ಪಂದ್ಯಗಳಲ್ಲಿ 44.25ರ ಸರಾಸರಿಯಲ್ಲಿ 331 ರನ್ ಸಿಡಿಸಿದ್ದಾರೆ. ಇದರಲ್ಲಿ 4 ಅರ್ಧಶತಕಗಳೂ ಸಹ ಸೇರಿವೆ. ಈ ವೇಳೆ ಅವರ ಗರಿಷ್ಠ ಸ್ಕೋರ್ 92 ಆಗಿತ್ತು.