2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಭಾರೀ ಕುತೂಹಲ ಹೆಚ್ಚಿಸಿದೆ. ಈ ಟೂರ್ನಿ ಆರಂಭಕ್ಕೂ ಮುನ್ನ ಮೆಹಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿಯಲ್ಲಿ ಯಾವ ಸ್ಟಾರ್ ಆಟಗಾರ ಯಾವ ತಂಡ ಸೇರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.
ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಕೂಡ 2025ರ ಐಪಿಎಲ್‌ಗೆ ಪುನರಾಗಮನ ಮಾಡಲು ಸಿದ್ಧರಾಗಿದ್ದಾರೆ. ಈಗಾಗಲೇ ಅವರು ಕ್ರಿಕೆಟ್‌ನ ಎಲ್ಲಾ ಮಾದರಿಗೂ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಅವರು ಆಟಗಾರನಾಗಿ ಅಲ್ಲ, ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಫಿಕ್ಸ್ ಆಗಿದೆ.

2025ರ ಐಪಿಎಲ್ ಮೆಗಾ ಹರಾಜಿಗೂ ಮೊದಲು ಕೋಚ್ ಪಾತ್ರಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಯುವರಾಜ್ ಸಿಂಗ್ ಅವರನ್ನು ಸಂಪರ್ಕಿಸಿದೆ. ಕಳೆದ ತಿಂಗಳ ಆರಂಭದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರೊಂದಿಗಿನ 7 ವರ್ಷಗಳ ಸುದೀರ್ಘ ಪಾಲುದಾರಿಕೆ ಸಂಬಂಧವನ್ನು ಡಿಸಿ ಕಡಿತಗೊಳಿಸಿದೆ.
ವರದಿಗಳ ಪ್ರಕಾರ, ಕಳೆದ 3 ಐಪಿಎಲ್ ಆವೃತ್ತಿಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಆದರೆ ಈ ಬಾರಿ 2024ರಲ್ಲಿ ಆರನೇ ಸ್ಥಾನವನ್ನು ಗಳಿಸಿದೆ. ಯುವರಾಜ್ ಸಿಂಗ್ ಅವರನ್ನು ಟ್ರೋಫಿ ಬರವನ್ನು ಕೊನೆಗೊಳಿಸಲು ಕೋಚ್ ಮಾಡಲು ಉತ್ಸುಕವಾಗಿದೆ. ಆದರೆ ಈ ಕುರಿತು ಅಂತಿಮ ನಿರ್ಧಾರ ಇನ್ನೂ ಆಗಿಲ್ಲ. ಮುಂದಿನ ದಿನಗಳಲ್ಲಿ ಘೋಷಣೆಯಾಗುವ ಸಾಧ್ಯತೆಗಳಿವೆ.
ಯುವಿ ಮೊದಲ ಬಾರಿಗೆ ಕೋಚ್ ಪಾತ್ರದಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ. ಅವರು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯೊಂದಿಗೆ ಸಹಿ ಹಾಕಿದರೆ, ಇದು ಕ್ರಿಕೆಟ್ ತಂಡದ ಕೋಚ್ ಆಗಿ ಯುವಿ ಮೊದಲ ಅವಧಿಯಾಗಲಿದೆ. ಕಳೆದ ಕೆಲವು ವರ್ಷಗಳಲ್ಲಿ ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ ಅವರಂತಹ ಯುವ ಸ್ಟಾರ್ ಆಟಗಾರರನ್ನು ಟೀಮ್ ಇಂಡಿಯಾಗೆ ಕೊಟ್ಟಿದ್ದಾರೆ.