ಪದಾರ್ಪಣೆ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಫ್ಲಾಫ್; ಈಗ ಯುವರಾಜ್ ಸಿಂಗ್ ಅವರಿಂದ ತರಬೇತಿ?
ಟೀಮ್ ಇಂಡಿಯಾದ ಯುವ ಬ್ಯಾಟರ್ 15 ವರ್ಷದ ವೈಭವ್ ಸೂರ್ಯವಂಶಿ, ತಮ್ಮ ಚೊಚ್ಚಲ ಟಿ20 ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಇವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಲು ಅವಕಾಶ ಲಭಿಸಲಿಲ್ಲ. ಟಿ20 ಸರಣಿ ಮುಗಿದ ಬಳಿಕ ವಿಂಬಲ್ಡನ್ ಫೈನಲ್ ಪಂದ್ಯ ನೋಡಲು ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಜೊತೆಗೆ ಹೋಗಿದ್ದರು. ಆಗ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರನ್ನು ಸಹ ಭೇಟಿಯಾಗಿ ಫೋಟೋಗೆ ಪೋಸ್ ನೀಡಿದರು.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಬಳಿಕ ಟೀಮ್ ಇಂಡಿಯಾದ ಓಪನರ್‌ಗಳಾದ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ, ಯುವರಾಜ್ ಸಿಂಗ್ ಜೊತೆ ಕಾಣಿಸಿಕೊಂಡರು. ಈ ವೇಳೆ ಮಾತನಾಡಿದ್ದ ಯುವರಾಜ್ ಸಿಂಗ್, ವೈಭವ್ ಸೂರ್ಯವಂಶಿ ಅವರನ್ನು ಭೇಟಿಯಾಗುತ್ತಿರುವುದು ಇದೇ ಮೊದಲು ಎಂದು ತಿಳಿಸಿದ್ದಾರೆ. ಅಲ್ಲದೆ ಯುವಿ, ವೈಭವ್ ಅವರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ವೈಭವ್ ಆಟ ಸುಧಾರಿಸಲು, ಅವರೊಂದಿಗೆ ಕೆಲಸ ಮಾಡುವ ಬಯಕೆ ಇರುವುದಾಗಿ ಯುವರಾಜ್ ಸುಳಿವು ನೀಡಿದರು.

ಜಿಯೋ ಹಾಟ್ ಸ್ಟಾರ್ ಜೊತೆಗೆ ಮಾತನಾಡಿರುವ ಯುವರಾಜ್ ಸಿಂಗ್, ಈಗಾಗಲೇ ನಾನು ಅಭಿಷೇಕ್ ಶರ್ಮಾ ಅವರೊಂದಿಗೆ ಸಮಯ ಕಳೆದಿದ್ದೇನೆ. ವೈಭವ್ ಜೊತೆಗೂ ಸಮಯ ಕಳೆಯಲು ಬಯಸುತ್ತೇನೆ ಎಂದಿದ್ದಾರೆ.
ಯುವಿ ಹೇಳಿದ್ದಿಷ್ಟು...
ಇದೇ ವೇಳೆ ಮಾತನಾಡಿರುವ ಯುವಿ ಅಭಿಷೇಕ್ ಶರ್ಮಾ ಅವರನ್ನು ಟರ್ಮಿನೇಟರ್ 4 ಹಾಗೂ ವೈಭವ್ ಸೂರ್ಯವಂಶಿ ಅವರನ್ನು ಟರ್ಮಿನೇಟರ್ 6 ಎಂದು ಕರೆದಿದ್ದಾರೆ. ಇವರಿಬ್ಬರೂ ಕ್ರಿಕೆಟ್‌ನ ಭವಿಷ್ಯ. ತಮಗಿಂತ ಈ ಇಬ್ಬರೂ ಆಟಗಾರರು ನಾಲ್ಕು ಪಟ್ಟು ಉತ್ತಮರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ಗೂ ಮುನ್ನ ಸಂಜು ಸ್ಯಾಮ್ಸನ್ ಅವರೊಂದಿಗೆಯೂ ಸಹ ಕೆಲಸ ಮಾಡಿದ್ದರು. ಇದರ ಫಲಿತಾಂಶವನ್ನು ನಾವು ಅವರ ಟಿ20 ವಿಶ್ವಕಪ್‌ನಲ್ಲಿ ನೋಡಿದ್ದೇವೆ. ಸಂಜು ಸ್ಯಾಮ್ಸನ್ ಟಿ20 ವಿಶ್ವಕಪ್ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದು ಬೀಗಿದ್ದರು.
ವೈಭವ್ ಸಾಧನೆ
ವೈಭವ್ ಸೂರ್ಯವಂಶಿ ಭಾರತದಲ್ಲಿ ನಡೆದಿದ್ದ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ಅಬ್ಬರಿಸಿದ್ದರು. ಇವರು ರಾಜಸ್ಥಾನ ರಾಯಲ್ಸ್ ತಂಡದ ಪರ ಬ್ಯಾಟ್ ಮಾಡಿ ಆರ್ಭಟಿಸಿದ್ದರು. ಐಪಿಎಲ್ 2026ರಲ್ಲಿ ಆಡಿದ 16 ಪಂದ್ಯಗಳಲ್ಲಿ 48ರ ಸರಾಸರಿಯಲ್ಲಿ 776 ರನ್ ಕಲೆ ಹಾಕಿದ್ದರು. ಅಲ್ಲದೆ ಈ ಲೀಗ್‌ನಲ್ಲಿ 72 ಸಿಕ್ಸರ್ ಬಾರಿಸಿದ್ದರು. ಈ ಮೂಲಕ ಒಂದೇ ಲೀಗ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದರು. ಇನ್ನು ಇವರ ಭರ್ಜರಿ ಪ್ರದರ್ಶನದ ಫಲವಾಗಿ ಇವರಿಗೆ ಭಾರತ ತಂಡದಲ್ಲಿ ಸ್ಥಾನ ನೀಡಲಾಯಿತು. ಇವರು ಐರ್ಲೆಂಡ್ ಪ್ರವಾಸದಲ್ಲಿ ಪದಾರ್ಪಣೆ ಮಾಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇವರಿಗೆ ಇಂಗ್ಲೆಂಡ್ ಸರಣಿಯಲ್ಲಿ ಪದಾರ್ಪಣೆ ಮಾಡುವ ಅವಕಾಶ ಲಭಿಸಿತು. ಚೊಚ್ಚಲ ಸರಣಿಯಲ್ಲಿ ವೈಭವ್ ಆಡಿದ 3 ಪಂದ್ಯಗಳಲ್ಲಿ 42 ರನ್ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications