2011ರ ವಿಶ್ವಕಪ್ ಫೈನಲ್‌ನಲ್ಲಿ ತನಗೂ ಮುಂಚೆ ಧೋನಿ ಕಣಕ್ಕಿಳಿಯಲು ಕಾರಣ ಯಾರೆಂದು ಬಿಚ್ಚಿಟ್ಟ ಯುವರಾಜ್ ಸಿಂಗ್

2011ರ ವಿಶ್ವಕಪ್ ಫೈನಲ್ ಪಂದ್ಯವನ್ನು ಯಾವ ಭಾರತ ಕ್ರಿಕೆಟ್ ಪ್ರೇಮಿಗೆ ತಾನೇ ಮರೆಯಲು ಸಾಧ್ಯ ಹೇಳಿ? ತವರಿನಲ್ಲೇ ನಡೆದಿದ್ದ ಆ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಫೈನಲ್ ಪಂದ್ಯದಲ್ಲಿ ಬಲಿಷ್ಟ ಶ್ರೀಲಂಕಾ ವಿರುದ್ಧ ಗೆದ್ದು ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕುಮಾರ್ ಸಂಗಕ್ಕಾರ ನಾಯಕತ್ವದ ಶ್ರೀಲಂಕಾ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿ ಎದುರಾಳಿ ಟೀಮ್ ಇಂಡಿಯಾಗೆ 275 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಟೀಮ್ ಇಂಡಿಯಾ 48.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿ 6 ವಿಕೆಟ್‌ಗಳ ಜಯ ಸಾಧಿಸಿತು.
ಶ್ರೀಲಂಕಾ ಪರ ಮಹೇಲಾ ಜಯವರ್ಧನೆ 88 ಎಸೆತಗಳಲ್ಲಿ 103 ರನ್ ಬಾರಿಸಿ ಆಸರೆಯಾದರೆ, ನಾಯಕ ಕುಮಾರ್ ಸಂಗಕ್ಕಾರ 48 ರನ್ ಗಳಿಸಿದ್ದರು. ಇನ್ನು ಈ ಗುರಿಯನ್ನು ಬೆನ್ನಟ್ಟಿದ್ದ ಟೀಮ್ ಇಂಡಿಯಾ ಬೇಗನೇ ವಿರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಗೌತಮ್ ಗಂಭೀರ್ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ 83 ರನ್‌ಗಳ ಜತೆಯಾಟವನ್ನಾಡಿ ತಂಡಕ್ಕೆ ಆಸರೆಯಾದರು. ವಿರಾಟ್ ಕೊಹ್ಲಿ 35 ರನ್ ಗಳಿಸಿ ಔಟ್ ಆದರೆ, ಗೌತಮ್ ಗಂಭೀರ್ 97 ರನ್ ಗಳಿಸಿ ಔಟ್ ಆದರು. ಇನ್ನು ವಿರಾಟ್ ಕೊಹ್ಲಿ ವಿಕೆಟ್ ಬೀಳುತ್ತಿದ್ದಂತೆ ಎಂಎಸ್ ಧೋನಿ ಕಣಕ್ಕಿಳಿದು ಪ್ರೇಕ್ಷಕರಲ್ಲಿ ಅಚ್ಚರಿಯನ್ನು ಮೂಡಿಸಿದ್ದರು.
ಹೌದು, ಸಾಮಾನ್ಯವಾಗಿ ಐದನೇ ಕ್ರಮಾಂಕದಲ್ಲಿ ಯುವರಾಜ್ ಸಿಂಗ್ ಕಣಕ್ಕಿಳಿಯುತ್ತಿದ್ದರು. ಆದರೆ, ಆ ಪಂದ್ಯದಲ್ಲಿ ಮಾತ್ರ ಯುವರಾಜ್ ಸಿಂಗ್ ಬದಲು ಎಂಎಸ್ ಧೋನಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅಚ್ಚರಿ ಮೂಡಿಸುವ ಜೊತೆಗೆ ಅಜೇಯ 91 ರನ್ ಚಚ್ಚಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಆದರೆ, ಆ ಪಂದ್ಯದಲ್ಲಿ ಯುವರಾಜ್ ಸಿಂಗ್ ಬದಲಾಗಿ ಎಂಎಸ್ ಧೋನಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ವಿಷಯ ಸಾಕಷ್ಟು ವಿವಾದ ಹಾಗೂ ಟೀಕೆಗೆ ಒಳಗಾಗಿತ್ತು. ಇಂದಿಗೂ ಸಹ ಈ ವಿಷಯದ ಕುರಿತು ಚರ್ಚೆಗಳು ನಡೆಯುತ್ತಿದ್ದು, ಈ ಬಹುವರ್ಷಗಳ ಪ್ರಶ್ನೆಗೆ ಇದೀಗ ಸ್ವತಃ ಯುವರಾಜ್ ಸಿಂಗ್ ಅವರೇ ಉತ್ತರವನ್ನು ಇತ್ತಿಚಿಗೆ ನಡೆದಿರುವ ಸಂದರ್ಶನವೊಂದರಲ್ಲಿ ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ತಂಡದ ಅನುಭವಿ ಆಟಗಾರರು ಮತ್ತು ಗ್ಯಾರಿ ಕ್ರಿಸ್ಟನ್ ನಡುವೆ ಚರ್ಚೆ ನಡೆದಿತ್ತು
2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ತಮ್ಮ ಬದಲು ಎಂಎಸ್ ಧೋನಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದದ್ದು ಮ್ಯಾನೇಜ್‌ಮೆಂಟ್‌ನ ತೀರ್ಮಾನವಾಗಿತ್ತು ಎಂದು ಯುವರಾಜ್ ಸಿಂಗ್ ನ್ಯೂಸ್ 18 ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಜತೆಯಾಟ ನಡೆಯುತ್ತಿದ್ದಾಗಲೇ ಡ್ರೆಸಿಂಗ್ ರೂಮ್‌ನಲ್ಲಿ ಈ ಕುರಿತಾಗಿ ತಂಡದ ಆಟಗಾರರಾದ ವಿರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಹಾಗೂ ಕೋಚ್ ಗ್ಯಾರಿ ಕ್ರಿಸ್ಟನ್ ನಡುವೆ ಚರ್ಚೆ ನಡೆದಿತ್ತು ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.

ಯುವಿ ಬದಲು ಧೋನಿ ಬೇಗನೇ ಕಣಕ್ಕಿಳಿಯಲು ಕಾರಣವಿದು
ಇನ್ನು ಮುಂದುವರೆದು ಮಾತನಾಡಿರುವ ಯುವರಾಜ್ ಸಿಂಗ್ ಶ್ರೀಲಂಕಾ ತಂಡದಲ್ಲಿ ಇಬ್ಬರು ಎಡಗೈ ಸ್ಪಿನ್ನರ್‌ಗಳು ಇದ್ದ ಕಾರಣ ಪಂದ್ಯದ ಮಧ್ಯಮ ಓವರ್‌ಗಳಲ್ಲಿ ಓರ್ವ ಎಡಗೈ ಬ್ಯಾಟ್ಸ್‌ಮನ್ ಹಾಗೂ ಓರ್ವ ಬಲಗೈ ಬ್ಯಾಟ್ಸ್‌ಮನ್‌ಗಳ ಜೋಡಿ ಆಟವಾಡಬೇಕಾದ ಅಗತ್ಯವಿತ್ತು ಎಂದಿದ್ದಾರೆ. ಹೀಗಾಗಿ ಕಣದಲ್ಲಿದ್ದ ಆಟಗಾರರ ಪೈಕಿ ಗೌತಮ್ ಗಂಭೀರ್ ಔಟ್ ಆದರೆ ಯುವರಾಜ್ ಸಿಂಗ್ ಕಣಕ್ಕಿಳಿಯಬೇಕು ಅಥವಾ ವಿರಾಟ್ ಕೊಹ್ಲಿ ಔಟ್ ಆದರೆ ಎಂಎಸ್ ಧೋನಿ ಕಣಕ್ಕಿಳಿಯಬೇಕು ಎಂದು ಮೊದಲೇ ತೀರ್ಮಾನಿಸಲಾಗಿತ್ತು. ಈ ಕಾರಣದಿಂದ ವಿರಾಟ್ ಕೊಹ್ಲಿ ಔಟ್ ಆದ ನಂತರ ತನಗೂ ಮೊದಲೇ ಎಂಎಸ್ ಧೋನಿ ಕಣಕ್ಕಿಳಿದರು ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.

ಟೂರ್ನಿಯಲ್ಲಿ ಅಬ್ಬರಿಸಿದ್ದ ಯುವಿ
ಇನ್ನು ಈ ವಿಶ್ವಕಪ್ ಟೂರ್ನಿಯ ಸಮಯದಲ್ಲಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ ಸಹ ಯುವರಾಜ್ ಸಿಂಗ್ ಅಬ್ಬರದ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಮಿಂಚಿದ್ದ ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಟೂರ್ನಿಯಲ್ಲಿ ಒಟ್ಟು 8 ಪಂದ್ಯಗಳನ್ನಾಡಿದ್ದ ಯುವರಾಜ್ ಸಿಂಗ್ ನಾಲ್ಕು ಅರ್ಧಶತಕ ಹಾಗೂ ಒಂದು ಶತಕ ಸಹಿತ 362 ರನ್ ಕಲೆಹಾಕಿದ್ದರು ಹಾಗೂ 15 ವಿಕೆಟ್‌ಗಳನ್ನು ಉರುಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications