ZIM vs IND 4th T20: ಜೈಸ್ವಾಲ್, ಗಿಲ್ ಭರ್ಜರಿ ಬ್ಯಾಟಿಂಗ್; ಜಿಂಬಾಬ್ವೆ ಮಣಿಸಿ ಸರಣಿ ಗೆದ್ದ ಭಾರತ
ಶನಿವಾರ, ಜುಲೈ 13ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ವಿರುದ್ಧ ಪ್ರವಾಸಿ ಭಾರತ ತಂಡ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಅಲ್ಲದೆ, ಐದು ಟಿ20 ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 3-1 ಅಂತರದಲ್ಲಿ ವಶಪಡಿಸಿಕೊಂಡಿತು. ಈ ಮೂಲಕ ಟಿ20 ವಿಶ್ವ ಚಾಂಪಿಯನ್ ತನ್ನ ಖ್ಯಾತಿಗೆ ತಕ್ಕಂತೆ ಪ್ರದರ್ಶನ ನೀಡಿದೆ. ಮೊದಲ ಪಂದ್ಯದ ಹೀನಾಯ ಸೋಲು ಹೊರತುಪಡಿಸಿ, ಉಳಿದ ಪಂದ್ಯಗಳಲ್ಲಿ ತನ್ನ ಪ್ರಾಬಲ್ಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ನಾಯಕ ಸಿಕಂದರ್ ರಝಾ ಅವರ 46 ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 152 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು.
153 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಭಾರತ ತಂಡ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಅವರ ತಲಾ ಅರ್ಧಶತಕಗಳ ಸಹಾಯದಿಂದ 15.2 ಓವರ್‌ಗಳಲ್ಲಿ 156 ರನ್ ಗಳಿಸಿ ಗೆಲುವಿನ ಮುದ್ರೆಯೊತ್ತಿತು. ಈ ಮೂಲಕ ಶುಭ್ಮನ್ ಗಿಲ್ ತನ್ನ ನಾಯಕತ್ವದಲ್ಲಿ ಮೊದಲ ಟಿ20 ಸರಣಿ ಗೆದ್ದರು.
ಭಾರತ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಅತ್ಯುತ್ತಮ ಜೊತೆಯಾಟದ ಮೂಲಕ ತಮ್ಮ ತಂಡಕ್ಕೆ ಮೇಲುಗೈ ತಂದುಕೊಟ್ಟರು. ಈ ಜೋಡಿ ಮುರಿಯದ ಮೊದಲ ವಿಕೆಟ್‌ಗೆ 15.2 ಓವರ್‌ಗಳಲ್ಲಿ 156 ರನ್‌ಗಳ ಜೊತೆಯಾಟ ನಿರ್ಮಿಸಿದರು.

ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ 53 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಮೇತ ಅಜೇಯ 93 ರನ್ ಬಾರಿಸಿದರೆ, ನಾಯಕ ಶುಭ್ಮನ್ ಗಿಲ್ 39 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಮೂಲಕ ಅಜೇಯ 58 ರನ್ ಗಳಿಸಿದರು.
ಆತಿಥೇಯ ಜಿಂಬಾಬ್ವೆ ತಂಡದ ಯಾವುದೇ ಬೌಲರ್‌ಗಳು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ ಮತ್ತು ನಿರಂತರವಾಗಿ ರನ್‌ಗಳನ್ನು ಬಿಟ್ಟುಕೊಟ್ಟರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಜಿಂಬಾಬ್ವೆ ತಂಡದ ಪರ ಆರಂಭಿಕರಾದ ವೆಸ್ಲಿ ಮಾಧೆವೆರೆ ಮತ್ತು ತಡಿವಾನಾಶೆ ಮರುಮಣಿ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 8.4 ಓವರ್‌ಗಳಲ್ಲಿ 63 ರನ್‌ಗಳ ಜೊತೆಯಾಟವಾಡಿತು.
ವೆಸ್ಲಿ ಮಾಧೆವೆರೆ 24 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 25 ರನ್ ಗಳಿಸಿ ಔಟಾದರೆ, ಮರುಮಣಿ 31 ಎಸೆತಗಳಲ್ಲಿ 3 ಬೌಂಡರಿ ಮೂಲಕ 32 ರನ್ ಗಳಿಸಿ ಪೆವಿಲಿಯನ್ ಸೇರಿದರು.
ನಂತರ ಬಂದ ಬ್ರಿಯಾನ್ ಬೆನ್ನೆಟ್ 9 ರನ್ ಗಳಿಸಿದರೆ, ನಾಯಕ ಸಿಕಂದರ್ ರಝಾ 28 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಾಯದಿಂದ 46 ರನ್‌ಗಳ ಬಾರಿಸಿದರು. ನಂತರ ಬಂದ ಯಾವ ಬ್ಯಾಟರ್‌ಗಳು ದೊಡ್ಡ ಜೊತೆಯಾಟ ನೀಡಲು ವಿಫಳರಾದರು.
ಜೋನಾಥನ್ ಕ್ಯಾಂಪ್‌ಬೆಲ್ 3 ರನ್, ಡಿಯೋನ್ ಮೇಯರ್ಸ್ 12 ರನ್, ಕ್ಲೈವ್ ಮದಂಡೆ 7 ರನ್ ಮತ್ತು ಫರಾಜ್ ಅಕ್ರಮ್ 4 ರನ್ ಮಾತ್ರ ಗಳಿಸಿ ತಮ್ಮ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಬೌಲಿಂಗ್‌ನಲ್ಲಿ ಭಾರತದ ಪರ ಖಲೀಲ್ ಅಹ್ಮದ್ 4 ಓವರ್‌ಗಳಲ್ಲಿ 32 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ತುಷಾರ್ ದೇಶಪಾಂಡೆ, ವಾಷಿಂಗ್ಟನ್ ಸುಂದರ್, ಅಭಿಷೇಕ್ ಶರ್ಮಾ ಮತ್ತು ಶಿವಂ ದುಬೆ ತಲಾ ಒಂದೊಂದು ವಿಕೆಟ್ ಪಡೆದರು.
ಉಭಯ ತಂಡಗಳ ನಡುವಿನ ಐದನೇ ಹಾಗೂ ಈ ಸರಣಿಯ ಕೊನೆಯ ಟಿ20 ಪಂದ್ಯವು ಭಾನುವಾರ, ಜುಲೈ 14ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications