ZIM vs IND: ಜಿಂಬಾಬ್ವೆ ವಿರುದ್ಧ 4-1 ಅಂತರದಲ್ಲಿ ಸರಣಿ ಗೆದ್ದ ಭಾರತ ಯುವ ಪಡೆ
ಭಾನುವಾರ, ಜುಲೈ 14ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡದ ವಿರುದ್ಧ ಪ್ರವಾಸಿ ಭಾರತ ತಂಡವು 42 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಈ ಮೂಲಕ ಸಿಕಂದರ್ ರಝಾ ನಾಯಕತ್ವದ ಜಿಂಬಾಬ್ವೆ ತಂಡದ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಶುಭ್ಮನ್ ಗಿಲ್ ನಾಯಕತ್ವದ ಭಾರತೀಯ ಯುವ ಪಡೆ 4-1 ಅಂತರದಲ್ಲಿ ವಶಪಡಿಸಿಕೊಂಡಿತು. ಮೊದಲ ಪಂದ್ಯ ಸೋತ ನಂತರ, ಭಾರತ ತಂಡ ಸತತ ನಾಲ್ಕು ಪಂದ್ಯಗಳ ಗೆಲುವಿನೊಂದಿಗೆ ಪುನರಾಗಮನ ಮಾಡಿತು.

ಐದನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಸಂಜು ಸ್ಯಾಮ್ಸನ್ ಅವರ ಅಮೋಘ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 167 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.
168 ರನ್‌ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡವು ಭಾರತದ ಬೌಲರ್‌ಗಳ ಮಾರಕ ತತ್ತರಿಸಿತು ಮತ್ತು 18.3 ಓವರ್‌ಗಳಲ್ಲಿ 125 ರನ್‌ಗಳಿಗೆ ಸರ್ವಪತನ ಕಂಡಿತು ಮತ್ತು ಕೊನೆಯ ಪಂದ್ಯದ ಸೋಲಿನೊಂದಿಗೆ ಸರಣಿಯನ್ನು ಕಳೆದುಕೊಂಡಿತು.
ಜಿಂಬಾಬ್ವೆ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ವೆಸ್ಲಿ ಮಾಧೆವೆರೆ ಮತ್ತು ತಡಿವಾನಾಶೆ ಮರುಮಣಿ ಉತ್ತಮ ಆರಂಭ ನೀಡಲು ಮತ್ತೊಮ್ಮೆ ವಿಫಲರಾದರು. ಇನ್ನಿಂಗ್ಸ್‌ನ ಮೂರನೇ ಎಸೆತದಲ್ಲಿಯೇ ವೆಸ್ಲಿ ಮಾಧೆವೆರೆ ಅವರ ವಿಕೆಟ್ ಕಳೆದುಕೊಂಡಿತು.

ನಂತರ ಬಂದ ಬ್ರಿಯಾನ್ ಬೆನ್ನೆಟ್ ಕೇವಲ 10 ರನ್ ಗಳಿಸಿ ಔಟಾದರು. ಇನ್ನು ಆರಂಭಿಕ ಬ್ಯಾಟರ್ ತಡಿವಾನಾಶೆ ಮರುಮಣಿ 24 ಎಸೆತಗಳಲ್ಲಿ 5 ಬೌಂಡರಿಗಳ ಸಮೇತ 27 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಆ ಬಳಿಕ ಡಿಯೊನ್ ಮೇಯರ್ಸ್ ಭಾರತದ ಬೌಲಿಂಗ್ ದಾಳಿಗೆ ಸ್ವಲ್ಪ ಪ್ರತಿರೋಧ ಒಡ್ಡಿದರು. 32 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 34 ರನ್ ಬಾರಿಸಿ ಶಿವಂ ದುಬೆಗೆ ವಿಕೆಟ್ ಒಪ್ಪಿಸಿದರು.
ನಾಯಕ ಸಿಕಂದರ್ ರಝಾ 8 ರನ್, ಜೋನಾಥನ್ ಕ್ಯಾಂಪ್‌ಬೆಲ್ 4 ರನ್, ಕ್ಲೈವ್ ಮದಂಡೆ 1 ರನ್, ಫರಾಜ್ ಅಕ್ರಮ್ 13 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 27 ರನ್ ಗಳಿಸಿ ಕೊನೆಯಲ್ಲಿ ಹೋರಾಡಿದರು. ಉಳಿದಂತೆ ಬ್ರಾಂಡನ್ ಮವುತಾ 4 ರನ್, ಬ್ಲೆಸ್ಸಿಂಗ್ ಮುಜರಬಾನಿ 1 ರನ್ ಮಾತ್ರ ಗಳಿಸಿದರು.
ಬೌಲಿಂಗ್‌ನಲ್ಲಿ ಭಾರತ ತಂಡದ ಪರ ಮುಕೇಶ್ ಕುಮಾರ್ 3.3 ಓವರ್‌ಗಳಲ್ಲಿ 22 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಶಿವಂ ದುಬೆ 4 ಓವರ್‌ಗಳಲ್ಲಿ 25 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ತುಷಾರ್ ದೇಶಪಾಂಡೆ, ವಾಷಿಂಗ್ಟನ್ ಸುಂದರ್ ಮತ್ತು ಅಭಿಷೇಕ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಭಾರತ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಶುಭ್ಮನ್ ಗಿಲ್ ದೊಡ್ಡ ಆರಂಭ ನೀಡಲು ಸಾಧ್ಯವಾಗಲಿಲ್ಲ. 5 ಎಸೆತಗಳಲ್ಲಿ 2 ಸಿಕ್ಸರ್ ಸಮೇತ 12 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಅನ್ನು ಮೊದಲ ಓವರ್‌ನ 4ನೇ ಎಸೆತದಲ್ಲಿಯೇ ಕಳೆದುಕೊಳ್ಳಬೇಕಾಯಿತು.
ನಂತರ ಬಂದ ಅಭಿಷೇಕ್ ಶರ್ಮಾ 11 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 14 ರನ್ ಗಳಿಸಿ ಔಟಾದರೆ, ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ 14 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ಭಾರತ ತಂಡದ ಮೊತ್ತ 5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 40 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತು.
ಆಗ ಬಂದ ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ನಿಧಾನವಾಗಿ ತಂಡದ ಸ್ಕೋರ್ ಹೆಚ್ಚಿಸಲು ನೆರವಾದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 65 ರನ್‌ಗಳ ಜೊತೆಯಾಟ ನಿರ್ಮಿಸಿತು. ರಿಯಾನ್ ಪರಾಗ್ 24 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರು.
ಇನ್ನು ಸಂಜು ಸ್ಯಾಮ್ಸನ್ 45 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಮೇತ 58 ರನ್ ಬಾರಿಸಿದರು. ಕೊನೆಯಲ್ಲಿ ಶಿವಂ ದುಬೆ 12 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಮೂಲಕ 26 ರನ್ ಸಿಡಿಸಿದರು. ರಿಂಕು ಸಿಂಗ್ 9 ಎಸೆತಗಳಲ್ಲಿ 11 ರನ್ ಗಳಿಸಿದರೆ, ವಾಷಿಂಗ್ಟನ್ ಸುಂದರ್ 1 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಜಿಂಬಾಬ್ವೆ ತಂಡದ ಪರ ಬ್ಲೆಸ್ಸಿಂಗ್ ಮುಜರಬಾನಿ 2 ವಿಕೆಟ್ ಪಡೆದರೆ, ಸಿಕಂದರ್ ರಝಾ, ರಿಚರ್ಡ್ ನಗರವ ಮತ್ತು ಬ್ರಾಂಡನ್ ಮವುತಾ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನು ಭಾರತದ ಶಿವಂ ದುಬೆ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರೆ, ವಾಷಿಂಗ್ಟನ್ ಸುಂದರ್ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications