ಪ್ರವಾಸಿ ಐರ್ಲೆಂಡ್ ವಿರುದ್ಧ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಆತಿಥೇಯ ಜಿಂಬಾಬ್ವೆ 16 ಸದಸ್ಯರ ತಂಡವನ್ನು ಸೋಮವಾರ ಪ್ರಕಟಿಸಿದೆ.
ಗಮನಾರ್ಹವಾಗಿ, ಹಾಲಿ ಜಿಂಬಾಬ್ವೆ ತಂಡವು ಜೂನ್ ಮತ್ತು ಜುಲೈನಲ್ಲಿ ನಡೆದ 2023ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಸಮಯದಲ್ಲಿ ತಂಡದ ಭಾಗವಾಗಿರದ ಏಳು ಹೊಸ ಹಾಗೂ ಅನುನಭವಿ ಆಟಗಾರರನ್ನು ಒಳಗೊಂಡಿದೆ.
ತಕುದ್ಜ್ವಾನಾಶೆ ಕೈಟಾನೊ, ಟಿನಾಶೆ ಕಮುಂಹುಕಾಂವೆ, ತನಕಾ ಚಿವಂಗಾ, ಫರಾಜ್ ಅಕ್ರಮ್, ಬ್ರ್ಯಾಂಡನ್ ಮಾವುಟಾ, ಮಿಲ್ಟನ್ ಶುಂಬಾ ಮತ್ತು ಟೋನಿ ಮುನ್ಯೊಂಗಾ ಹೊಸ ಮುಖಗಳಾಗಿದ್ದು, ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನಗಳನ್ನು ಕಂಡುಕೊಂಡಿದ್ದಾರೆ.

ಈ ಏಳು ಹೊಸ ಆಟಗಾರರಲ್ಲಿ ಬಲಗೈ ಮಧ್ಯಮ ಬೌಲರ್ ಫರಾಜ್ ಅಕ್ರಮ್ 50-ಓವರ್ ಮಾದರಿಯಲ್ಲಿ ಏಕೈಕ ಅನ್‌ಕ್ಯಾಪ್ಡ್ ಆಟಗಾರನಾಗಿದ್ದಾರೆ.
ದುರದೃಷ್ಟವಶಾತ್, ಗಾಯಗಳ ಕಾರಣದಿಂದಾಗಿ ಮುಂಬರುವ ಸರಣಿಯಿಂದ ನಾಯಕ ಕ್ರೇಗ್ ಎರ್ವಿನ್, ಸೀನ್ ವಿಲಿಯಮ್ಸ್ ಮತ್ತು ಬ್ರಾಡ್ ಇವಾನ್ಸ್ ಅವರು ತಂಡದಿಂದ ಹೊರಗುಳಿದಿದ್ದಾರೆ.
ಇದೇ ವೇಳೆ, ತೆಂಡೈ ಚಟಾರ, ವೆಸ್ಲಿ ಮಾಧೆವೆರೆ ಮತ್ತು ತಡಿವಾನಾಶೆ ಮರುಮನಿ ಕೂಡ ಐರ್ಲೆಂಡ್ ವಿರುದ್ಧದ ಏಕದಿನ ಸರಣಿ ತಂಡಕ್ಕೆ ಸೇರ್ಪಡೆಗೊಂಡಿಲ್ಲ. ಇದರಿಂದಾಗಿ, ಕ್ರೇಗ್ ಎರ್ವಿನ್ ಅನುಪಸ್ಥಿತಿಯಲ್ಲಿ ಸಿಕಂದರ್ ರಝಾ ಜಿಂಬಾಬ್ವೆ ತಂಡವನ್ನು ಮುನ್ನಡೆಸಲಿದ್ದಾರೆ.

ಮೂರು ಏಕದಿನ ಪಂದ್ಯಗಳು ಕ್ರಮವಾಗಿ ಡಿಸೆಂಬರ್ 13, 15 ಮತ್ತು 17ರಂದು ನಡೆಯಲಿದ್ದು, ಎಲ್ಲ ಪಂದ್ಯಗಳೂ ಹರಾರೆಯಲ್ಲಿರುವ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿವೆ.
ತವರಿನಲ್ಲಿ ನಡೆದ 2023ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್‌ನಲ್ಲಿ ಅಗ್ರ ಎರಡರಲ್ಲಿ ಸ್ಥಾನವನ್ನು ಗಳಿಸಲು ವಿಫಲವಾದ ನಂತರ, ಜಿಂಬಾಬ್ವೆ ಕ್ರಿಕೆಟ್ ತಂಡವು ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನಿಂದ ಹೊರಬೀಳಬೇಕಾಯಿತು.
ಆ ಬಳಿಕ, ಜಿಂಬಾಬ್ವೆ ತಂಡ 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಸಹ ಕಳೆದುಕೊಂಡಿತು. ಇದರ ಜೊತೆಗೆ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸುವ 2024ರ ಐಸಿಸಿ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.
ಐರ್ಲೆಂಡ್ ವಿರುದ್ಧ 2-1 ಅಂತರದ ಟಿ20 ಸರಣಿ ಸೋಲಿನ ಹಿನ್ನಲೆಯಿಂದ ಜಿಂಬಾಬ್ವೆ ತಂಡ ಏಕದಿನ ಸರಣಿ ಪ್ರವೇಶಿಸುತ್ತಿದೆ. ಸೀನ್ ವಿಲಿಯಮ್ಸ್ ನಾಯಕತ್ವದ ತಂಡವು ಮೊದಲ ಟಿ20 ಪಂದ್ಯವನ್ನು ಕೇವಲ ಒಂದು ವಿಕೆಟ್‌ನಿಂದ ಗೆದ್ದು ಉತ್ತಮ ಆರಂಭವನ್ನು ಪಡೆಯಿತು.
ಮೊದಲ ಟಿ20 ಪಂದ್ಯದಲ್ಲಿ ಕಡಿಮೆ ಅಂತರದ ಗೆಲುವಿನ ಬಲವಾದ ಆರಂಭದ ಹೊರತಾಗಿಯೂ, ನಂತರದ ಎರಡು ಪಂದ್ಯಗಳಲ್ಲಿ ಜಿಂಬಾಬ್ವೆಯ ಕಳಪೆ ಬ್ಯಾಟಿಂಗ್ ಪ್ರದರ್ಶನವು ಸರಣಿ ಸೋಲಿಗೆ ಕಾರಣವಾಯಿತು.
ಸಿಕಂದರ್ ರಜಾ (ನಾಯಕ), ಫರಾಜ್ ಅಕ್ರಮ್, ರಿಯಾನ್ ಬರ್ಲ್, ತನಕಾ ಚಿವಂಗಾ, ಜಾಯ್ಲಾರ್ಡ್ ಗುಂಬಿ, ಲ್ಯೂಕ್ ಜೊಂಗ್ವೆ, ಇನೋಸೆಂಟ್ ಕೈಯಾ, ತಕುದ್ಜ್ವಾನಾಶೆ ಕೈಟಾನೊ, ತಿನಾಶೆ ಕಮುಂಹುಕಾಮ್ವೆ, ಕ್ಲೈವ್ ಮದಂಡೆ, ವೆಲ್ಲಿಂಗ್‌ಟನ್ ಮಸಕಜಾ, ಬ್ರ್ಯಾಂಡನ್ ಮಾವುಟಾ, ಟೋನಿ ಮುನ್ಯೊಂಗಾ, ಬ್ಲೆಸ್ಸಿಂಗ್ ಮುಜರಬಾನಿ, ರಿಚರ್ಡ್ ನಗರವ, ಮಿಲ್ಟನ್ ಶುಂಬಾ.