ZIM vs NED : ರೋಚಕ ಏಕದಿನ ಪಂದ್ಯದಲ್ಲಿ ಒಂದು ರನ್ ಅಂತರದಲ್ಲಿ ಗೆದ್ದು ಸಂಭ್ರಮಿಸಿದ ಜಿಂಬಾಬ್ವೆ

ನೆದರ್ಲ್ಯಾಂಡ್ಸ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ಒಂದು ರನ್ ಅಂತರದಲ್ಲಿ ರೋಚಕ ಜಯ ಸಾಧಿಸಿದೆ. ಕೊನೆಯ ಎಸೆತದವರೆಗೂ ನಡೆದ ರೋಚಕ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಗೆಲುವಿಗೆ ಹೋರಾಟ ಮಾಡಿದರೂ, ಸೋಲೊಪ್ಪಿಕೊಂಡಿದೆ.
ಜಿಂಬಾಬ್ವೆತ ಹರಾರೆಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ನಾಯಕ ಕ್ರೈಗ್ ಎರ್ವಿನ್ ಮತ್ತು ವೆಸ್ಲಿ ಮಾಧೆವೆರೆ ಉತ್ತಮ ಆರಂಭವನ್ನು ನೀಡಿದರು. ಈ ಜೋಡಿ ಮೊದಲನೇ ವಿಕೆಟ್‌ಗೆ 61 ರನ್ ರನ್ ಕಲೆಹಾಕಿತು. ಕ್ರೈಗ್ ಎರ್ವಿನ್ 39 ರನ್ ಗಳಿಸಿದರೆ, ವೆಸ್ಲಿ ಮಾಧೆವೆರೆ 43 ರನ್ ಗಳಿಸಿ ಔಟಾದರು.
ನಂತರ ಬಂದ ಗ್ಯಾರಿ ಬ್ಯಾಲೆನ್ಸ್ 14 ರನ್ ಗಳಿಸಿ ಔಟಾದರು. ಸೀನ್ ವಿಲಿಯಮ್ಸನ್ ಮಾತ್ರ 73 ಎಸೆತಗಳಲ್ಲಿ 11 ಬೌಂಡರಿ ಸಹಿತ 77 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಸಿಕಂದರ್ ರಜಾ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರೆ, ರಿಯಾನ್ ಬರ್ಲ್ 8 ರನ್ ಗಳಿಸಿ ಔಟಾದರು. ಕ್ಲೈವ್ ಮದಂಡೆ 57 ಎಸೆತಗಳಲ್ಲಿ 52 ರನ್ ಗಳಿಸಿ ಸೀನ್ ವಿಲಿಯಮ್ಸ್‌ಗೆ ಜೊತೆಯಾದರು.
ಅಂತಿಮವಾಗಿ ಜಿಂಬಾಬ್ಬೆ 49.2 ಓವರ್ ಗಳಲ್ಲಿ 271 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ನೆದರ್ಲ್ಯಾಂಡ್ಸ್ ಪರವಾಗಿ ಶಾರಿಜ್ ಅಹ್ಮದ್ 5 ವಿಕೆಟ್ ಪಡೆದು ಮಿಂಚಿದರು. ಕಾಲಿನ್ ಅಕರ್ಮನ್, ಪಾಲ್ ವ್ಯಾನ್ ಮೀಕೆರೆನ್ ತಲಾ ಎರಡು ವಿಕೆಟ್ ಪಡೆದುಕೊಂಡರು.

ಗೆಲುವಿನ ಹೊಸ್ತಿಲಲ್ಲಿ ಎಡವಿದ ನೆದರ್ಲ್ಯಾಂಡ್ಸ್
272 ರನ್‌ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ನೆದರ್ಲ್ಯಾಂಡ್ಸ್‌ಗೆ ಸಾಧಾರಣ ಆರಂಭ ಸಿಕ್ಕಿತು. ವಿಕ್ರಮ್‌ಜಿತ್ ಸಿಂಗ್ 14 ರನ್ ಗಳಿಸಿ ಔಟಾದರು. ಮ್ಯಾಕ್ಸ್ ಓಡೌಡ್ ಮತ್ತು ಟಾಮ್ ಕೂಪರ್ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ನೆದರ್ಲ್ಯಾಂಡ್ಸ್ ತಂಡವನ್ನು ಸುಲಭ ಗೆಲುವಿನ ಕಡೆಗೆ ಮುನ್ನಡೆಸಿದರು. ಮ್ಯಾಕ್ಸ್ ಓಡೌಡ್ 81 ರನ್ ಗಳಿಸಿದರೆ, ಟಾಮ್ ಕೂಪರ್ 74 ರನ್ ಗಳಿಸಿದರು. ನಂತರ ಬಂದ ಕಾಲಿನ್ ಅಕರ್ಮನ್ 28 ರನ್ ಗಳಿಸಿದರೆ, ಸ್ಕಾಟ್ ಎಡ್ವರ್ಡ್ಸ್ 36 ರನ್ ಗಳಿಸಿದರು.
ಒಂದು ಹಂತದಲ್ಲಿ ಸುಲಭವಾದ ಗೆಲುವಿನ ಕಡೆ ಸಾಗುತ್ತಿದ್ದ ನೆದರ್ಲ್ಯಾಂಡ್ಸ್ ತಂಡಕ್ಕೆ ವೆಸ್ಲಿ ಮಾಧೆವೆರೆ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಆಘಾತ ನೀಡಿದರು. 42ನೇ ಓವರ್ ನಲ್ಲಿ ಕಾಲಿನ್ ಅಕರ್ಮನ್, ತೇಜಾ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್ ವಿಕೆಟ್ ಪಡೆದರು.
ಆದರೂ ಅಂತಿಮ ಓವರ್ ನಲ್ಲಿ ನೆದರ್ಲ್ಯಾಂಡ್ಸ್ ಗೆಲುವಿಗೆ 19 ರನ್‌ಗಳ ಅಗತ್ಯವಿತ್ತು. ರಯಾನ್ ಕ್ಲೈನ್ ಮೊದಲನೇ ಎಸೆತವನ್ನೇ ಬೌಂಡರಿಗೆ ಅಟ್ಟಿದರು, ಎರಡನೇ ಎಸೆತದಲ್ಲಿ ಎರಡು ರನ್ ಬಂದರೆ, ಮೂರನೇ ಎಸೆತದಲ್ಲಿ ಕೇವಲ ಒಂದು ರನ್ ಬಂದಿತು. ಈ ಸಂದರ್ಭದಲ್ಲಿ ಮೂರು ಎಸೆತಗಳಲ್ಲಿ 12 ರನ್ ಬೇಕಾಗಿತ್ತು, ನಾಲ್ಕನೇ ಎಸೆತದಲ್ಲಿ 2 ರನ್ ಬಂದರೆ, 5ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ರಯಾನ್ ಕ್ಲೈನ್ ನೆದರ್ಲ್ಯಾಂಡ್ಸ್‌ಗೆ ಗೆಲುವಿನ ಭರವಸೆ ನೀಡಿದರು, ಅಂತಿಮ ಎಸೆತದಲ್ಲಿ ನೆದರ್ಲ್ಯಾಂಡ್ಸ್ ಗೆಲುವಿಗೆ 4 ರನ್ ಬೇಕಿತ್ತು, ಬೌಂಡರಿ ಕಡೆ ಹೊಡೆದು ರನ್ ಓಡಲು ಆರಂಭಿಸಿದರು, ಕೇವಲ ಎರಡು ರನ್ ಓಡಿ ಮೂರನೇ ರನ್ ಕದಿಯುವಷ್ಟರಲ್ಲಿ ರನೌಟ್ ಆಗುವ ಮೂಲಕ 1 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ಉಭಯ ತಂಡಗಳ ಆಡುವ ಬಳಗ
ಜಿಂಬಾಬ್ವೆ: ಕ್ರೇಗ್ ಎರ್ವಿನ್ (ನಾಯಕ), ವೆಸ್ಲಿ ಮಾಧೆವೆರೆ, ಗ್ಯಾರಿ ಬ್ಯಾಲೆನ್ಸ್, ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ರಯಾನ್ ಬರ್ಲ್, ಕ್ಲೈವ್ ಮದಂಡೆ (ವಿಕೆಟ್ ಕೀಪರ್), ವೆಲ್ಲಿಂಗ್ಟನ್ ಮಸಕಡ್ಜಾ, ಬ್ರಾಡ್ ಇವಾನ್ಸ್, ಟೆಂಡೈ ಚಟಾರಾ, ಬ್ಲೆಸ್ಸಿಂಗ್ ಮುಜರಬಾನಿ.
ನೆದರ್ಲ್ಯಾಂಡ್ಸ್: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಟಾಮ್ ಕೂಪರ್, ಕಾಲಿನ್ ಅಕರ್ಮನ್, ಮೂಸಾ ಅಹ್ಮದ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ತೇಜಾ ನಿಡಮನೂರು, ಶರೀಜ್ ಅಹ್ಮದ್, ಪಾಲ್ ವ್ಯಾನ್ ಮೀಕೆರೆನ್, ಫ್ರೆಡ್ ಕ್ಲಾಸೆನ್, ರಯಾನ್ ಕ್ಲೈನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications