ಜಿಂಬಾಬ್ವೆ ಕ್ರಿಕೆಟ್‌ನ ದಿಗ್ಗಜ ಆಟಗಾರ ಹೀತ್ ಸ್ಟ್ರೀಕ್ ತಮ್ಮ 49ರ ಹರೆಯದಲ್ಲಿ ನಿಧನರಾಗಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ ಸ್ವತಃ ಹೀತ್ ಸ್ಟ್ರೀಕ್ ಅವರು ತಮ್ಮ ಸಹ ಆಟಗಾರನಿಗೆ ಸಂದೇಶ ಕಳುಹಿಸಿ ಈ ಸುದ್ದು ನಿಜವಲ್ಲ ಎಂದುದ್ದಾರೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಹೀತ್ ಸ್ಟ್ರೀಕ್ ಅವರ ಸಹ ಆಟಗಾರನಾಗಿದ್ದ ಹೆನ್ರಿ ಒಲೊಂಗಾ ಅವರು ಹೀತ್ ಸ್ಟ್ರೀಕ್ ಸಾವಿನ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು. ಆದರೆ ಇದೀಗ ಟ್ವೀಟ್ ಡಿಲೀಟ್ ಮಾಡಿದ್ದು ಹೀತ್ ಸ್ಟ್ರೀಕ್ ಅವರಿಂದ ಬಂದಿರುವ ಸಂದೇಶವನ್ನು ಹಂಚಿಕೊಂಡಿದ್ದಾರೆ. ಹೀತ್ ಸ್ಟ್ರೀಕ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು, ಹಾಗಾಗಿ ಕ್ಯಾನ್ಸರ್ ವಿರುದ್ಧ ಸಾಕಷ್ಟು ಹೋರಾಟದ ಬಳಿಕ ಈ ದಿಗ್ಗಜ ಕ್ರಿಕೆಟಿಗ ಕೊನೆಯುಸಿರೆಳೆದಿದ್ದಾರೆ ಎಂದು ಈ ಮೊದಲು ವರದಿಯಾಗಿತ್ತು
ಹೀತ್ ಸ್ಟ್ರೀಕ್ ಜಿಂಬಾಬ್ವೆ ಕಂಡ ಸರ್ವಶ್ರೇಷ್ಠ ಕ್ರಿಕೆಟಿಗ ಎಂದು ಕರೆಸಿಕೊಳ್ಳುತ್ತಾರೆ. 2000-2004ರ ಅವಧಿಯಲ್ಲಿ ತಂಡವನ್ನು ನಾಯಕನಾಗಿಯೂ ಮುನ್ನಡೆಸಿದ್ದರು. ಒಟ್ಟಾರೆಯಾಗಿ ತಮ್ಮ 12 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಅವರು 65 ಟೆಸ್ಟ್ ಪಂದ್ಯಗಳನ್ನು ಮತ್ತು 189 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಒಂದು ಹಂತದಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡವನ್ನು ಒಬ್ಬಂಟಿಯಾಗಿ ಮೇಲಕ್ಕೆತ್ತುವ ಪ್ರಯತ್ನ ನಡೆಸಿದ್ದರು ಹೀತ್ ಸ್ಟ್ರೀಕ್.

ಕ್ರಿಕೆಟ್ ಮೈದಾನದಲ್ಲಿ ಸಾಕಷ್ಟು ದಾಖಲೆಗಳನ್ನು ಕೂಡ ಬರೆದುಕೊಂಡಿರುವ ಇವರು ಜಿಂಬಾಬ್ವೆ ಪರ ಹಲವು ವಿಶೇಷ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಜಿಂಬಾಬ್ವೆ ತಂಡದ ಪರವಾಗಿ 100 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಏಕೈಕ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. 2005ರಲ್ಲಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಅಂತ್ಯವಾಗಿತ್ತು
ಹೀತ್ ಸ್ಟ್ರೀಕ್ ಅವರ ಮಾಜಿ ಬೌಲಿಂಗ್ ಜೊತೆಗಾರ ಹೆನ್ರಿ ಒಲೊಂಗ ಟ್ವಿಟ್ಟರ್‌ನಲ್ಲಿ ಕಂಬನಿ ಮಿಡಿದಿದ್ದಾರೆ. "ಬೇಸರದ ಸುದ್ದಿ ಬರುತ್ತಿದ್ದು ಹೀತ್ ಸ್ಟ್ರೀಕ್ ಅವರು ಬದುಕಿನ ಅಧ್ಯಾಯವನ್ನು ಮುಗಿಸಿದ್ದಾರೆ. ಜಿಂಬಾಬ್ವೆ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಆಲ್‌ರೌಂಡರ್. ನಿಮ್ಮೊಂದಿಗೆ ಆಡಿದ್ದು ಅತ್ಯುತ್ತವಾದ ಅವಕಾಶ. ನನ್ನ ಬೌಲಿಂಗ್ ಅವಧಿ ಮುಗಿದಾಗ ನಿಮ್ಮೊಂದಿಗೆ ಮತ್ತೊಂದು ಅಧ್ಯಾಯದಲ್ಲಿ ಆಡಲು ಜೊತೆಯಾಗುತ್ತೇನೆ" ಎಂದು ಹೆನ್ರಿ ಒಲೊಂಗಾ ಭಾವುಕರಾಗಿ ಟ್ವೀಟ್ ಮಾಡಿದ್ದರು. ಇದು ಕ್ರಿಕೆಟ್ ಲೋಕವನ್ನು ದಂಗುಬಡಿಸಿತ್ತು
ಹೀತ್ ಸ್ಟ್ರೀಕ್ ಬೌಲಿಂಗ್ ಮೂಲಕ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಸಾಕಷ್ಟು ಕೊಡುಗೆ ನೀಡಿ ಗಮನಸೆಳೆದಿದ್ದರು. ಮಧ್ಯಮ ಕ್ರಮಾಂಕದಲ್ಲಿ ಹಲವಾರು ಸ್ಮರಣೀಯ ಇನ್ನಿಂಗ್ಸ್ ಆಡಿರುವ ಸ್ಟ್ರೀಕ್ ಟೆಸ್ಟ್ ಕ್ರಿಕೆಟ್‌ನಲ್ಲಿ 1990 ಟೆಸ್ಟ್ ರನ್ ಬಾರಿಸಿದ್ದರೆ ಏಕದಿನ ಮಾದರಿಯಲ್ಲಿ 2943 ರನ್‌ಗಳನ್ನು ಬಾರಿಸಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ವಿರುದ್ಧ ಹರಾರೆಯಲ್ಲಿ ಔಟಾಗದೆ 127 ರನ್ ಗಳಿಸಿದ್ದು ಅವರ ಏಕೈಕ ಟೆಸ್ಟ್ ಶತಕವಾಗಿದೆ.
ಹೀತ್ ಸ್ಟ್ರೀಕ್ ಟೆಸ್ಟ್ ಕ್ರಿಕೆಟ್‌ನಲ್ಲಿ 28.14ರ ಸರಾಸರಿಯಲ್ಲಿ 216 ವಿಕೆಟ್‌ಗಳನ್ನು ಪಡೆದಿದ್ದರೆ ಏಕದಿನ ಮಾದರಿಯಲ್ಲಿ 29.8 ಸರಾಸರಿಯಲ್ಲಿ 239 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 455 ವಿಕೆಟ್‌ಗಳನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದರು. 4933 ಅಂತಾರಾಷ್ಟ್ರೀಯ ರನ್‌ಗಳನ್ನು ಕಲೆಹಾಕಿದ್ದರು.
1993ರಲ್ಲಿ ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಾನು ಆಡಿದ ಎರಡನೇ ಟೆಸ್ಟ್ ಪಂದ್ಯ ರಾವಲ್ಪಿಂಡಿ ಟೆಸ್ಟ್‌ನಲ್ಲಿ 8 ವಿಕೆಟ್‌ಗಳನ್ನು ಪಡೆದು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಅಲ್ಲಿಂದ ಬಳಿಕ ಹೀತ್ ಸ್ಟ್ರೀಕ್ ಹಿಂದಿರುಗಿ ನೋಡಿರಲಿಲ್ಲ. ಬೌಲರ್ ಆಗಿ ಮಾತ್ರವಲ್ಲದೆ ಆಲ್‌ರೌಂಡರ್ ಆಗಿ ಜಿಂಬಾಬ್ವೆ ಕ್ರಿಕೆಟ್‌ಗೆ ದೊಡ್ಡ ಕೊಡುಗೆ ನೀಡಿದ್ದಾರೆ.
ಇನ್ನು ನಿವೃತ್ತಿಯ ಬಳಿಕವೂ ಹೀತ್ ಸ್ಟ್ರೀಕ್ ಕ್ರಿಕೆಟ್ ಅಂಗಳದಲ್ಲಿ ಕೋಚ್ ಆಗಿ ಸಕ್ರಿಯವಾಗಿದ್ದರು. ಜಿಂಬಾಬ್ವೆ ಸೇರಿದಂತೆ ಸ್ಕಾಟ್ಲೆಂಡ್, ಬಾಂಗ್ಲಾದೇಶ ಹಾಗೂ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗೂ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.