ಫುಟ್‌ಬಾಲ್ ಲೋಕದ ದೊರೆ ಲಿಯೋನೆಲ್ ಮೆಸ್ಸಿ ವಿಶ್ವದೆಲ್ಲೆಡೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ಲಿಯೋನೆಲ್ ಮೆಸ್ಸಿ ಅವರನ್ನು ನೋಡಬೇಕು ಎಂಬುದು ಅದೆಷ್ಟೋ ಅಭಿಮಾನಿಗಳ ಕನಸಾಗಿದೆ. ಈಗ ಮೆಸ್ಸಿ ಅವರನ್ನು ನೋಡಿ ಕಣ್ತುಂಬಿಕೊಳ್ಳುವ ಅವಕಾಶ ಭಾರತೀಯರಿಗೆ ಸಿಗುತ್ತಿದೆ. ಅದುವೇ ದೇವರ ನಾಡು ಕೇರಳದಲ್ಲಿ ಮೆಸ್ಸಿ ಅವರನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲ, ಮೆಸ್ಸಿ ಆಟವನ್ನು ನೋಡಬಹುದಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಕ್ರಿಕೆಟ್ ಆಟಕ್ಕೆ ವಿಶೇಷ ಸ್ಥಾನಮಾನವಿದೆ. ನಂತರ ಫುಟ್‌ಬಾಲ್ ಆಟಕ್ಕೆ ಅಭಿಮಾನಿಗಳ ಬಳಗ ಕೂಡ ದೊಡ್ಡದಿದೆ. ಅದರಲ್ಲೂ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಭಾರತದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿದೆ. ಇಂತಹ ಸಂದರ್ಭದಲ್ಲಿ ಅರ್ಜೆಂಟೀನಾದ ಸ್ಟಾರ್ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ 14 ವರ್ಷಗಳ ನಂತರ ಭಾರತದಲ್ಲಿ ತಮ್ಮ ಆಟದ ಮ್ಯಾಜಿಕ್ ತೋರಿಸಲು ಸಿದ್ಧರಾಗಿದ್ದಾರೆ.

ಕೊನೆಯ ಬಾರಿಗೆ ಮೆಸ್ಸಿ 2011 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅರ್ಜೆಂಟೀನಾ ಮತ್ತು ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿ ವೆನೆಜುವೆಲಾ ನಡುವೆ ಪಂದ್ಯ ನಡೆದಿತ್ತು. ಇದೀಗ 14 ವರ್ಷಗಳ ನಂತರ ವಿಶ್ವಚಾಂಪಿಯನ್ ಅರ್ಜೆಂಟೀನಾ ತಂಡ ಮುಂದಿನ ವರ್ಷ ಭಾರತದಲ್ಲಿ ಪಂದ್ಯಗಳನ್ನು ಆಡಲಿದ್ದು, ಮೆಸ್ಸಿ ಅವರನ್ನು ಭಾರತದ ನೆಲದಲ್ಲಿ ಮತ್ತೊಮ್ಮೆ ನೋಡಲು ಭಾರತೀಯರು ಕಾಯುತ್ತಿದ್ದಾರೆ.
ಚಾಂಪಿಯನ್ ಅರ್ಜೆಂಟೀನಾ ಫುಟ್‌ಬಾಲ್ ತಂಡವು ಮುಂದಿನ ವರ್ಷ ಅಂದರೆ 2025ರಲ್ಲಿ ಕೇರಳದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ಸಿದ್ಧವಾಗಿದೆ. ಅರ್ಜೆಂಟೀನಾ ತಂಡದ ಜೊತೆಗೆ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ ಕೂಡ ಕೇರಳ ಬಂದು ಪಂದ್ಯಗಳನ್ನು ಆಡಲಿದ್ದಾರೆ. ಈ ಪಂದ್ಯವನ್ನು ಆಯೋಜಿಸಲು ಅಗತ್ಯವಿರುವ ಹಣವನ್ನು ಪ್ರಾಯೋಜಕತ್ವದ ಮೂಲಕ ಒದಗಿಸಲಾಗುವುದು ಎಂದು ಕೇರಳ ರಾಜ್ಯ ಸರ್ಕಾರದ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್ ಅವರು ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್ ಅವರು, ರಾಜ್ಯ ಸರ್ಕಾರದ ಸಂಪೂರ್ಣ ಉಸ್ತುವಾರಿಯಲ್ಲಿ ಅರ್ಜೆಂಟೀನಾ ಪಂದ್ಯ ನಡೆಯಲಿದೆ. ಈ ಉನ್ನತ ಮಟ್ಟದ ಫುಟಾಬಾಲ್ ಪಂದ್ಯವನ್ನು ಆಯೋಜಿಸಲು ರಾಜ್ಯದ ಉದ್ಯಮಿಗಳಿಂದ ಎಲ್ಲಾ ಹಣಕಾಸಿನ ನೆರವು ನೀಡಲಾಗುವುದು. ಒಂದೂವರೆ ತಿಂಗಳ ನಂತರ ತಂಡ ಕೇರಳ ತಲುಪಲಿದ್ದು, ಈ ಕುರಿತು ಅಧಿಕೃತ ಘೋಷಣೆ ಮಾಡಲಿದೆ. ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ ಎಂದು ಹೇಳಿದ್ದಾರೆ.
ಕೇರಳದಲ್ಲಿ ನಡೆಯಲಿರುವ ಈ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಚಾಂಪಿಯನ್ ಅರ್ಜೆಂಟೀನಾ ತಂಡ ಯಾರನ್ನು ಎದುರಿಸಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಫಿಫಾದ ಅಗ್ರ 50 ತಂಡಗಳಲ್ಲಿ ಒಂದನ್ನು ಅರ್ಜೆಂಟೀನಾ ಎದುರಿಸಲಿದೆ. 15ನೇ ಸ್ಥಾನದಲ್ಲಿರುವ ಜಪಾನ್ ವಿರುದ್ಧ ಅರ್ಜೆಂಟೀನಾ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಇದಲ್ಲದೆ, ಇರಾನ್ (19), ದಕ್ಷಿಣ ಕೊರಿಯಾ (22), ಆಸ್ಟ್ರೇಲಿಯಾ (24) ಮತ್ತು ಕತಾರ್ (46) ಫಿಫಾ ಶ್ರೇಯಾಂಕ ಅಗ್ರ 50 ರಲ್ಲಿರುವ ತಂಡಗಳಾಗಿವೆ.
ಅರ್ಜೆಂಟೀನಾ ಫುಟಾಬಾಲ್ ತಂಡವನ್ನು ಕೇರಳಕ್ಕೆ ಕರೆತರಲು 100 ಕೋಟಿಗೂ ಹೆಚ್ಚು ವೆಚ್ಚವಾಗಹುದು. ಮೆಸ್ಸಿ 2022ರಲ್ಲಿ ಅರ್ಜೆಂಟೀನಾ ತಂಡವನ್ನು ಫಿಫಾ ವಿಶ್ವಕಪ್ ಪ್ರಶಸ್ತಿಯತ್ತ ಮುನ್ನಡೆಸಿದ್ದರು. ಇದು ಅವರ ವೃತ್ತಿಜೀವನದ ಅತ್ಯುನ್ನತ ಟ್ರೋಫಿಯಾಗಿದೆ.