ಬೆಂಗಳೂರು ತಂಡದಿಂದ ಹೊಸ ಇತಿಹಾಸ, ಎಎಫ್ ಸಿ ಫೈನಲಿಗೆ ಲಗ್ಗೆ
ಬೆಂಗಳೂರು, ಅಕ್ಟೋಬರ್ 20: ನಾಯಕ ಸುನಿಲ್ ಛೇಟ್ರಿ ಅವರ ಅಮೋಘ ಆಟದ ನೆರವಿನಿಂದ ಬೆಂಗಳೂರು ಫುಟ್ಬಾಲ್ ಕ್ಲಬ್(ಬಿಎಫ್ ಸಿ) ತಂಡ ಏಷ್ಯನ್ ಫುಟ್ಬಾಲ್ (ಎಎಫ್ಸಿ) ಕಪ್ ನ ಫೈನಲಿಗೆ ಲಗ್ಗೆ ಇಟ್ಟಿದೆ. ಈ ಪ್ರತಿಷ್ಠಿತ ಟೂರ್ನಿಯ ಅಂತಿಮ ಹಂತ ತಲುಪಿದ ಭಾರತದ ಮೊಟ್ಟಮೊದಲ ಕ್ಲಬ್ ಎನ್ನುವ ಸಾಧನೆ ಬಿಎಫ್ ಸಿ ತಂಡದ್ದಾಗಿದೆ.
ಕಂಠೀರವ ಸ್ಟೇಡಿಯಂನಲ್ಲಿ ಬುಧವಾರ ನಡೆದ ಎಎಫ್ಸಿ ಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡದ ನಾಯಕ ಸುನೀಲ್ ಛೇಟ್ರಿ ಬಾರಿಸಿದ ಅವಳಿ ಗೋಲುಗಳು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಸೆಮಿಫೈನಲ್ ಹಂತದ ಎರಡನೇ ಪಂದ್ಯ ಇದಾಗಿತ್ತು.

ಹಾಲಿ ಚಾಂಪಿಯನ್ ಮಲೇಷ್ಯಾದ ಜೋಹರ್ ದಾರುಲ್ ತಜೀಮ್ (ಜೆಡಿಟಿ) ತಂಡವನ್ನು ಬಿಎಫ್ ಸಿ 1-3 ಅಂತರದಿಂದ ಸೋಲಿಸಿತು.
ಇದಕ್ಕೂ ಮುನ್ನ ಸೆಪ್ಟೆಂಬರ್ 28 ರಂದು ಮಲೇಷ್ಯಾದಲ್ಲಿ ನಡೆದಿದ್ದ ಸೆಮಿಫೈನಲ್ ಚರಣದ ಮೊದಲ ಪಂದ್ಯದಲ್ಲಿ ಬಿಎಫ್ಸಿ 1-1 ಗೋಲುಗಳಿಂದ ಡ್ರಾ ಮಾಡಿಕೊಂಡಿತ್ತು. ಈ ಮೂಲಕ ಜೆಡಿಟಿ ತಂಡವನ್ನು ಸೆಮಿಫೈನಲ್ ಲೆಗ್ ನಲ್ಲಿ 4-2 ಗೋಲು ಸರಾಸರಿಯಲ್ಲಿ ಮಣಿಸಿದ ಬಿಎಫ್ಸಿ ಫೈನಲ್ ತಲುಪಿದೆ.
ಬಿಎಫ್ಸಿ ತಂಡದ ಪರ ನಾಯಕ ಛೇಟ್ರಿ (41, 67ನೇ ನಿಮಿಷ) ಜೋಡಿ ಗೋಲು ಬಾರಿಸಿದರು. ಗೊಂಜಾಲೆಜ್ 75ನೇ ನಿಮಿಷದಲ್ಲಿ ಗೋಲು ಬಾರಿಸಿ ಗೆಲುವಿನ ಅಂತರ ಹಿಗ್ಗಿಸಿದರು.
ಎಎಫ್ಸಿ ಕಪ್ ಫೈನಲ್ ಪಂದ್ಯ ನವೆಂಬರ್ 5ರಂದು ಕತಾರ್ ನ ದೋಹಾದಲ್ಲಿ ನಡೆಯಲಿದೆ. ಬಿಎಫ್ಸಿ ತಂಡ ಇರಾಕ್ನ ಅಲ್ ಕ್ಯುವಾ ಅಲ್ ಜಾವಿಯಾ ತಂಡವನ್ನು ಪ್ರಶಸ್ತಿಗಾಗಿ ಎದುರಿಸಲಿದೆ. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications