
ಮ್ಯಾಡ್ರಿಡ್, ಮಾರ್ಚ್ 06 : ಎಜಾಕ್ಸ್ ಆಮ್ಸಟರ್ಡಾಮ್ ಆಡಿದ ಅದ್ಭುತ ಆಟದಿಂದ, ಕಳೆದ ಬಾರಿಯ ಚಾಂಪಿಯನ್ ರಿಯಲ್ ಮ್ಯಾಡ್ರಿಡ್ 4-1 ಅಂತರದಿಂದ ಅವಮಾನಕರ ಸೋಲು ಅನುಭವಿಸಿ ಚಾಂಪಿಯನ್ಸ್ ಲೀಗ್ ನಿಂದ ಹೊರಬಿದ್ದಿದೆ.
2016ರಿಂದ ತನ್ನ ಅಧಿಪತ್ಯವನ್ನು ಸ್ಥಾಪಿಸಿಕೊಂಡು ಬಂದಿದ್ದ ರಿಯಲ್ ಮ್ಯಾಡ್ರಿಡ್ ಕಳೆದ ವಾರಪೂರ್ತಿ ಕಳಪೆಯಾಗಿ ಆಡಿದೆ. ಒಂದರಹಿಂದೊಂದರಂತೆ ಬಾರ್ಸಿಲೋನಾ ವಿರುದ್ಧ ಸೋಲಪ್ಪಿರುವ ರಿಯಲ್ ಮ್ಯಾಡ್ರಿಡ್ ತನ್ನ ಮಾಂತ್ರಿಕ ಸ್ಪರ್ಶವನ್ನು ಕಳೆದುಕೊಂಡಿದೆ.
ರಿಯಲ್ ಮ್ಯಾಡ್ರಿಡ್ ಕಳಪೆ ಪ್ರದರ್ಶನದಿಂದ ಕೋಚ್ ಸ್ಯಾಂಟಿಯಾಗೋ ಸೋಲಾರಿ ಅವರು ನಿರಾಶರಾಗಿದ್ದಾರೆ. ಈ ಸೀಸನ್ ನಲ್ಲಿ ಅವರ ಸ್ಥಾನ ಗಟ್ಟಿಯಾಗಿದೆಯಾದರೂ, ಅನನುಭವಿ ಎಜಾಕ್ಸ್ ಅಮ್ಸಟರ್ಡಾಮ್ ಎದುರು ತೋರಿಸಿದ ಅತ್ಯಂತ ಕಳಪೆ ಪ್ರದರ್ಶನದಿಂದ ಅವರು ತಮ್ಮ ಸ್ಥಾನ ಉಳಿಸಿಕೊಳ್ಳಲಿಕ್ಕಿಲ್ಲ.
ಸ್ಫೂರ್ತಿಯುತ ನಾಯಕ ಸೆರ್ಗಿಯೋ ರಾಮೋಸ್ ಅವರು ಅಮಾನತಾಗಿರುವುದರಿಂದ ತಂಡದ ಒಟ್ಟಾರೆ ಆಟದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ. ಮೊದಲಾರ್ಧದಲ್ಲಿ ಎರಡು ಬಾರಿ ಚಾನ್ಸ್ ಮಿಸ್ ಮಾಡಿಕೊಂಡ ರಿಯಲ್ ಮ್ಯಾಡ್ರಿಡ್, ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನ ತೋರಿದರೂ 62ನೇ ನಿಮಿಷದಲ್ಲಿ ಸೆರ್ಬಿಯಾದ ಅಂತಾರಾಷ್ಟ್ರೀಯ ಆಟಗಾರ ಟಾಡಿಕ್ ಅವರು ಗಳಿಸಿದ ಅದ್ಭುತ ಗೋಲು ಮ್ಯಾಡ್ರಿಡ್ ತಂಡವನ್ನು ಕಕ್ಕಾಬಿಕ್ಕಿಯಾಗಿಸಿತು.
ಅಷ್ಟರಲ್ಲಾಗಲೇ ಬಸವಳಿಸಿದ್ದ ರಿಯಲ್ ಮ್ಯಾಡ್ರಿಡ್ ಗೆ ಪರ್ಯಾಯ ಆಟಗಾರ ಮಾರ್ಕೋ ಅಸೆನ್ಸಿಯೋ ಅವರು ಒಂದು ಗೋಲು ಗಳಿಸಿ ಆಶಾಕಾರಣ ಮೂಡಿಸಿದರಾದರೂ, ಎಜಾಕ್ಸ್ ತಂಡದ ಲಾಸ್ಸಿ ಶೋನ್ ಅವರು ಫ್ರೀಕಿಕ್ ಮೂಲಕ ಗಳಿಸಿ ಮತ್ತೊಂದು ಗೋಲಿನಿಂದ ರಿಯಲ್ ಮ್ಯಾಡ್ರಿಡ್ ಗೆ ಮೇಲೇಳಲಾರದಂಥ ಆಘಾತವಾಗಿತ್ತು.
ಗಾಯದ ಮೇಲೆ ಉಪ್ಪು ಸುರಿದಂತೆ, ಕಳೆದ ಮೂರು ಚಾಂಪಿಯನ್ಸ್ ಲೀಗ್ ಚಾಂಪಿಯನ್ ಆಗಿರುವ ರಿಯಲ್ ಮ್ಯಾಡ್ರಿಡ್ ತಂಡ ಸ್ಟಾರ್ ಆಟಗಾರ ನಾಚೋ ಅವರನ್ನು ಹೊರಗೆ ಕಳಿಸಲಾಯಿತು. ಈ ವಾರ ಪೂರ್ತಿ ಅತ್ಯಂತ ಕಳೆಪೆಯಾಗಿ ಆಡಿದ್ದೇವೆ. ಈ ರಾತ್ರಿಯ ಸೋಲಿಗೆ ಯಾವುದೇ ಸಮಜಾಯಿಷಿಯನ್ನೂ ನೀಡುವಂತಿಲ್ಲ. ಆದರೂ ನಾವು ತಲೆತಗ್ಗಿಸಿಕೊಂಡು ಓಡಾಡುವಂತಿಲ್ಲ ಎಂದು ರಿಯಲ್ ಡಿಫೆಂಡರ್ ಡಾನಿ ಕಾರ್ವಾಜಲ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
1995ರಲ್ಲಿ ಚಾಂಪಿಯನ್ ಶಿಪ್ ಗೆದ್ದಿದ್ದ ಎಜಾಕ್ಸ್, ಅದಕ್ಕೂ ಹಿಂದೆ ನಾಲ್ಕು ಬಾರಿ ವಿಜೇತವಾಗಿದೆ. 2003ರಿಂದೀಚೆಗೆ ಎಂಟರ ಹಂತಕ್ಕೆ ಮೊದಲ ಬಾರಿ ತಲುಪಿದೆ.