ಪೋರ್ಚುಗಲ್ ಹಾಗೂ ಅಲ್ ನಾಸರ್ ಕ್ಲಬ್ ತಂಡದ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ತಮ್ಮ ಬಹು ದಿನದ ಗೆಳತಿ ಜಾರ್ಜಿನಾ ಡ್ರಿಗಸ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ರೊನಾಲ್ಡೊ ಸಾಮಾಜಿಕ ತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ತಮ್ಮ ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿರುವ ರೊನಾಲ್ಡೊ ಫೋಟೋ ಒಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾರೆ. ಫೋಟೋದಲ್ಲಿ ಜಾರ್ಜಿನಾ ಹಾಗೂ ರೊನಾಲ್ಡೊ ಅವರ ಕೈಯನ್ನು ಕಾಣಬಹುದಾಗಿದೆ.
ಈ ಫೋಟೋದ ಕಳೆಗಡೆ ರೊನಾಲ್ಡೊ ಈ ಜೀವನದಲ್ಲಿ ಮತ್ತು ಮುಂಬರುವ ಪ್ರತಿಯೊಂದು ಜೀವನದಲ್ಲಿ ಎಂದು ಬರೆದುಕೊಂಡಿದ್ದಾರೆ. ಇವರಿಬ್ಬರೂ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಸುಮಾರು ೯ ವರ್ಷಗಳ ಬಳಿಕ ರೊನಾಲ್ಡೊ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರಿಬ್ಬರಿಗೆ ಸದ್ಯ 4 ಮಕ್ಕಳಿವೆ. 2017 ರಲ್ಲಿ ಅವಾ ಮಾರಿಯಾ ಮತ್ತು ಮಾಟಿಯಾ ಎಂಬ ಮಕ್ಕಳು ಹುಟ್ಟಿದರು. 2022 ರಲ್ಲಿ, ಜಾರ್ಜಿನಾ ಬೆಲ್ಲಾ ಎಸ್ಮೆರಾಲ್ಡಾ ಹುಟಿದಳು. ಇವರಿಗೆ ಕ್ರಿಸ್ಟಿಯಾನೊ ರೊನಾಲ್ಡೊ ಜೂನಿಯರ್ ಎಂಬ ಒಬ್ಬ ಮಗ ಸಹ ಇದ್ದಾನೆ. ಜಾರ್ಜಿನಾ ಈ ಎಲ್ಲ ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ.

ಈ ಇಬ್ಬರೂ ಸ್ಟಾರ್ ಜೋಡಿ ಶಾಪಿಂಗ್ ಮಾಡುವಾಗ ಪರಸ್ಪರ ಭೇಟಿಯಾಗಿದ್ದರು. ಮೊದಲ ಭೇಟಿಯ ನಂತರ, ಇಬ್ಬರ ನಡುವಿನ ಸ್ನೇಹ ಬೆಳೆಯಿತು ಮತ್ತು ನಂತರ ಇಬ್ಬರೂ ಒಟ್ಟಿಗೆ ಸಮಯ ಕಳೆಯಲು ನಿರ್ಧರಿಸಿದರು. 2016 ರಿಂದ ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಜಾರ್ಜಿನಾ ಒಬ್ಬ ಖ್ಯಾತ ನರ್ತಕಿ. ಇವರು 1994 ರಲ್ಲಿ ಅರ್ಜಿಂಟೀನಾದಲ್ಲಿ ಜನಿಸಿದರು. ಇವರು ಸ್ಪೇನ್‌ನಲ್ಲಿ ತಮ್ಮ ಅಧ್ಯಯನ ಮುಗಿಸಿದ್ದಾರೆ. ಇವರು ಮಾಡೆಲ್ ಆಗಿ ಹಲವು ಫ್ಯಾಷನ್ ಶೋಗಳಲ್ಲೂ ಭಾಗವಹಿಸಿದ್ದಾರೆ. ಇವರು ನೆಟ್‌ಫ್ಲಿಕ್ಸ್ ರಿಯಾಲಿಟಿ ಸರಣಿ 'ಐ ಆಮ್ ಜಾರ್ಜಿನಾ' ಮೂಲಕ ಅಭಿಮಾನಿಗಳಿಗೆ ಹತ್ತಿರವಾದರು.
ವಿಶ್ವದ ಸ್ಟಾರ್ ಫುಟ್ಬಾಲ್ ಆಟಗಾರರಲ್ಲಿ ಕ್ರಿಸ್ಟಿಯಾನೊ ರೊನೊಲ್ಡೊ ಸಹ ಒಬ್ಬರು. ಇವರು ತಮ್ಮ ವೃತ್ತಿ ಜೀವನದಲ್ಲಿ 900 ಗೋಲು ಬಾರಿಸಿದ ದಾಖಲೆ ಹೊಂದಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಖ್ಯಾತಿಯೂ ಸಹ ಇವರದ್ದಾಗಿದೆ. ಇವರು ಸದ್ಯ ಅಲ್ ನಾಸರ್ ಕ್ಲಬ್ ಜೊತೆ ಆಡುತ್ತಾರೆ. ಇವರು ಈ ಕ್ಲಬ್ ಪರ ಆಡಿದ 30 ಪಂದ್ಯಗಳಲ್ಲಿ 25 ಗೋಲು ಸಿಡಿಸಿದ್ದಾರೆ.