ಕ್ರಿಶ್ಚಿಯಾನೊ ರೊನಾಲ್ಡೊ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಈವರೆಗೆ ಯಾರಿಂದಲೂ ಮಾಡಲು ಸಾಧ್ಯವಾಗದ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ. ಪೋರ್ಚುಗಲ್ ತಂಡದ ಪರವಾಗಿ ದಾಖಲೆಯ 200ನೇಪಂದ್ಯವನ್ನಾಡಿದ ಅವರು ಈ ಪಂದ್ಯದಲ್ಲಿ ಗೋಲು ಬಾರಿಸಿ ತಮ್ಮ ಐತಿಹಾಸಿಕ ಸಾಧನೆಯನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ. ಯುರೋ ಕಪ್‌ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜೂನ್ 20ರಂದು ಐಸ್‌ಲೆಂಡ್ ವಿರುದ್ಧದ ಆಡುವ ಮೂಲಕ 200ನೇ ಪಂದ್ಯವನ್ನಾಡಿದ ರೊನಾಲ್ಡೋ ತಮ್ಮ ತಂಡವನ್ನು 1-0 ಅಂತರದಿಂದ ಗೆಲ್ಲಿಸಿದ್ದಾರೆ.
ಈ ಮೂಲಕ ಕ್ರಿಶ್ಚಿಯಾನೋ ರೊನಾಲ್ಡೋ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ 200 ಪಂದ್ಯಗಳನ್ನಾಡಿದ ಮೊದಲ ಫುಟ್ಬಾಲ್ ಆಟಗಾರ ಎನಿಸಿಕೊಂಡಿದ್ದಾರೆ. ಈ ಸಾಧನೆಯೀಗ ಗಿನ್ನಿಸ್ ವಿಶ್ವದಾಖಲೆಯಲ್ಲಿಯೂ ಸೇರಿಕೊಂಡಿದ್ದು ಪೋರ್ಚುಗಲ್ ಹಾಗೂ ಐಸ್‌ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಗಿನ್ನಿಸ್ ದಾಖಲೆಯ ಗೌರವ ನೀಡಲಾಗಿದೆ. ಇದಕ್ಕೂ ಮುನ್ನ ಕಳೆದ ಮಾರ್ಚ್‌ನಲ್ಲಿ ರೊನಾಲ್ಡೋ ಕುವೈಟ್‌ನ ಫಾರ್ವರ್ಡ್ ಆಟಗಾರ ಬಾದರ್ ಅಲ್-ಮುತಾವಾ ಅವರ 196 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ದಾಖಲೆಯನ್ನು ಮುರಿದಿದ್ದರು.

ಈ ಪಂದ್ಯದಲ್ಲಿ ರೊನಾಲ್ಡೊ ಮೊದಲಾರ್ಧದಲ್ಲಿ ಹೆಚ್ಚು ಪರಿಣಾಮಕಾರಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ತಂಡದ ಅಗತ್ಯದ ಸಂದರ್ಭದಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. 89 ನೇ ನಿಮಿಷದಲ್ಲಿ ಗೋಲು ಗಳಿಸಿ ರೊನಾಲ್ಡೋ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಗೊನ್ಕಾಲೊ ಇನಾಸಿಯೊ ಚೆಂಡನ್ನು ಫಾರ್ವರ್ಡ್‌ಗೆ ಹೊಡೆದಾಗ ರೊನಾಲ್ಡೊ ಗೋಲ್‌ಪೋಸ್ಟ್‌ಗೆ ಹಾದಿ ತೋರಿಸಿದರು.
ಇನ್ನು ಈ ಸಾಧನೆಯ ಬಳಿಕ ರೊನಾಲ್ಡೋ ಪ್ರತಿಕ್ರೊಯಿಸಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ. "ಇದು ನನಗೆ ನಂಬಲಾಗದ ಸಾಧನೆ. ನಿಜಕ್ಕೂ ಅದ್ಭುತವಾದ ಅನುಭವ. ಈ ವಿಶೇಷ ಸಂದರ್ಭದಲ್ಲಿ ಗೆಲುವಿನ ಗೋಲು ಗಳಿಸುವುದು ಇನ್ನೂ ವಿಶೇಷವಾಗಿದೆ. ಇಂದು ನಾವು ಅಷ್ಟು ಚೆನ್ನಾಗಿ ಆಡಲಿಲ್ಲ ಆದರೆ ಫುಟ್ಬಾಲ್ ಅಂದರೆ ಹಾಗೆಯೆ. ಆದರೆ ನಾವು ಗೋಲು ಗಳಿಸಿದ್ದೇವೆ ನಾವು ಗೆಲುವಿಗೆ ಅರ್ಹರಾಗಿದ್ದೇವೆ ಎನ್ನುವುದು ನನ್ನ ಅನಿಸಿಕೆ. 200 ಕ್ಯಾಪ್‌ಗಳಿಂದ ನಾನು ತುಂಬಾ ಸಂತೋಷವಾಗಿದ್ದೇನೆ, ಆದರೆ ಇದು ಇನ್ನಷ್ಟು ವಿಶೇಷವಾಗಿದೆ" ಎಂದು ರೊನಾಲ್ಡೊ ಪ್ರತಿಕ್ರಿಯೆ ನೀಡಿದ್ದಾರೆ.
ಇದು ಪೋರ್ಚುಗಲ್ ಪರ ರೊನಾಲ್ಡೊ ಬಾರಿಸಿದ 123ನೇ ಗೋಲು ಎನ್ನುವುದು ಮತ್ತೊಂದು ಪ್ರಮುಖ ಅಂಶ. ರಿಯಲ್ ಮ್ಯಾಡ್ರಿಡ್ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್‌ನ ಮಾಜಿ ಸ್ಟಾರ್ ಆಟಗಾರ ಈಗಾಗಲೇ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತಿ ಹೆಚ್ಚು ಗೋಲುಗಳನ್ನುಬಾರಿಸಿದ ಸಾರ್ವಕಾಲಿಕ ದಾಖಲೆಯನ್ನು ತಮ್ಮ ಹೆಸರಿನಲ್ಲಿಯೇ ಹೊಂದಿದ್ದಾರೆ.
ಇನ್ನು ಐಸ್‌ಲೆಂಡ್ ವಿರುದ್ಧದ ಈ ಗೆಲುವಿನಿಂದಾಗಿ 12 ಅಂಕಗಳೊಂದಿಗೆ ಪೋರ್ಚುಗಲ್ ಮೊದಲ ಸ್ಥಾನದಲ್ಲಿದೆ. ಲಿಚ್ಟೆನ್‌ಸ್ಟೈನ್ ವಿರುದ್ಧ 1-0 ಅಂತರದಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿರುವ ಸ್ಲೋವಾಕಿಯಾಕ್ಕಿಂತ ಎರಡು ಅಂಕಗಳಿಂದ ಮುಂದಿದೆ.