ನ್ಯೂಜಿಲೆಂಡ್ ಮಣಿಸಿದ ಈಜಿಪ್ಟ್‌ಗೆ ಅಗ್ರಸ್ಥಾನ; ಮಿಂಚಿದ ಕೇಪ್ ವರ್ಡೆ
ಫಿಫಾ ವಿಶ್ವಕಪ್ ಟೂರ್ನಿಯ ಜಿ ಗುಂಪಿನ ಪಂದ್ಯದಲ್ಲಿ ಈಜಿಪ್ಟ್ 3-1 ರಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಗೆಲುವಿನ ಮೂಲಕ ಈಜಿಪ್ಟ್ ಆಡಿದ ಎರಡೂ ಪಂದ್ಯಗಳಲ್ಲಿ 1 ಗೆಲುವು, 1 ಡ್ರಾ ಸಾಧಿಸಿದ್ದು, 4 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
ಬಿಸಿ ಪ್ಲೇಸ್ ವ್ಯಾಂಕೋವರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಈಜಿಪ್ಟ್ ಭರ್ಜರಿ ಪ್ರದರ್ಶನ ನೀಡಿ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಮೊದಲಾವಧಿಯ ಆಟದಲ್ಲಿ ನ್ಯೂಜಿಲೆಂಡ್ ಸಂಘಟಿತ ಆಟದ ಪ್ರದರ್ಶನ ನೀಡಿ 15ನೇ ನಿಮಿಷದಲ್ಲಿ ಗೋಲು ದಾಖಲಿಸಿತು. ನ್ಯೂಜಿಲೆಂಡ್ ಪರ ಫಿನ್ ಸುರ್ಮನ್ ಅಮೋಘ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಈ ಅವಧಿಯಲ್ಲಿ ಈಜಿಪ್ಟ್ ಯಾವುದೇ ಗೋಲು ದಾಖಲಿಸಲಿಲ್ಲ.

ಮೊದಲಾವಧಿಯಲ್ಲಿ ಈಜಿಪ್ಟ್ ಗೋಲು ಬಾರಿಸುವ ಆಸೆಗೆ ನ್ಯೂಜಿಲೆಂಡ್ ಗೋಲ್ ಕೀಪರ್ ಸೊಪ್ಪು ಹಾಕಲಿಲ್ಲ. ಆದರೆ ಎರಡನೇ ಅವಧಿಯಲ್ಲಿ ಈಜಿಪ್ಟ್ ಆಟಗಾರ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಿದರು. ಪಂದ್ಯದ 58ನೇ ನಿಮಿಷದಲ್ಲಿ ಮೊಸ್ತಫಾ ಜಿಕೊ ಈಜಿಪ್ಟ್ ಪರ ಮೊದಲ ಗೋಲಿನ ನಗೆ ಬೀರಿದರು. ಇವರು ಸಹ ಆಟಗಾರ ನೀಡಿದ ಪಾಸ್‌ನ ಸಂಪೂರ್ಣ ಲಾಭ ಪಡೆದು ಹೆಡರ್ ಮೂಲಕ ಗೋಲು ಬಾರಿಸಿದರು.
ಇದೇ ಅವಧಿಯ 67ನೇ ನಿಮಿಷದಲ್ಲಿ ಈಜಿಪ್ಟ್ ತಂಡದ ಮೊಹಮ್ಮದ್ ಸಲಾಹ್ ಅಮೋಘ ಕಾಲ್ಚಳಕದ ಪ್ರದರ್ಶನ ನೀಡಿ ಎದುರಾಳಿ ತಂಡದ ರಕ್ಷಣಾ ಆಟಗಾರರನ್ನು ವಂಚಿಸಿ ಚೆಂಡನ್ನು ಗೋಲು ಪೆಟ್ಟಿಗೆಯ ಒಳಗಡೆ ನೂಕಿದರು. ಇದೇ ಅವಧಿಯ 82ನೇ ನಿಮಿಷದಲ್ಲಿ ಟ್ರೆಜೆಗೆಟ್ ಸೊಗಸಾದ ಗೋಲು ಬಾರಿಸಿ ತಂಡದ ಮುನ್ನಡೆಯನ್ನು ಹಿಗ್ಗಿಸಿದರು. ಪರಿಣಾಮ ಈಜಿಪ್ಟ್ ಮೊದಲ ಗೆಲುವಿನ ನಗೆ ಬೀರಿತು.
ಬೆಲ್ಜಿಯಂ-ಇರಾನ್ ಪಂದ್ಯ ಡ್ರಾ
ಫಿಫಾ ವಿಶ್ವಕಪ್ 2026 ರ ಜಿ ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂ ಮತ್ತು ಇರಾನ್ ಮುಖಾಮುಖಿಯಾಗಿದ್ದವು. ಎರಡು ಬಲಿಷ್ಠ ತಂಡಗಳ ನಡುವಿನ ಈ ಕಾದಾಟವು ತೀವ್ರ ಪೈಪೋಟಿಯಿಂದ ಕೂಡಿತ್ತು. ಅಂತಿಮವಾಗಿ ಎರಡೂ ತಂಡಗಳು ಅಂಕಗಳನ್ನು ಹಂಚಿಕೊಳ್ಳುವಲ್ಲಿ ಸಫಲವಾದವು. ಪಂದ್ಯದಾದ್ಯಂತ ಉಭಯ ತಂಡಗಳು ಗೋಲು ಬಾರಿಸಲು ನಡೆಸಿದ ಪ್ರಯತ್ನಗಳು ಸಫಲವಾಗಲಿಲ್ಲ. ಪಂದ್ಯದ 66ನೇ ನಿಮಿಷದಲ್ಲಿ ಬೆಲ್ಜಿಯಂ ತಂಡದ ನಾಥನ್ ನ್ಗೋಯ್ ಅವರು ಕೆಂಪು ಕಾರ್ಡ್ ಪಡೆದು ಮೈದಾನದಿಂದ ಹೊರನಡೆದಿದ್ದು ಪಂದ್ಯದ ಪ್ರಮುಖ ತಿರುವಾಗಿತ್ತು. ಈ ಡ್ರಾದಿಂದ ಜಿ ಗುಂಪಿನ ಅಂಕ ಪಟ್ಟಿಯಲ್ಲಿ ಇರಾನ್ ಮತ್ತು ಬೆಲ್ಜಿಯಂ ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
ಕೇಪ್ ವರ್ಡೆ ಅಬ್ಬರ
ಫಿಫಾ ವಿಶ್ವಕಪ್ 2026ನ ಎಚ್ ಗುಂಪಿನ ಪಂದ್ಯ ಸಹ ರೋಮಾಂಚನಕಾರಿಯಾಗಿತ್ತು. ಪಂದ್ಯದಲ್ಲಿ ಮಾಜಿ ಚಾಂಪಿಯನ್ ಉರುಗ್ವೆ ಮತ್ತು ಕೇಪ್ ವರ್ಡೆ ತಂಡಗಳು ಮುಖಾಮುಖಿಯಾಗಿದ್ದವು. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಕಾದಾಟ ಡ್ರಾದಲ್ಲಿ ಅಂತ್ಯವಾಯಿತು.
ಪಂದ್ಯದ 21ನೇ ನಿಮಿಷದಲ್ಲಿ ಕೇಪ್ ವರ್ಡೆಯ ಕೆವಿನ್ ಪಿನಾ ಮೊದಲ ಗೋಲು ಬಾರಿಸಿ ಉರುಗ್ವೆ ತಂಡಕ್ಕೆ ಆಘಾತ ನೀಡಿದರು. ಆದರೆ, ಉರುಗ್ವೆಯ ಮ್ಯಾಕ್ಸಿಮಿಲಿಯಾನೊ 44ನೇ ನಿಮಿಷದಲ್ಲಿ ಅರಾಜೊ ಮತ್ತು ಹೆಚ್ಚುವರಿ ಸಮಯದಲ್ಲಿ ಅಗಸ್ಟಿನ್ ಕ್ಯಾನೊಬಿಯೊ ಗೋಲುಗಳನ್ನು ಗಳಿಸಿ ಉರುಗ್ವೆಗೆ ಮುನ್ನಡೆ ತಂದುಕೊಟ್ಟರು. ಪಂದ್ಯದ 61ನೇ ನಿಮಿಷದಲ್ಲಿ ಕೇಪ್ ವರ್ಡೆಯ ಹೆಲಿಯೊ ವರೆಲಾ ಮತ್ತೊಂದು ಅದ್ಭುತ ಗೋಲು ಬಾರಿಸಿ ಪಂದ್ಯವನ್ನು ಸಮಬಲಗೊಳಿಸಿದರು. ಈ ಪಂದ್ಯದ ಬಳಿಕ ಎಚ್ ಗುಂಪಿನಲ್ಲಿ ಸ್ಪೇನ್ ತಂಡವು 4 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ತಲಾ 2 ಅಂಕಗಳನ್ನು ಹೊಂದಿರುವ ಉರುಗ್ವೆ ಮತ್ತು ಕೇಪ್ ವರ್ಡೆ ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಹಂಚಿಕೊಂಡಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications