
ಅಬು ಧಾಬಿ, ಜನವರಿ 6: ಎಂಟು ವರ್ಷಗಳ ನಂತರ ಏಷ್ಯಾ ಖಂಡದ ಪ್ರಮುಖ ತಂಡಗಳಲ್ಲಿ ಒಂದು ಎನಿಸಿರುವ ಭಾರತ ಫುಟ್ಬಾಲ್ ತಂಡ 2019ರ ಏಷ್ಯನ್ ಕಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ಪ್ರತಿಯೊಂದು ತಂಡಕ್ಕೂ ಎಚ್ಚರಿಕೆಯ ಕರೆ ನೀಡಿದೆ. ಭಾನುವಾರ ಆರಂಭಗೊಳ್ಳಲಿರುವ ಮೊದಲ ಪಂದ್ಯದಲ್ಲಿ ಭಾರತ ಇಲ್ಲಿನ ಅಲ್ ನಹ್ಯಾನ್ ಕ್ರೀಡಾಂಗಣದಲ್ಲಿ ಥಾಯ್ಲೆಂಡ್ ವಿರುದ್ಧ ಸೆಣಸಲಿದೆ.
ಥಾಯ್ಲೆಂಡ್, ಬೆಹರಿನ್ ಹಾಗೂ ಆತಿಥೇಯ ಯುಎಇ ತಂಡಗಳಿರುವ ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಸ್ಟೀನ್ ಕಾನ್‌ಸ್ಟಾಟೈನ್ ಪಡೆ ಕಠಿಣ ಸವಾಲನ್ನು ಎದುರಿಸಬೇಕಾಗಿದೆ. ಥಾಯ್ಲೆಂಡ್ ತಂಡ ಗೋಲು ಗಳಿಕೆಯಲ್ಲಿ ಬಲಿಷ್ಠವಾಗಿರುವುದರಿಂದ ಬ್ಲೂ ಟೈಗರ್ಸ್ ಖ್ಯಾತಿಯ ಭಾರತ ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧೂ ಹಾಗೂ ಡಿಫೆನ್ಸ್‌ನಲ್ಲಿ ಸಂದೇಶ್ ಜಿಂಗಾನ್ ಅವರನ್ನು ಹೆಚ್ಚು ಆಶ್ರಯಿಸಿದೆ.
'ನಮ್ಮ ಮೇಲೆ ಯಾವುದೇ ರೀತಿಯ ಒತ್ತಡ ಇಲ್ಲ. ನಾಲ್ಕು ವರ್ಷಗಳ ಹಿಂದೆ ನಾವು ಅರ್ಹತೆ ಪಡೆಯುತ್ತೇವೆ ಎಂದು ಯಾರೂ ಊಹಿಸಿರಲಿಲ್ಲ. ಅರ್ಹತೆ ಪಡೆದ ನಂತರ ನಾವು ಮೂರು ಪಂದ್ಯಗಳಲ್ಲೂ ಸೋಲುತ್ತೇವೆ ಎಂದು ಎಲ್ಲರೂ ಊಹಿಸಿದ್ದರು. ನಾವು ಇಲ್ಲಿ ಆಡಲು ಅರ್ಹರು ಎಂಬುದನ್ನು ಸಾಬೀತುಪಡಿಸಬೇಕಾಗಿದೆ,' ಎಂದು ಕಾನ್‌ಸ್ಟಾಂಟೈನ್ ಹೇಳಿದ್ದಾರೆ.
ಕಳೆದ ಆರು ಸ್ಪರ್ಧಾತ್ಮಕ ಪಂದ್ಯಗಳಲ್ಲಿ 17 ಗೋಲುಗಳನ್ನು ಗಳಿಸಿರುವ ಥಾಯ್ಲೆಂಡ್ ತಂಡದ ವಿರುದ್ಧ ತಮ್ಮ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂಬ ಆತ್ಮವಿಶ್ವಾಸ ಕಾನ್‌ಸ್ಟಾಂಟೈನ್ ಅವರಿಗಿದೆ. ಏಷ್ಯನ್ ಕಪ್‌ಗೆ ಮೊದಲು ಚೀನಾ ಹಾಗೂ ಒಮನ್ ವಿರುದ್ಧ ನಡೆದ ಪಂದ್ಯದಲ್ಲಿ ಡ್ರಾ ಸಾಧಿಸಿದ್ದು ತಂಡದ ಮನೋಬಲವನ್ನು ಹೆಚ್ಚಿಸಿದೆ. ಅನಾಸ್ ಎಡಥೋಡಿಕಾ ಹಾಗೂ ಜಿಂಗಾನ್ ಹಿಂಭಾಗದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ಆತ್ಮವಿಶ್ವಾಸ ಕೋಚ್‌ಗೆ ಇದೆ.
ಪ್ರೀತಮ್ ಕೋಟಾಲ್ ಹಾಗೂ ನಾರಾಯಣ ದಾಸ್ ಅವರು ಭರವಸೆಯ ಆಟಗಾರರು. ತಮ್ಮ ಫ್ಲ್ಯಾಂಕ್ ವಿಭಾಗದಲ್ಲಿ ಅವರು ನಿಸ್ಸೀಮರು. ಮುಂಭಾಗದಲ್ಲಿ ಉದಾಂತ್ ಸಿಂಗ್, ಹಲಿಚರಣ್ ನಾರ್ಜರಿ ಅಥವಾ ಆಶಿಖ್ ಕುರ್ನಿಯಾನ್ ತಂಡಕ್ಕೆ ಬಲವಾಗಿದ್ದಾರೆ. ಅನಿರುಧ್ ಥಾಪಾ ಹಾಗೂ ಪ್ರಣೋಯ್ ಹಾಲ್ದರ್ ಅವರು ಜಂಟಿಯಾಗಿ ಉತ್ತಮ ಪ್ರದರ್ಶನ ತೋರಿದರೆ ಥಾಯ್ಲೆಂಡ್ ವಿರುದ್ಧ ಭಾರತ ಪ್ರಭುತ್ವ ಸಾಧಿಸುವುದು ಖಚಿತ. ಥಾಯ್ಲೆಂಡ್ ತಂಡ ಚೆಂಡನ್ನು ಅತ್ಯಂತ ತ್ವರಿತವಾಗಿ ಚಲಾಯಿಸುವ ಚಾಕಚಕ್ಯತೆ ಹೊಂದಿರುವುದನ್ನು ಭಾರತ ಮರೆಯುವಂತಿಲ್ಲ.
ಫಾರ್ವರ್ಡ್ ವಿಭಾಗದಲ್ಲಿ ಸುನಿಲ್ ಛೆಟ್ರಿ ಭಾರತದ ಪ್ರಮುಖ ಅಸ್ತ್ರ. ಅದೇ ರೀತಿ ಡಿಫೆನ್ಸ್ ವಿಭಾಗದಲ್ಲೂ ಸುನಿಲ್ ಎತ್ತಿದ ಕೈ.ಆಡಿರುವ 20 ಪಂದ್ಯಗಳಲ್ಲಿ ಒಂಬತ್ತು ಕ್ಲೀನ್ ಶೀಟ್‌ಸಾಧನೆ ಅವರ ಹೆಸರಿನಲ್ಲಿದೆ. ಇತ್ತೀಚಿಗೆ ಒಮನ್ ವಿರುದ್ಧದ ಪಂದ್ಯದಲ್ಲಿ ಥಾಯ್ಲೆಂಡ್ ಸೋಲನುಭವಿಸಿರುವುದು ಭಾರತದ ಮನೋಬಲವನ್ನು ಹೆಚ್ಚಿಸಲು ಮತ್ತೊಂದು ಕಾರಣ.
'ಕನಿಷ್ಠ ಪ್ರಿ ಕ್ವಾರ್ಟರ್ ಫೈನಲ್ ತಲಪುವುದು ನಮ್ಮ ಗುರಿ. ನಮ್ಮಲ್ಲಿರುವ ಕೆಲವು ದೌರ್ಬಲ್ಯಗಳಿಂದಾಗಿ ಒಮನ್ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡೆವು. ಈ ಸಂದರ್ಭದಲ್ಲಿ ನಾವು ಅಭ್ಯಾಸ ಪಂದ್ಯದಲ್ಲಿ ಕಂಡಿರುವ ಫಲಿತಾಂಶವನ್ನೇ ಹೆಚ್ಚು ನಂಬಿಕೊಂಡು ಇರಬಾರದು. ಭಾರತ ವಿರುದ್ಧದ ಪಂದ್ಯದ ಕಡೆಗೆ ಗಮನ ಹರಿಸುವುದು ಮುಖ್ಯವಾಗಿದೆ,' ಎಂದು ಥಾಯ್ಲೆಂಡ್ ತಂಡದ ಕೋಚ್ ಮಿಲೋವಾನ್ ರಾಜೆವಾಕ್ ಹೇಳಿದ್ದಾರೆ.
ಸರ್ಬಿಯಾದ ಕೋಚ್ ಜವಾಬ್ದಾರಿ ಹೊತ್ತ ನಂತರ ಥಾಯ್ಲೆಂಡ್ ತಂಡ ಅಟ್ಯಾಕ್ ವಿಭಾಗದಲ್ಲಿ ಚೇತರಿಸಿಕೊಂಡಿದೆ. ಆದರೆ ಈಗಲೂ ಸುಧಾರಣೆಯ ಅಗತ್ಯವಿದೆ. ಗಂಗ್ ಹೊ ರೀತಿಯ ಆಟವನ್ನು ಕೈ ಬಿಟ್ಟ ನಂತರ ರಾಜೆವಾಕ್ ತಂಡದಲ್ಲಿ ಸಮತೋಲವನ್ನು ಕಾಯ್ದುಕೊಂಡಿದ್ದಾರೆ. ಅವರ ತರಬೇತಿಯಲ್ಲಿ ತಂಡ ಅದ್ಫುತ ಪ್ರದರ್ಶನವನ್ನು ತೋರಿದೆ. ಆದರೆ ಎಎಫ್ಸಿ ಚಾಂಪಿಯನ್‌ಷಿಪ್‌ನಲ್ಲಿ ಮಲೇಷಯಾ ವಿರುದ್ಧ ನೈಜ ಪ್ರದರ್ಶನ ತೋರುವಲ್ಲಿ ವಿಲವಾಗಿತ್ತು.
ಸೆಮಿಫೈನಲ್‌ನಲ್ಲಿ ಕಂಡ ಸೋಲು ಹಾಗೂ ಒಮನ್‌ಗೆ ಶರಣಾಗಿರುವುದು ತಂಡದ ಮೇಲೆ ಸ್ವಲ್ಪಮಟ್ಟಿನ ಒತ್ತಡವನ್ನು ತಂದಿರುವುದು ಸಹಜ. ಆದರೆ ಭಾರತ ವಿರುದ್ಧದ ಪಂದ್ಯದಲ್ಲಿ ಅವೆಲ್ಲವನ್ನೂ ಮರೆತು ಉತ್ತಮ ಪ್ರದರ್ಶನ ತೋರುವುದು ಥಾಯ್ಲೆಂಡ್ ತಂಡದ ಗುರಿಯಾಗಿದೆ.
ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು, ಉತ್ತಮ ಪ್ರದರ್ಶನ ತೋರಿ ಥಾಯ್ಲೆಂಡ್ ವಿರುದ್ಧ ಜಯ ಗಳಿಸಿ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸುವುದು ಭಾರತದ ಗುರಿಯಾಗಿದೆ. ಭಾರತದ ಕಾಲಮಾನ ಸಂಜೆ 7 ಗಂಟೆಗೆ ಪಂದ್ಯ ಆರಂಭಗೊಳ್ಳುತ್ತದೆ.