
ಮಾಸ್ಕೋ, ಜೂನ್ 27: ಫೀಫಾ ವಿಶ್ವಕಪ್ 2018ರ ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದೆ ಹೆಣಗಾಡುತ್ತಿರುವ ಐದು ಬಾರಿ ಚಾಂಪಿಯನ್ ತಂಡ ಬ್ರೆಜಿಲ್ ಇಂದು ತನ್ನ ಲಯ ಕಂಡುಕೊಂಡು ಉತ್ತಮ ರೀತಿಯಲ್ಲಿ ಗೆಲುವು ದಾಖಲಿಸಿ, 16ರ ಹಂತಕ್ಕೇರಿದೆ.
ಲೈವ್ ಸ್ಕೋರ್ ಕಾಮೆಂಟ್ರಿ | ಅಂಕಪಟ್ಟಿ
ಫುಲ್ ಟೈಮ್ : ಬ್ರೆಜಿಲ್ 2-0 ಸೆರ್ಬಿಯಾ
ಪಂದ್ಯದ ದ್ವಿತೀಯಾರ್ಧದಲ್ಲಿ ಸೆರ್ಬಿಯಾ ಸಂಪೂರ್ಣ ದಾಳಿ ನಡೆಸಿ, ಬ್ರೆಜಿಲ್ ಗೆ ಆಘಾತ ನೀಡಿತು. ಆದರೆ, ಯಾವುದೇ ಗೋಲು ಗಳಿಸುವಲ್ಲಿ ವಿಫಲವಾಯಿತು. ಬ್ರೆಜಿಲ್ಲಿನ ಥಿಯಾಗೋ ಸಿಲ್ವಾ 68ನೇ ನಿಮಿಷದಲ್ಲಿ ಹೊಡೆದ ಗೋಲು, ಬ್ರೆಜಿಲ್ಲಿನ ಅಭಿಮಾನಿಗಳು ಸಾಂಬಾ ನೃತ್ಯ ಮಾಡುವಂತೆ ಪ್ರೇರೇಪಿಸಿತು. ಅಂತಿಮವಾಗಿ ಈ ಪಂದ್ಯ ಗೆದ್ದು ಇ ಗುಂಪಿನ ಅಗ್ರಸ್ಥಾನಿಯಾದ ಬ್ರೆಜಿಲ್, 16ರ ಹಂತದಲ್ಲಿ ಎಫ್ ಗುಂಪಿನ ಎರಡನೇ ಸ್ಥಾನಿ ಮೆಕ್ಸಿಕೋ ವಿರುದ್ಧ ಸೆಣಸಲಿದೆ.
ಪಂದ್ಯದ ಮೊದಲಾರ್ಧದಲ್ಲಿ ಆರಂಭದಲ್ಲೇ ಮಾರ್ಸೆಲೋ ಗಾಯಗೊಂಡು ಮೈದಾನದಿಂದ ಹೊರಕ್ಕೆ ಹೋಗಬೇಕಾಯಿತು. ಆದರೆ, ಸತತ ದಾಳಿ ನಡೆಸಿದ ನೇಮಾರ್ ಗೋಲು ಗಳಿಸಲು ವಿಫಲರಾದ್ರೂ, 36ನೇ ನಿಮಿಷದಲ್ಲಿ ಪೌಲಿನ್ಹಿಯೋ ಉತ್ತಮವಾಗಿ ಗೋಲು ಗಳಿಸಿ, ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಹಾಫ್ ಟೈಮ್ ಸ್ಕೋರ್ : ಬ್ರೆಜಿಲ್ 1-0 ಸೆರ್ಬಿಯಾ.
'ಇ' ಗುಂಪಿನಿಂದ 16ರ ಹಂತಕ್ಕೇರಲು ಸೆರ್ಬಿಯಾ ವಿರುದ್ಧದ ಪಂದ್ಯ ಗೆಲ್ಲಬೇಕಿದೆ. ಅಥವಾ ಡ್ರಾ ಮಾಡಿಕೊಂಡರೂ ಎರಡನೇ ತಂಡವಾಗಿ ಮುಂದಿನ ಹಂತ ತಲುಪಬಹುದಾಗಿದೆ.
ಸ್ವಿಟ್ಜರ್ಲೆಂಡ್ ವಿರುದ್ಧ 1-1 ಡ್ರಾ ಸಾಧಿಸಿದ ಬ್ರೆಜಿಲ್ ಮುಂದಿನ ಪಂದ್ಯದಲ್ಲಿ ಕೌಟಿನ್ಹೋ ಹಾಗೂ ನೇಮಾರ್ ಗೋಲಿನ ನೆರವಿನಿಂದ ಕೋಸ್ಟರಿಕಾ ವಿರುದ್ಧ ಗೆಲು ವು ಸಾಧಿಸಿತ್ತು.
ಇನ್ನೊಂದೆಡೆ, ಸ್ವಿಟ್ಜರ್ಲೆಂಡ್ ತಂಡಕ್ಕೆ ಕೋಸ್ಟರಿಕಾ ವಿರುದ್ಧ ಒಂದು ಅಂಕ ಸಿಕ್ಕರೂ ಸಾಕು. ಬ್ರೆಜಿಲ್ ಹಾಗೂ ಸ್ವಿಟ್ಜರ್ಲೆಂಡ್ ತಂಡಗಳು ತಲಾ 4 ಅಂಕಗಳಿಸಿದ್ದು, ಇನ್ನೊಂದು ಅಂಕ ಸಿಕ್ಕರೂ ಮುಂದಿನ ಹಂತ ತಲುಪಲಿವೆ. ಸೆರ್ಬಿಯಾ ಏನಾದರೂ ಗೆಲುವು ಅಥವಾ ಡ್ರಾ ಸಾಧಿಸಿದರೆ ಸ್ವಿಟ್ಜರ್ಲೆಂಡ್ ಹಾಗೂ ಸೆರ್ಬಿಯಾ ನಡುವೆ ಗೋಲುಗಳ ಅಂತರ ಲೆಕ್ಕಕ್ಕೆ ಬರಲಿದೆ.