ಐ ಹ್ಯಾವ್ ಗಾಟ್ ಸಂಥಿಂಗ್ ಟು ಸೇ : ಲುಕಾಕುವಿನ ಹೃದಯ ಬಿರಿಯುವ ಕಥೆ

ಆತನ ಮನೆಯಲ್ಲಿ ಎಂತಹ ಕಿತ್ತುತಿನ್ನುವ ಬಡತನವಿತ್ತೆಂದರೆ, ಆತನ ತಾಯಿ ಮಕ್ಕಳ ಹೊಟ್ಟೆ ತುಂಬಿಸಲೆಂದು ಹಾಲಿಗೆ ನೀರು ಮಿಶ್ರಣ ಮಾಡುತ್ತಿರಲಿಲ್ಲ, ನೀರಿಗೇ ಹಾಲು ಮಿಕ್ಸ್ ಮಾಡುತ್ತಿದ್ದರು. ಇಡೀ ಮನೆಮಂದಿಯೆಲ್ಲ ಹಾಸಿಕೊಳ್ಳಲು ಇಲ್ಲದೆ ನೆಲದ ಮೇಲೆ ಮಲಗುತ್ತಿದ್ದರು. ವಾರಗಟ್ಟಲೆ ಕರೆಂಟು ಕೂಡ ಇರುತ್ತಿರಲಿಲ್ಲ. ಕಗ್ಗತ್ತಲಲ್ಲಿ ಜೀವನ.
"ನಾವು ಕೇವಲ ಬಡವರಾಗಿರಲಿಲ್ಲ, ದಾರಿದ್ರ್ಯವೆಂಬುದು ಇಡೀ ಕುಟುಂಬವನ್ನೇ ಹುರಿದು ಮುಕ್ಕುತ್ತಿತ್ತು. ನಾವು ಹೊಟ್ಟೆ ತುಂಬಿಸಿಕೊಳ್ಳಲು ಕಷ್ಟಪಡುತ್ತಿದ್ದೆವು. ಆದರೆ, ಅಮ್ಮ ನೀರಿಗೇ ಹಾಲು ಮಿಕ್ಸ್ ಮಾಡುತ್ತಿದ್ದಾಗ, ಹೊಟ್ಟೆಗೆ ಅದು ಬಿಟ್ಟು ಮತ್ತೇನು ಇಲ್ಲ ಎಂಬುದು ನಮ್ಮ ಅರಿವಿಗೆ ಬರುತ್ತಿತ್ತು. ನಾನು ಹೇಳುತ್ತಿರುವುದು ಅರ್ಥವಾಗಿರಬೇಕಲ್ಲ?"
ಫೀಫಾ ವಿಶ್ವಕಪ್ 2018 ವಿಶೇಷ ಪುಟ : ವೇಳಾಪಟ್ಟಿ | ತಂಡಗಳು
ಇಂಥ ದಟ್ಟದಾರಿದ್ರ್ಯದಲ್ಲಿಯೇ ಬಾಲ್ಯವನ್ನು ಕಳೆದ, ಆದರೆ ಇಂದು ಕೋಟ್ಯಂತರ ಅಭಿಮಾನಿಗಳ ಹೀರೋ ಆಗಿ ಮೆರೆಯುತ್ತಿರುವ ವ್ಯಕ್ತಿ ಮತ್ತಾರೂ ಅಲ್ಲ, ಫೀಫಾ ವಿಶ್ವಕಪ್ 2018ರಲ್ಲಿ ಪನಾಮಾ ವಿರುದ್ಧ ಎರಡು ಅತ್ಯದ್ಭುತ ಗೋಲು ಬಾರಿಸಿದ ಬೆಲ್ಜಿಯಂನ 25ರ ಹರೆಯದ ಫುಟ್ಬಾಲ್ ಪಟು ರೊಮೆಲು ಲುಕಾಕು.
ಒಂದು ಹೆಡ್ಡರ್ ಮೂಲಕ ಗೋಲು ಗಳಿಸಿದರೆ ಮತ್ತೊಂದು 75ನೇ ನಿಮಿಷದಲ್ಲಿ ಗೋಲಿಯನ್ನು ತಪ್ಪಿಸಿ ಬಾರಿಸಿದ ಎರಡನೇ ಗೋಲು ಪ್ರತಿಭಾವಂತ ಆಟಗಾರ ರೊಮೆಲು ಕಾಲ್ಚಳಕಕ್ಕೆ ಸಾಕ್ಷಿಯಾಗಿತ್ತು. ಕೇವಲ 6 ನಿಮಿಷಗಳಲ್ಲಿ ಬೆಲ್ಜಿಯಂ ಪರ ಎರಡು ಗೋಲು ಗಳಿಸಿ ತಾವೆಂಥ ಆಟಗಾರನೆಂದು ತೋರಿಸಿದವರು ಲೊಕಾಕು.

ಐ ಹ್ಯಾವ್ ಗಾಟ್ ಸಂಥಿಂಗ್ ಟು ಸೇ
ದಿ ಪ್ಲೇಯರ್ಸ್ ಟ್ರಿಬ್ಯೂನ್ ಪ್ರಕಟಿಸಿರುವ 'ಐ ಹ್ಯಾವ್ ಗಾಟ್ ಸಂಥಿಂಗ್ ಟು ಸೇ' ಎಂಬ ಶೀರ್ಷಿಕೆಯ ಲೇಖನದಲ್ಲಿ ತಮ್ಮ ಗತಕಾಲದ ಜೀವನದ ಕಣ್ಣೀರ ಕಥೆಯನ್ನು ರೊಮೆಲು ಲುಕಾರು ಅವರು ತೆರೆದಿಟ್ಟಿದ್ದಾರೆ. ತಮ್ಮೀ ಯಶಸ್ಸಿಗೆ ಕಾರಣ ಬಡತನವೇ ಎಂದು ಅವರು ಹೇಳಿಕೊಂಡಿದ್ದಾರೆ. ಜೀವನದ ಅಗ್ನಿಪರೀಕ್ಷೆಯಲ್ಲಿ ಬೆಂದುಬಂದ ಮಾಗಿದ ಆಟಗಾರ ಆಗಿದ್ದಾರೆ ಲೊಕಾಕು. ಅಮ್ಮ ಪಡುತ್ತಿದ್ದ ಕಷ್ಟಗಳೇ ಹೆಚ್ಚಿನದನ್ನು ಸಾಧಿಸಲು ಪ್ರೇರೇಪಣೆಯಾದವು.

ಕಿತ್ತುತಿನ್ನುವ ಬಡತನ ಒಡ್ಡುತ್ತಿದ್ದ ಸವಾಲು
ಆ ಕಿತ್ತುತಿನ್ನುವ ಬಡತನವೇ ಎಂಥೆಂಥ ಸವಾಲುಗಳನ್ನು ಒಡ್ಡಿತ್ತು, ಅವನ್ನು ಹೇಗೆ ಮೀರಿ ಫುಟ್ಬಾಲ್ ಲೋಕದಲ್ಲಿ ದಿಗ್ವಿಜಯ ಸಾಧಿಸಿದೆ ಎಂಬುದನ್ನು ರೊಮೆಲು ಲುಕಾಕು ಅವರು ಹೇಳಿಕೊಂಡಿದ್ದಾರೆ. 23 ವರ್ಷ ತುಂಬುವುದರೊಳಗೆ ಪ್ರೀಮಿಯರ್ ಲೀಗ್ ನಲ್ಲಿ 50 ಗೋಲ್ ಬಾರಿಸಿದ ಟಾಪ್ 5 ಆಟಗಾರರಲ್ಲಿ ಒಬ್ಬರಾಗಿರುವ ಲೊಕಾಕು ಮ್ಯಾಂಚೆಸ್ಟರ್ ಯುನೈಟೆಡ್ ಸ್ಟಾರ್ ಆಟಗಾರ.

ದೇವರಲ್ಲಿ ಅಂದೇ ಪ್ರಮಾಣ ಮಾಡಿದೆ
"ನಾನು ಒಂದೇ ಒಂದು ಮಾತನ್ನೂ ಆಡಲಿಲ್ಲ. ಅಮ್ಮನಿಗೆ ಒತ್ತಡ ಹೇರುವುದು ಬೇಕಾಗಿರಲಿಲ್ಲ. ಪಾಲಿಗೆ ಬಂದಿದ್ದೇ ಪಂಚಾಮೃತ ಅಂತ ಕೊಟ್ಟಿದ್ದು ತಿಂದೆ, ಕುಡಿದೆ. ದೇವರಲ್ಲಿ ಅಂದೇ ಪ್ರಮಾಣ ಮಾಡಿದೆ, ನನಗೆ ನಾನೇ ದೃಢಸಂಕಲ್ಪ ಮಾಡಿದೆ. ಆ ಕ್ಷಣವೇ ನನ್ನನ್ನು ಯಾರೋ ಎಚ್ಚರಿಸಿದಂತಾಗಿತ್ತು. ನಾನು ಏನು ಮಾಡಬೇಕೆಂದು ನಿರ್ಧಾರ ಮಾಡಿಯಾಗಿತ್ತು. ನನ್ನ ತಾಯಿ ಹಾಗೆ ಬದುಕುವುದು ನನಗೆ ಬೇಕಾಗಿರಲಿಲ್ಲ, ಸಾಧ್ಯವೇ ಇಲ್ಲ" ಎಂದು ಕಂಬನಿಯಲ್ಲಿಯೇ ಲುಕಾಕು ಅಕ್ಷರ ಪೋಣಿಸಿದ್ದಾರೆ.

ಟ್ರಾಕ್ ಸೂಟ್ ಕೆಟ್ಟಕೊಳಕಾಗಿತ್ತು
16ನೇ ಹುಟ್ಟುಹಬ್ಬ ಆಚರಿಸಿದ 11ನೇ ದಿನ ವೃತ್ತಿಪರ ಅಂಗಳಕ್ಕೆ ಕಾಲಿಟ್ಟರು ಲುಕಾಕು. ಅತ್ಯಂತ ಕೆಟ್ಟದಾದ ಟ್ರಾಕ್ ಸೂಟ್ ಧರಿಸಿ ಲಾಕರ್ ರೂಮ್ ಪ್ರವೇಶಿಸಿದ್ದರು. ಉಳಿದವರು ದುಬಾರಿಯ, ಮಿರುಮಿರುಗುವ ದಿರಿಸು ಧರಿಸಿದ್ದರೆ, ಇವರ ಟ್ರಾಕ್ ಸೂಟ್ ಕೆಟ್ಟಕೊಳಕಾಗಿತ್ತು. ಆಂಟ್ವರ್ಪ್ ನಲ್ಲಿ ಹುಟ್ಟಿ, ಲೀಜ್ ಮತ್ತು ಬ್ರುಸೆಲ್ಸ್ ನಲ್ಲಿ ಬೆಳೆದಿದ್ದರೂ, ಕಾಂಗೋದ ಮೂಲದವರಾದ್ದರಿಂದ ವರ್ಣೀಯ ದ್ವೇಷವನ್ನು ಅವರು ಆಗಾಗ ಕಂಡಿದ್ದಾರೆ.

ಫುಟ್ಬಾಲ್ ಆಟಗಾರರಲ್ಲೇ ನಾನು ಅತ್ಯಂತ ಬಲಿಷ್ಠ
ಜೀವನದಲ್ಲಿ ಅವರು ಎದುರಿಸಿದ ಪ್ರತಿಯೊಂದು ಕಠಿಣಾತಿ ಕಠಿಣ ಪರೀಕ್ಷೆ, ಸವಾಲು ಅವರ ಧ್ಯೇಯವನ್ನು ಮತ್ತಷ್ಟು ಗಟ್ಟಿಯಾಗಿಸುತ್ತಿತ್ತು. ದೇಹಕ್ಕೆ ಮನಸಿಗೆ ಬಿದ್ದ ಪ್ರತಿಯೊಂದು ಹೊಡೆತವೂ ಪಾಠ ಕಲಿಸುತ್ತಿತ್ತು. ಫುಟ್ಬಾಲ್ ನಲ್ಲಿ ಮಾನಸಿಕ ಸದೃಢತೆಯ ಬಗ್ಗೆ ಮಾತನಾಡಲಾಗುತ್ತದೆ. ನಿಮಗೆ ಗೊತ್ತಿರಲಿ, ನೀವು ಕಂಡಿರುವ ಫುಟ್ಬಾಲ್ ಆಟಗಾರರಲ್ಲೇ ನಾನು ಅತ್ಯಂತ ಬಲಿಷ್ಠ ಎಂದು ಲುಕಾಕು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಜೀವನದ ಪರೀಕ್ಷೆಯಲ್ಲಿ ಗೆದ್ದಿದ್ದಾರೆ ಲುಕಾಕು
ಕಡೆಗೆ ಒಂದು ಮಾತನ್ನು ಹೇಳಲು ಅವರು ಮರೆಯುವುದಿಲ್ಲ. "ಅತ್ಯಂತ ಕಷ್ಟಕರ ಕಾಲದಲ್ಲಿ ನಾನು ನನ್ನ ಸಹೋದರರು, ನನ್ನ ತಾಯಿಯೊಂದಿಗೆ ಕತ್ತಲ ಕೋಣೆಯಲ್ಲಿ ಕಣ್ಣೀರು ಸುರಿಸುತ್ತಾ, ಮುಂದೊಂದು ದಿನ ಒಳ್ಳೆಯದು ಆಗೇ ಆಗುತ್ತದೆಂದು ದೇವರಲ್ಲಿ ಒಂದೇಸವನೆ ಪ್ರಾರ್ಥಿಸುತ್ತ ಕುಳಿತಿರುತ್ತಿದ್ದೆವು. ಒಂದಿಲ್ಲೊಂದು ದಿನ ಒಳ್ಳೆಯ ದಿನ ಬಂದೇಬರುತ್ತದೆಂದು ನಂಬಿಕೆ ಇಟ್ಟುಕೊಂಡಿದ್ದೆವು." ಅದೀಗ ಸಾಧ್ಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications