ಫಿಫಾ ವಿಶ್ವಕಪ್ 2026: ಬೇರೆ ದೇಶಗಳ ಜರ್ಸಿ ತೊಟ್ಟು ಕಣಕ್ಕಿಳಿಯುತ್ತಿರುವ ಭಾರತ ಮೂಲದ ನಾಲ್ವರು ಸ್ಟಾರ್ ಆಟಗಾರರು
FIFA World Cup 2026: ವಿಶ್ವದ ಅತ್ಯಂತ ದೊಡ್ಡ ಕ್ರೀಡಾ ಹಬ್ಬವಾದ ಫಿಫಾ ವಿಶ್ವಕಪ್‌ನ 2026ರಲ್ಲಿ ಆಡಬೇಕೆಂಬ ಭಾರತದ ಕನಸು ಈ ಬಾರಿಯೂ ನನಸಾಗಿಲ್ಲ ನಿಜ. ಆದರೆ ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾ ಜಂಟಿಯಾಗಿ ಆಯೋಜಿಸುತ್ತಿರುವ 23ನೇ ಆವೃತ್ತಿಯ ಫಿಫಾ ವಿಶ್ವಕಪ್‌ನಲ್ಲಿ ಭಾರತೀಯ ಮೂಲದ ನಾಲ್ವರು ಪ್ರತಿಭಾವಂತ ಆಟಗಾರರು ವಿವಿಧ ದೇಶಗಳ ಪರ ಕಣಕ್ಕಿಳಿಯುತ್ತಿರುವುದು ಜಾಗತಿಕ ಫುಟ್‌ಬಾಲ್‌ನಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಹಿಂದೆ 2006ರ ಜರ್ಮನಿ ವಿಶ್ವಕಪ್‌ನಲ್ಲಿ ಫ್ರಾನ್ಸ್ ತಂಡದ ಪರ ಆಡಿದ್ದ ಆಂಧ್ರಪ್ರದೇಶದ ವಿಜಯನಗರಂ ಮೂಲದ ವಿಕಾಸ್ ಧೋರಾಸೂ ಅವರ ಹಾದಿಯನ್ನೇ ಈಗ ದೇಶದ ನಾಲ್ವರು ಯುವ ಆಟಗಾರರು ಅನುಸರಿಸುತ್ತಿದ್ದಾರೆ. ವಿವಿಧ ದೇಶಗಳ ರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸುತ್ತಿರುವ ಭಾರತದ ನಾಲ್ಕವರು ಪ್ರತಿಭೆಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ.

1. ಸರ್ಪ್ರೀತ್ ಸಿಂಗ್ (ನ್ಯೂಜಿಲೆಂಡ್)
ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಪಂಜಾಬ್ ಮೂಲದ ದಂಪತಿಗೆ ಜನಿಸಿದ ಸರ್ಪ್ರೀತ್ ಸಿಂಗ್ (27 ವರ್ಷ) ಪ್ರಸ್ತುತ ಆ ದೇಶದ ಪ್ರಮುಖ ಆಕ್ರಮಣಕಾರಿ ಆಟಗಾರ. 2018ರಲ್ಲಿ ಮುಂಬೈನಲ್ಲಿ ನಡೆದ ಇಂಟರ್ ಕಾಂಟಿನೆಂಟಲ್ ಕಪ್‌ನಲ್ಲಿ ಅವರು ಭಾರತದ ವಿರುದ್ಧವೇ ಆಡಿದ್ದರು. ಬಳಿಕ ಕೀನ್ಯಾ ವಿರುದ್ಧ ಗೋಲು ಗಳಿಸಿ ನ್ಯೂಜಿಲೆಂಡ್ ಗೆಲುವಿಗೆ ಕಾರಣರಾಗಿದ್ದರು. 2019ರಲ್ಲಿ ಜರ್ಮನಿಯ ಪ್ರತಿಷ್ಠಿತ ಬುಂಡೆಸ್ಲಿಗಾ ಟೂರ್ನಿಯಲ್ಲಿ ಆಡಿದ ಮೊದಲ ಭಾರತೀಯ ಮೂಲದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇವರು, ವೆಲ್ಲಿಂಗ್ಟನ್ ಫೀನಿಕ್ಸ್ ಕ್ಲಬ್‌ನಿಂದ ಜರ್ಮನಿಯ ಪ್ರಸಿದ್ಧ 'ಬಯರ್ನ್ ಮ್ಯೂನಿಚ್' ತಂಡವನ್ನು ಸೇರಿದ್ದರು. ಸದ್ಯ ನ್ಯೂಜಿಲೆಂಡ್ ಪರ 24 ಪಂದ್ಯಗಳನ್ನಾಡಿ 3 ಗೋಲುಗಳನ್ನು ಗಳಿಸಿದ್ದಾರೆ.
2. ಸ್ಯಾಮುಯಲ್ ಮೌಟೂಸಾಮಿ (ಡಿಆರ್‌ಕಾಂಗೋ)
ಫ್ರಾನ್ಸ್‌ನಲ್ಲಿ ಜನಿಸಿದ ಸ್ಯಾಮುಯೆಲ್ ಮೌಟೂಸಾಮಿ (29 ವರ್ಷ) ಅವರ ತಾಯಿ ಕಾಂಗೋ ಮೂಲದವರಾದರೆ, ತಂದೆ ತಮಿಳು ಮೂಲದ ಇಂಡೋ-ಗಾಡೆಲೂಪಿಯನ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸದ್ಯ ಗ್ರೀಸ್‌ನ 'ಆಟ್ರೋಮಿಟೋಸ್' ಕ್ಲಬ್ ಪರ ಆಡುತ್ತಿರುವ ಇವರು, 2019ರಿಂದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ರಾಷ್ಟ್ರೀಯ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಕಾಂಗೋ ಪರ ಈವರೆಗೆ 57 ಪಂದ್ಯಗಳನ್ನಾಡಿರುವ ಇವರು ಹಿಂದೆ ಫ್ರಾನ್ಸ್ ಹಾಗೂ ಟರ್ಕಿಯ ಪ್ರಮುಖ ಕ್ಲಬ್‌ಗಳ ಪರವೂ ಆಡಿದ ಅನುಭವ ಹೊಂದಿದ್ದಾರೆ.
3. ನಿಶಾನ್ ವೇಲುಪಿಳ್ಳೈ (ಆಸ್ಟ್ರೇಲಿಯಾ)
ಮೆಲ್ಬೋರ್ನ್‌ನಲ್ಲಿ ಜನಿಸಿದ ನಿಶಾನ್ ವೇಲುಪಿಳ್ಳೈ (25 ವರ್ಷ) ಅವರ ತಾಯಿ ಆಂಗ್ಲೋ-ಇಂಡಿಯನ್ ಮತ್ತು ತಂದೆ ಶ್ರೀಲಂಕಾ ತಮಿಳು ಮೂಲದವರಾಗಿದ್ದು, ನಂತರ ಮಲೇಷ್ಯಾಕ್ಕೆ ವಲಸೆ ಹೋಗಿದ್ದರು. ಸದ್ಯ ಆಸ್ಟ್ರೇಲಿಯಾದ 26 ಸದಸ್ಯರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಇವರು ಹೊಸ ಭರವಸೆಯ ಆಟಗಾರನಾಗಿದ್ದಾರೆ. ಪ್ರಸ್ತುತ ಮೆಲ್ಬೋರ್ನ್ ವಿಕ್ಟರಿ ಕ್ಲಬ್ ಪರ ಆಡುತ್ತಿರುವ ಇವರು 2024ರ ಅಕ್ಟೋಬರ್‌ನಲ್ಲಿ ಚೀನಾ ವಿರುದ್ಧದ ಪಂದ್ಯದ ಮೂಲಕ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದರು. ವಿಶೇಷ ಅಂದ್ರೆ ತಮ್ಮ ಮೊದಲ ಪಂದ್ಯದಲ್ಲೇ ಗೋಲು ಗಳಿಸಿ ಗಮನ ಸೆಳೆದ ಇವರು ಈವರೆಗೆ ಆಸ್ಟ್ರೇಲಿಯಾ ಪರ 8 ಪಂದ್ಯಗಳಿಂದ 3 ಗೋಲುಗಳನ್ನು ಗಳಿಸಿದ್ದಾರೆ.
4. ತಹ್ಸೀನ್ ಮೊಹಮ್ಮದ್ ಜಂಶೀದ್ (ಕತಾರ್)
ಮುಂಬರುವ ಜೂನ್ 16ಕ್ಕೆ 20ನೇ ವಯಸ್ಸಿಗೆ ಕಾಲಿಡಲಿರುವ ಯುವ ತಾರೆ ತಹ್ಸೀನ್ ಕತಾರ್‌ನ ದೋಹಾದಲ್ಲಿ ಜನಿಸಿದ ಕನ್ನಡಿಗರಲ್ಲದ ಮಲಯಾಳಿ ಮೂಲದವರಾಗಿದ್ದಾರೆ. ಇವರ ಕುಟುಂಬ 2006ರಲ್ಲಿ ಕೇರಳದ ಕಣ್ಣೂರಿನಿಂದ ಕತಾರ್‌ಗೆ ವಲಸೆ ಹೋಗಿತ್ತು. ತಂದೆ ಜಂಶೀದ್ ಅವರ ಮಾರ್ಗದರ್ಶನದಲ್ಲಿ ಫುಟ್‌ಬಾಲ್ ಕಲಿತ ಇವರು ದೋಹಾದ ಪ್ರಸಿದ್ಧ 'ಆಸ್ಪ್ರೇಯರ್ ಅಕಾಡೆಮಿ'ಯಲ್ಲಿ ತರಬೇತಿ ಪಡೆದಿದ್ದಾರೆ. ಕತಾರ್ ಸ್ಟಾರ್ಸ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಮೂಲದ ಆಟಗಾರ ಎಂಬ ಖ್ಯಾತಿ ಇವರದ್ದಾಗಿದ್ದು, ಪ್ರಸ್ತುತ ಅಲ್ ದುಹೈಲ್ ಎಸ್.ಸಿ ತಂಡದ ಭಾಗವಾಗಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ 2026ರ ಫಿಫಾ ವಿಶ್ವಕಪ್‌ನಲ್ಲಿ ನೇರವಾಗಿ ಭಾರತ ತಂಡ ಭಾಗವಹಿಸದೇ ಇದ್ದರೂ, ಜಾಗತಿಕ ಮಟ್ಟದ ಈ ದೊಡ್ಡ ವೇದಿಕೆಯಲ್ಲಿ ಭಾರತೀಯ ಮೂಲದ ಈ ನಾಲ್ಕು ಆಟಗಾರರು ವಿಭಿನ್ನ ದೇಶಗಳ ಜರ್ಸಿ ತೊಟ್ಟು ಕಣಕ್ಕಿಳಿಯುತ್ತಿರುವುದೆ ವಿಶೇಷವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications