FIFA World Cup: 48 ದೇಶ, 104 ಪಂದ್ಯ, ಇದೇ ಮೊದಲ ಬಾರಿಗೆ ಸಂಭವಿಸಲಿರುವ 10 ವಿಷಯ
ಇನ್ನೇನು ಕೆಲವೇ ದಿನಗಳಲ್ಲಿ ಫಿಫಾ ವಿಶ್ವಕಪ್ ಆರಂಭವಾಗಲಿದೆ. ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾ ದೇಶಗಳು ಈ ಬಾರಿಯ ಫುಟ್ಬಾಲ್ ವಿಶ್ವಕಪ್‌ನ್ನು ಆಯೋಜಿಸುತ್ತಿವೆ. ಈ ಪಂದ್ಯಾವಳಿಯು ಇದುವರೆಗಿನ ಅತಿದೊಡ್ಡ ಪಂದ್ಯಾವಳಿಯಾಗಿದ್ದು, ಮೊದಲ ಬಾರಿಗೆ 48 ತಂಡಗಳು ಭಾಗವಹಿಸಲಿವೆ.
ಈ ಪ್ರತಿಷ್ಠಿತ ಪಂದ್ಯಾವಳಿ 39 ದಿನಗಳ ಕಾಲ ನಡೆಯಲಿದ್ದು, ಮೂರು ದೇಶಗಳ 16 ಕ್ರೀಡಾಂಗಣಗಳಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ. ಈ ವರ್ಷ, ವಿಶ್ವಕಪ್ ಇತಿಹಾಸದಲ್ಲಿ ಹಲವಾರು ಪ್ರಥಮಗಳು ನಡೆಯಲಿವೆ. ಈ ಬಾರಿಯ ವಿಶ್ವಕಪ್‌ನಲ್ಲಿ ತಿಳಿದುಕೊಳ್ಳಲೇಬೇಕಾದ 10 ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ.

48 ದೇಶಗಳು ಭಾಗಿ
ಫಿಫಾ ವಿಶ್ವಕಪ್ 2026ರಲ್ಲಿ ಒಟ್ಟು 48 ತಂಡಗಳು ಭಾಗವಹಿಸುತ್ತಿವೆ. ಇದಕ್ಕೂ ಮೊದಲು 32 ತಂಡಗಳು ಭಾಗವಹಿಸಿದ್ದವು. ತಂಡಗಳ ಸಂಖ್ಯೆ ಹೆಚ್ಚಾದ ಕಾರಣ, ಒಟ್ಟು 104 ಪಂದ್ಯಗಳನ್ನು ಆಡಲಾಗುವುದು, ಇದು ಯಾವುದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚಿನ ಪಂದ್ಯಗಳನ್ನು ಆಯೋಜಿಸುವ ಹಿರಿಮೆ ತನ್ನದಾಗಿಸಿಕೊಳ್ಳಲಿದೆ.
3 ದೇಶಗಳು ಜಂಟಿಯಾಗಿ ಆಯೋಜನೆ
2026ರ ವಿಶ್ವಕಪ್ ಫುಟ್ಬಾಲ್ ಅನ್ನು ಇದೇ ಮೊದಲ ಬಾರಿಗೆ ಮೂರು ದೇಶಗಳು ಆತಿಥ್ಯ ವಹಿಸಲಿವೆ. 2002ರಲ್ಲಿ ದಕ್ಷಿಣ ಕೊರಿಯಾ ಹಾಗೂ ಜಪಾನ್ ತಂಡಗಳು ಜಂಟಿಯಾಗಿ ಆಯೋಜಿಸಿದ್ದವು. ಅಮೆರಿಕದ 11, ಮೆಕ್ಸಿಕೋದ 3, ಕೆನಡಾದ 2 ನಗರಗಳಲ್ಲಿ ಫಿಫಾ ವಿಶ್ವಕಪ್ ನಡೆಯಲಿದೆ.
4 ತಂಡಗಳ ಪದಾರ್ಪಣೆ
ಈ ವರ್ಷ, ನಾಲ್ಕು ಹೊಸ ದೇಶಗಳು ಮೊದಲ ಬಾರಿಗೆ ಫಿಫಾ ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿವೆ. ಕೇಪ್ ವರ್ಡೆ, ಕುರಾಕಾವೊ, ಜೋರ್ಡಾನ್ ಮತ್ತು ಉಜ್ಬೇಕಿಸ್ತಾನ್ ತಂಡಗಳು ವಿಶ್ವ ಫುಟ್‌ಬಾಲ್‌ನ ಮೆಗಾ ಈವೆಂಟ್‌ನಲ್ಲಿ ಭಾಗವಹಿಸಲಿವೆ. ಈವರೆಗೆ ಫಿಫಾ ವಿಶ್ವಕಪ್‌ನಲ್ಲಿ ಒಟ್ಟಾರೆಯಾಗಿ 84 ದೇಶಗಳು ಭಾಗವಹಿಸಿವೆ.
1,248 ಆಟಗಾರರು ಕಣಕ್ಕೆ
ಈ ಬಾರಿಯ ವಿಶ್ವಕಪ್ ಫುಟ್ಬಾಲ್‌ನಲ್ಲಿ ಒಟ್ಟು 48 ತಂಡಗಳ ಒಟ್ಟು 1,248 ಆಟಗಾರರು ಮೈದಾನದಲ್ಲಿ ಸ್ಪರ್ಧಿಸುವುದನ್ನು ಕಾಣಬಹುದು. ಇದು ಸಹ ದಾಖಲೆಯ ಪುಟಕ್ಕೆ ಸೇರಿದೆ. ವಿಶ್ವಕಪ್ ಇತಿಹಾಸದಲ್ಲಿ ಅತಿ ದೊಡ್ಡ ಸಂಖ್ಯೆಯ ಆಟಗಾರರು ಕಣಕ್ಕೆ ಇಳಿದಿದ್ದು ಇದೇ ಮೊದಲು.
ಮೆಸ್ಸಿ ಮತ್ತು ರೊನಾಲ್ಡೊ ದಾಖಲೆಯ ಆರನೇ ವಿಶ್ವಕಪ್
ಅರ್ಜೆಂಟೀನಾದ ದಂತಕಥೆ ಲಿಯೋನೆಲ್ ಮೆಸ್ಸಿ ಮತ್ತು ಪೋರ್ಚುಗಲ್‌ನ ಸೂಪರ್‌ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ವೃತ್ತಿ ಜೀವನದ ಆರನೇ ಫಿಫಾ ವಿಶ್ವಕಪ್ ಆಡಲಿದ್ದಾರೆ. ಈ ಮೂಲಕ ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದ್ದಾರೆ.
43 ವರ್ಷದ ಆಟಗಾರ ಅಖಾಡಕ್ಕೆ
ಈ ಬಾರಿಯ ಫುಟ್ಬಾಲ್ ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್‌ನ ಗೋಲ್‌ಕೀಪರ್ ಕ್ರೇಗ್ ಗಾರ್ಡನ್ ಹೆಸರಿಗೂ ಸಹ ದಾಖಲೆ ಅಂಟಲಿದೆ. ಇವರು ಫಿಫಾ ವಿಶ್ವಕಪ್ ಆಡುವ ಹಿರಿಯ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ. ಇವರು ಮೈದಾನಕ್ಕೆ ಇಳಿದಾಗ 43 ವರ್ಷ 162 ದಿನ ವಯಸ್ಸಿನವರಾಗಿರಲಿದೆ.
17 ವರ್ಷದ ಕಿರಿಯ ಆಟಗಾರ
ಯುವ ಮೆಕ್ಸಿಕನ್ ಫುಟ್‌ಬಾಲ್ ಆಟಗಾರ ಗಿಲ್ಬರ್ಟೊ ಮೋರಾ ಈ ಮೆಗಾ ಟೂರ್ನಿಯಲ್ಲಿ ಆಡಲಿರುವ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಇವರು ಕೇವಲ 17 ವರ್ಷ 240 ದಿನ ವಯಸ್ಸಿನಲ್ಲಿ ಕಣಕ್ಕೆ ಇಳಿಯಲಿದ್ದಾರೆ.
22 ಚಾಂಪಿಯನ್ಸ್ ಭಾಗಿ
ಈ ಹಿಂದೆ ವಿಶ್ವಕಪ್ ವಿಜೇತ ತಂಡಗಳ ಭಾಗವಾಗಿರುವ ಒಟ್ಟು 22 ಆಟಗಾರರು 2026 ರ ಫಿಫಾ ವಿಶ್ವಕಪ್‌ನಲ್ಲಿ ಭಾಗವಹಿಸಲಿದ್ದಾರೆ.
357 ಆಟಗಾರರಿಗೆ ವಿಶ್ವಕಪ್ ಆಡಿದ ಅನುಭವ
ಈ ಬಾರಿ ಭಾಗವಹಿಸುವ ತಂಡಗಳಲ್ಲಿ ಒಟ್ಟು 357 ಆಟಗಾರರು ಈ ಹಿಂದೆ ವಿಶ್ವಕಪ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ.
891 ಆಟಗಾರರು ಪದಾರ್ಪಣೆ
ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ಒಟ್ಟು ಆಟಗಾರರಲ್ಲಿ 891 ಆಟಗಾರರು ಮೊದಲ ಬಾರಿಗೆ ಫಿಫಾ ವಿಶ್ವಕಪ್‌ನಲ್ಲಿ ಕಣಕ್ಕೆ ಇಳಿಯಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

