Fifa World Cup 2026: ಅರ್ಜೆಂಟೀನಾ ಸೆಮಿಫೈನಲ್‌ಗೆ ಲಗ್ಗೆ, ಇಂಗ್ಲೆಂಡ್ ವಿರುದ್ಧ ಫೈಟ್
ಜಿದ್ದಾಜಿದ್ದಿನಿಂದ ಕೂಡಿದ್ದ ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಅಮೋಘ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸಿದೆ. ಭಾನುವಾರ ಕಾನ್ಸಾಸ್ ಸಿಟಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅರ್ಜಿಂಟೀನಾ 3-1 ಗೋಲುಗಳಿಂದ ಸ್ವಿಟ್ಜರ್ಲ್ಯಾಂಡ್ ತಂಡವನ್ನು ಸೋಲಿಸಿತು. ಜುಲೈ 16 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ, ಇಂಗ್ಲೆಂಡ್ ತಂಡದ ಸವಾಲು ಎದುರಿಸಲಿದೆ.
ಆರಂಭದಿಂದಲೂ ಜಿದ್ದಿನ ಸೆಣಸಾಟದಲ್ಲಿ ಕೊನೆಯ ಕ್ಷಣದಲ್ಲಿ ಮ್ಯಾಜಿಕ್ ಮಾಡಿದ ಅರ್ಜೆಂಟೀನಾ ಅಮೋಘ ಜಯ ದಾಖಲಿಸಿದೆ. ಹೆಚ್ಚುವರಿ ಸಮಯದಲ್ಲಿ ಲೌಟಾರೊ ಮಾರ್ಟಿನೆಜ್ ಬಾರಿಸಿದ ಗೋಲು ಅರ್ಜೆಂಟೀನಾ ಪಾಳಯದಲ್ಲಿ ಖುಷಿಯನ್ನು ನೀಡಿತು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡದ ಪರ ಲಿಯೋನೆಲ್ ಮೆಸ್ಸಿ ಅವರು ಒಂದೇ ಒಂದು ಗೋಲು ದಾಖಲಿಸದೆ ಇರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು.

ಪಂದ್ಯದ ಮೊದಲ ಅರ್ಧದಲ್ಲಿ ಅರ್ಜೆಂಟೀನಾ ತಂಡಕ್ಕೆ ಕಾರ್ನರ್ ಅವಕಾಶ ಸಿಕ್ಕಿತು. ಈ ಅವಕಾಶದಲ್ಲಿ ಮೆಸ್ಸಿ ಅಸಿಸ್ಟ್ ಮಾಡಿದ ಚೆಂಡನ್ನು ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್ ಹೆಡ್ ಮಾಡುವ ಮೂಲಕ ಗೋಲು ಪೆಟ್ಟಿಗೆಯ ಒಳಗಡೆ ನೂಕಿದರು. ಅರ್ಜೆಂಟೀನಾ ಪಂದ್ಯದಲ್ಲಿ 1-0 ಮುನ್ನಡೆ ಸಾಧಿಸಿತು. ಮೊದಲಾವಧಿಯ ಆಟದಲ್ಲಿ ಅರ್ಜೆಂಟೀನಾ ಮತ್ತೆ ಗೋಲು ಬಾರಿಸಲು ಶತ ಪ್ರಯತ್ನ ಮಾಡಿತು ಆದರೆ ಫಲ ಲಭಿಸಲಿಲ್ಲ. ಪರಿಣಾಮ 1-0 ಮುನ್ನಡೆ ಸಾಧಿಸಿತು.
ಎರಡನೇ ಅರ್ಧದ ಆರಂಭದಲ್ಲಿ ಸ್ವಿಟ್ಜರ್ಲ್ಯಾಂಡ್, ಅರ್ಜೆಂಟೀನಾ ತಂಡದ ರಕ್ಷಣಾ ವಿಭಾಗಕ್ಕೆ ಶಾಕ್ ನೀಡಿತು. ಪಂದ್ಯದ 67ನೇ ನಿಮಿಷದಲ್ಲಿ ಡಾನ್ ಎನ್‌ಡೋಯೆ ಗೋಲು ಬಾರಿಸಿದರು. ಪರಿಣಾಮ ಉಭಯ ತಂಡಗಳು ತಲಾ ಒಂದೊಂದು ಗೋಲು ಸಿಡಿಸಿದ್ದರಿಂದ ಪಂದ್ಯದ ರೋಚಕತೆ ಹೆಚ್ಚಿತು. ಈ ಅವಧಿಯ 72ನೇ ನಿಮಿಷದಲ್ಲಿ ಬ್ರೀಲ್ ಎಂಬೊಲೊ ಅವರಿಗೆ ರೆಡ್ ಕಾರ್ಡ್ ನೀಡಲಾಯಿತು.
ಹೆಚ್ಚುವರಿ ಸಮಯದಲ್ಲಿ ಅರ್ಜೆಂಟೀನಾ ಕಮಾಲ್
ಸ್ವಿಟ್ಜರ್ಲ್ಯಾಂಡ್ ಅಂತಿಮ ಕ್ಷಣದವರೆಗೆ 10 ಆಟಗಾರರಿಂದಲೇ ಆಟವನ್ನು ಆಡಿತು. ಆದರೆ ನಿಗದಿತ ಸಮಯದಲ್ಲಿ ಮೆಸ್ಸಿ ಪಡೆಗೆ ಯಾವುದೇ ಗೋಲು ನೀಡಲಿಲ್ಲ. ಪರಿಣಾಮ ಪಂದ್ಯ ಹೆಚ್ಚುವರಿ ಸಮಯದತ್ತ ಸಾಗಿತು. ಈ ಅವಧಿಯಲ್ಲಿ ಜೂಲಿಯನ್ ಅಲ್ವಾರೆಜ್ ಹಾಗೂ ಲೌಟಾರೊ ಮಾರ್ಟಿನೆಜ್ ಅಮೋಘ ಕಾಲ್ಚಳಕದ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಪರಿಣಾಮ ಅರ್ಜೆಂಟೀನಾ 3-1 ಮುನ್ನಡೆ ಸಾಧಿಸಿತು. ಕೊನೆಯ ಕ್ಷಣದ ವರೆಗೂ ಗೋಲು ಬಾರಿಸಿ ಅರ್ಜೆಂಟೀನಾ ತಂಡಕ್ಕೆ ಶಾಕ್ ನೀಡುವ ಸ್ವಿಟ್ಜರ್ಲ್ಯಾಂಡ್ ಆಸೆ ಫಲಿಸಲಿಲ್ಲ. ಅರ್ಜೆಂಟೀನಾ ಭರ್ಜರಿ ಗೆಲುವು ದಾಖಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ಇಂಗ್ಲೆಂಡ್‌ಗೆ ಜಯ
ಮಿಯಾಮಿ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನಾರ್ವೆ ತಂಡಗಳು ಕ್ವಾರ್ಟರ್ ಫೈನಲ್‌ನಲ್ಲಿ ಕಾದಾಟವನ್ನು ನಡೆಸಿದವು. ಈ ಪಂದ್ಯದಲ್ಲಿ ನಾರ್ವೆ ಮೊದಲ ಹಂತದಲ್ಲಿ ಮುನ್ನಡೆ ಸಾಧಿಸಿತು. ಪಂದ್ಯದ 36ನೇ ನಿಮಿಷದಲ್ಲಿ ಆಂಡ್ರಿಯಾಸ್ ಬಾರಿಸಿದ ಗೋಲು ನಾರ್ವೆ ತಂಡ 1-0 ಮುನ್ನಡೆ ಸಾಧಿಸಲು ಕಾರಣವಾಯಿತು.
ಮೊದಲ ಅರ್ಧದ ಹೆಚ್ಚುವರಿ ಸಮಯದಲ್ಲಿ ಜೂಡ್ ಬೆಲ್ಲಿಂಗ್ಹ್ಯಾಮ್ ಇಂಗ್ಲೆಂಡ್ ಪರ ಮೊದಲು ಗೋಲು ಬಾರಿಸಿದರು. ಪರಿಣಾಮ ಮೊದಲ ಅರ್ಧದ ಮುಕ್ತಾಯಕ್ಕೆ ಎರಡೂ ತಂಡಗಳು ತಲಾ ಒಂದೊಂದು ಗೋಲು ಸಿಡಿಸಿದ್ದವು.
ಎರಡನೇ ಅರ್ಧದ ಆಟದಲ್ಲಿ ಇಂಗ್ಲೆಂಡ್ ಚೆಂಡಿನ ಮೇಲೆ ಹೆಚ್ಚಿನ ಹಿಡಿತ ಸಾಧಿಸಿ, ನಾರ್ವೆ ಆಟಗಾರರ ಮೇಲೆ ಒತ್ತಡ ಹೇರಿತು. ಆದರೆ ಆರಂಭದಲ್ಲಿ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ 93ನೇ ನಿಮಿಷದಲ್ಲಿ ಜೂಡ್ ಬೆಲ್ಲಿಂಗ್ಹ್ಯಾಮ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸಿದರು. ಇಂಗ್ಲೆಂಡ್ 2-1 ಮುನ್ನಡೆ ಸಾಧಿಸಿತು. ಕೊನೆಯ ಕ್ಷಣದ ವರೆಗೂ ಗೋಲು ಬಾರಿಸುವ ನಾರ್ವೆ ಆಸೆ ಫಲಿಸಲಿಲ್ಲ. ನಾರ್ವೆ ಕ್ವಾರ್ಟರ್ ಫೈನಲ್ ಹಂತದಲ್ಲೇ ಟೂರ್ನಿಯಿಂದ ಹೊರ ನಡೆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

