FIFA World Cup 2026: ಅರ್ಜೆಂಟೀನಾ, ಇಂಗ್ಲೆಂಡ್ ಬಿಗ್ ಫೈಟ್: ನೇರಪ್ರಸಾರ, ಪಂದ್ಯದ ಸಮಯದ ಮಾಹಿತಿ
ಫಿಫಾ ವಿಶ್ವಕಪ್ ಫೈನಲ್‌ಗೆ ಸ್ಪೇನ್ ಲಗ್ಗೆ ಇಟ್ಟಿದೆ. ಮಂಗಳವಾರ ತಡರಾತ್ರಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿದ ಸ್ಪೇನ್ ವಿಶ್ವಕಪ್ ಫುಟ್ಬಾಲ್ ಪ್ರಶಸ್ತಿ ಸುತ್ತಿಗೆ ಕಾದಾಟ ನಡೆಸಲಿದೆ. ಬುಧವಾರ ತಡರಾತ್ರಿ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಹಾಗೂ ಬಲಿಷ್ಠ ಇಂಗ್ಲೆಂಡ್ ತಂಡಗಳು ಕಾದಾಟ ನಡೆಸಲಿವೆ.
ಎರಡೂ ತಂಡಗಳು ಸಹ ತನ್ನ ವಿಶಿಷ್ಠ ಆಟದಿಂದಲೇ ಹೆಸರು ಮಾಡಿವೆ. ಈ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಸಂಘಟಿತ ಆಟ ಹಾಗೂ ಹ್ಯಾರಿ ಕೇನ್ ಅಬ್ಬರ ಜೋರಾಗಿದೆ. ಇನ್ನು ಸತತ ಎರಡನೇ ವಿಶ್ವಕಪ್ ಗೆಲ್ಲುವ ಮಹದಾಸೆಯನ್ನು ಹೊಂದಿರುವ ಅರ್ಜೆಂಟೀನಾ ಸಹ ಸೊಗಸಾದ ಆಟವನ್ನು ಪ್ರದರ್ಶಿಸುತ್ತಿದೆ. ಈ ಟೂರ್ನಿಯಲ್ಲಿ ಇನ್ನೇರಡು ಜಯ ಸಾಧಿಸುವ ಆಸೆ ಮೆಸ್ಸಿ ಪಡೆಯದ್ದಾಗಿದೆ. ಆದರೆ ಅಂಕಿ ಅಂಶಗಳು ಇಂಗ್ಲೆಂಡ್ ತಂಡದ ಬಲವನ್ನು ಹೆಚ್ಚಿಸಿವೆ.

ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲುವ ಅವಕಾಶ 38.9 ರಷ್ಟಿದೆ ಎಂದು ಆಪ್ಟಾದ ಸೂಪರ್‌ಕಂಪ್ಯೂಟರ್, ಇನ್ನು ಅರ್ಜೆಂಟೀನಾ ಗೆಲ್ಲುವ ಸಾಧ್ಯತೆ ಶೇಕಡಾ 34.1 ರಷ್ಟಿದೆ ಎಂದು ತಿಳಿಸಿದೆ. ಈ ಪಂದ್ಯವು ಹೆಚ್ಚುವರಿ ಸಮಯಕ್ಕೆ ಹೋಗುವ ಸಾಧ್ಯತೆ ಶೇಕಡಾ 27 ರಷ್ಟು ಅಂದಾಜಿಸಿದೆ. ಉಭಯ ತಂಡಗಳು ಈಗಾಗಲೇ 14 ಫ್ರೆಂಡ್ಲಿ ಪಂದ್ಯಗಳಲ್ಲಿ ಕಾದಾಟ ನಡೆಸಿವೆ. ಈ ವೇಳೆ ಇಂಗ್ಲೆಂಡ್ 6 ಹಾಗೂ ಅರ್ಜೆಂಟೀನಾ 3 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಎರಡೂ ತಂಡಗಳು ಫಿಫಾ ವಿಶ್ವಕಪ್‌ನಲ್ಲಿ ಈ ವರೆಗೆ 5 ಬಾರಿ ಮುಖಾಮುಖಿಯಾಗಿದ್ದು, ಇಂಗ್ಲೆಂಡ್ 3 ಬಾರಿ, ಅರ್ಜೆಂಟೀನಾ 2 ಬಾರಿ ಜಯ ಸಾಧಿಸಿದೆ.
ಫೈನಲ್ ಮೇಲೆ ಅರ್ಜೆಂಟೀನಾ ಕಣ್ಣು
ಅರ್ಜೆಂಟೀನಾ ಈಗಾಗಲೇ ವಿಶ್ವಕಪ್‌ನ್ನು (1978, 1986, 2022) ಮೂರು ಬಾರಿ ಎತ್ತಿ ಸಂಭ್ರಮಿಸಿದೆ. ಇನ್ನು ಇಂಗ್ಲೆಂಡ್ 1966ರಲ್ಲಿ ಒಂದು ಬಾರಿ ಫಿಫಾ ವಿಶ್ವಕಪ್ ಗೆದ್ದು ಬೀಗಿತ್ತು.
ಅರ್ಜೆಂಟೀನಾ ತಂಡಕ್ಕೆ ಲಿಯೋನೆಲ್ ಮೆಸ್ಸಿ ಕಾಲ್ಚಳಕದ ಬಲವಿದೆ. ಈ ಸ್ಟಾರ್ ಆಟಗಾರ ಕ್ವಾರ್ಟರ್ ಫೈನಲ್‌ನಲ್ಲಿ ಗೋಲು ಸಿಡಿಸದೆ ಇದ್ದರೂ ತಂಡ ಪಂದ್ಯ ಗೆದ್ದಿತ್ತು. ಹೀಗಾಗಿ ಆಟಗಾರರು ಸಹ ಮತ್ತೊಮ್ಮೆ ಫೈನಲ್ ಪ್ರವೇಶಿಸುವ ಕನಸು ಚಿಗುರಿದೆ. ಇನ್ನು ಈ ತಂಡದಲ್ಲಿರುವ, ಲೌಟಾರೊ ಮಾರ್ಟಿನೆಜ್ ಎರಡು ಬಾರಿ ಗೋಲು ಬಾರಿಸಿದ್ದು ವಿಶ್ವಾಸ ಹೆಚ್ಚಿಸಿದ್ದಾರೆ. ಇನ್ನು ಎಂಜೊ ಫೆರ್ನಾಂಡಿಸ್ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ.

ಕೇನ್ ಆಕರ್ಷಣೆ
ಇಂಗ್ಲೆಂಡ್ ತಂಡದ ಸ್ಟ್ರೈಕರ್ ಹಾಗೂ ನಾಯಕ ಹ್ಯಾರಿ ಕೇನ್ ಈ ವಿಶ್ವಕಪ್‌ನಲ್ಲಿ ಆರ್ಭಟಿಸುತ್ತಿದ್ದಾರೆ. ಇವರು ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಜಯದ ಮಾಲೆ ತೊಡಿಸುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇನ್ನು ಆಂಥೋನಿ ಗಾರ್ಡನ್, ಬುಕಾಯೊ ಸಾಕಾ, ಎಲಿಯಟ್ ಆಂಡರ್ಸನ್, ಮಾರ್ಕ್ ಗುಯೇಹಿ ಸ್ಥಿರ ಆಟದ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಬೇಕಿದೆ.
ಪಂದ್ಯ ನಡೆಯುವುದು ಯಾವಾಗ?
ಅರ್ಜೆಂಟೀನಾ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಸೆಮಿಫೈನಲ್ ಪಂದ್ಯ ಬುಧವಾರ ರಾತ್ರಿ 12.30ಕ್ಕೆ ನಡೆಯಲಿದೆ. ಈ ಪಂದ್ಯಕ್ಕೆ ಅಟ್ಲಾಂಟಾ ಕ್ರೀಡಾಂಗಣ ಸಾಕ್ಷಿಯಾಗಲಿದೆ.
ಎರಡನೇ ಸೆಮಿಫೈನಲ್ ಪಂದ್ಯವನ್ನು ನೋಡುವುದು ಎಲ್ಲಿ?
ಅರ್ಜೆಂಟೀನಾ. ಇಂಗ್ಲೆಂಡ್ ನಡುವಣ ಎರಡನೇ ಸೆಮಿಫೈನಲ್ ಪಂದ್ಯವನ್ನು ಉಚಿತವಾಗಿ ಡಿಡಿ ಸ್ಪೋರ್ಟ್ಸ್‌ನಲ್ಲಿ ನೋಡಬಹುದು. ಅಲ್ಲದೆ ಜಿ ನೆಟ್‌ವರ್ಕ್‌ನಲ್ಲೂ ವೀಕ್ಷಿಸಬಹುದಾಗಿದೆ.
ಈ ಪಂದ್ಯದಲ್ಲಿ ಗೆಲುವು ದಾಖಲಿಸಿದ ತಂಡ ಸ್ಪೇನ್ ವಿರುದ್ಧ ಫೈನಲ್‌ನಲ್ಲಿ ಹೋರಾಟ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

