FIFA World Cup 2026: ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಅಮೇರಿಕ ಗೆಲುವಿನ ಆರಂಭ
23ನೇ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಅಮೆರಿಕ ಭರ್ಜರಿ ಆರಂಭವನ್ನು ಮಾಡಿದೆ. ಡಿ ಗುಂಪಿನ ಮೊದಲ ಪಂದ್ಯದಲ್ಲಿ ಅಮೆರಿಕ 4-1 ರಿಂದ ಪರಾಗ್ವೆ ತಂಡವನ್ನು ಮಣಿಸಿ ಶುಭಾರಂಭವನ್ನು ಮಾಡಿದೆ.
ಮೊದಲಾವಧಿಯ ಆಟದಿಂದಲೇ ಅಮೋಘ ಆಟದ ಪ್ರದರ್ಶನ ನೀಡಿದ ಅಮೆರಿಕ ಆರಂಭಿಕ 7ನೇ ನಿಮಿಷದಲ್ಲೇ ಪರಾಗ್ವೆ ತಂಡ ಎಡವಟ್ಟು ಮಾಡಿಕೊಂಡಿತು. ಅಮೆರಿಕ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ ಗೋಲು ಪೆಟ್ಟಿಗೆಯ ಪಕ್ಕದಲ್ಲಿ ಚೆಂಡನ್ನು ತಂದಾಗ, ಪರಾಗ್ವೆ ಆಟಗಾರ ಡಾಮಿಯನ್ ಬೊಬಡಿಲ್ಲಾ ಅವರ ಕಾಲಿಗೆ ಬಡಿದ ಚೆಂಡು ಗೋಲು ಪೆಟ್ಟಿಗೆ ಸೇರಿತು. ಪರಿಣಾಮ ಅಮೆರಿಕಕ್ಕೆ ಮೊದಲ ಗೋಲು ಉಡುಗೊರೆ ರೂಪದಲ್ಲಿ ಸಿಕ್ಕಿತು.

ಇದೇ ಅವಧಿಯಲ್ಲಿ ಫೋಲಾರಿನ್ ಬಲೋಗನ್ ಒಮ್ಮೆ ಚೆಂಡನ್ನು ಗೋಲು ಪೆಟ್ಟಿಗೆಯ ಒಳಗಡೆ ನೂಕುವಲ್ಲಿ ಸಫಲರಾಗಿದ್ದರು. ಆದರೆ ಅದು ಫೌಲ್ ಆಗಿತ್ತು. ಆದರೆ 31ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಎರಡೂಕೈಗಳಲ್ಲಿ ಬಳಸಿಕೊಂಡ ಫೋಲಾರಿನ್ ಬಲೋಗನ್ ಸೊಗಸಾದ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಮೊದಲಾವಧಿಯ ಹೆಚ್ಚುವರಿ ನಿಮಿಷದಲ್ಲಿ ಅಮೆರಿಕದ ಫೋಲಾರಿನ್ ಬಲೋಗನ್ ಕಮಾಲ್ ಮಾಡಿದರು. ಕೊನೆಯ ಕ್ಷಣದಲ್ಲಿ ಪರಾಗ್ವೆ ತಂಡದ ಇಬ್ಬರು ರಕ್ಷಣಾ ಆಟಗಾರರನ್ನು ವಂಚಿಸಿ ಚೆಂಡಿನ ಮೇಲೆ ಹಿಡಿತ ಸಾಧಿಸಿ ಚೆಂಡಿಗೆ ಗೋಲು ಪೆಟ್ಟಿಗೆಯ ದರ್ಶನ ಮಾಡಿಸಿದರು. ಪರಿಣಾಮ ಅಮೆರಿಕ 3-0 ಗೋಲುಗಳಿಂದ ಮುನ್ನಡೆ ಸಾಧಿಸಿತು.
73ನೇ ನಿಮಿಷದಲ್ಲಿ ಗೋಲು ಬಾರಿಸಿದ ಪರಾಗ್ವೆ
ಎರಡನೇ ಅವಧಿಯ ಆರಂಭದಲ್ಲೂ ಸ್ಥಿರ ಪ್ರದರ್ಶನ ನೀಡಿದ ಅಮೆರಿಕ ಗೋಲು ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಆಸೆಯೊಂದಿಗೆ ಕಣಕ್ಕೆ ಇಳಿಯಿತು. ಆದರೆ ಆ ಆಸೆಗೆ ಪೆಟ್ಟು ಬಿದ್ದಿತು. ಆದರೆ ಇದೇ ಅವಧಿಯಲ್ಲಿ ಅಮೆರಿಕದ ಐದು ರಕ್ಷಣಾ ಆಟಗಾರರನ್ನು ಬೇಧಿಸಿದ ಪರಾಗ್ವೆ ಆಟಗಾರರ ಚೆಂಡನ್ನು ಮೌರಿಶಿಯೋಗೆ ಪಾಸ್ ನೀಡಿದರು. ಇದರ ಲಾಭ ಪಡೆದ ಮೌರಿಶಿಯೋ 73ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಪರಿಣಾಮ 3-1 ರಿಂದ ಪರಾಗ್ವೆ ಹಿನ್ನಡೆ ಅನುಭವಿಸಿತು.
ಎರಡನೇ ಅವಧಿಯ ಕೊನೆಯ ಕ್ಷಣದಲ್ಲಿ ಜಿಯೋವಾನಿ ರೇನಾ ಒಂದು ಗೋಲು ಬಾರಿಸಿ ಅಮೆರಿಕದ ಗೋಲು ಸಂಖ್ಯೆಯನ್ನು ಹೆಚ್ಚಿಸಿದರು. ಅಮೆರಿಕ ಫಿಫಾ ವಿಶ್ವಕಪ್‌ನಲ್ಲಿ ಗೆಲುವಿನ ಆರಂಭವನ್ನು ಮಾಡಿತು.
ಅಂಕ ಹಂಚಿಕೊಂಡ ಕೆನಡಾ, ಬೋಸ್ನಿಯಾ
ಬಿ ಗುಂಪಿನ ಪಂದ್ಯದಲ್ಲಿ ಬೋಸ್ನಿಯಾ ಮತ್ತು ಹರ್ಜೆಗೋವಿನಾ ಹಾಗೂ ಕೆನಾಡ ತಂಡಗಳು ಅಂಕಗಳನ್ನು ಹಂಚಿಕೊಳ್ಳುವಲ್ಲಿ ಸಫಲವಾಗಿವೆ. ಕಾರ್ನರ್ ಕಿಕ್ ಲಾಭ ಪಡೆದ ಬೋಸ್ನಿಯಾ ತಂಡದ ಜೊವೊ ಲುಕಿಕ್ ಪಂದ್ಯದ 21ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಅಲ್ಲದೆ ಈ ಮುನ್ನಡೆ ಮೊದಲಾವಧಿಯವರೆಗೆ ಹಾಗೇ ಉಳಿದಿತ್ತು. ಆದರೆ ಎರಡನೇ ಅವಧಿಯಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಕೆನಡಾ ಉತ್ತಮ ಪ್ರದರ್ಶನ ನೀಡಿ 78ನೇ ನಿಮಿಷದಲ್ಲಿ ಗೋಲ್ ದಾಖಲಿಸಿತು. ಸೈಲ್ ಲಾರಿನ್ ಕೆನಡಾ ಪರ ಗೋಲು ಬಾರಿಸಿದರು. ಸಹ ಆಟಗಾರರು ನೀಡಿದ ಬೆಸ್ಟ್ ಪಾಸ್‌ನ ಲಾಭ ಪಡೆದು, ಅಮೋಘ ಕಾಲ್ಚಳಕ ಪ್ರದರ್ಶಿಸಿದ ಇವರು ತಂಡದ ಪರ ಮೊದಲ ಗೋಲು ದಾಖಲಿಸಿದರು. ಕೊನೆಯ ಕ್ಷಣದವರೆಗೂ ಉಭಯ ತಂಡಗಳು ಗೋಲು ಬಾರಿಸುವಲ್ಲಿ ವಿಫಲವಾದ್ದರಿಂದ ಪಂದ್ಯ ಡ್ರಾ ಆಯಿತು.
ಜೂನ್ 13 ರಂದು ಗುಂಪು ಹಂತದಲ್ಲಿ ಖತಾರ್ vs ಸ್ವಿಟ್ಜರ್ಲೆಂಡ್, ಬ್ರೆಜಿಲ್ vs ಮೊರಾಕೊ, ಮತ್ತು ಹೈಟಿ vs ಸ್ಕಾಟ್ಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಈ ವೇಳೆ ಎಲ್ಲರ ಕಣ್ಣುಗಳು ಮಾಜಿ ಚಾಂಪಿಯನ್ ಬ್ರೆಜಿಲ್ ಮೇಲೆ ನೆಟ್ಟಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

