FIFA World Cup: ಸ್ಕಾಟ್ಲೆಂಡ್ ಮಣಿಸಿದ ಬ್ರೆಜಿಲ್ ನಾಕೌಟ್ ಹಂತಕ್ಕೆ ಪ್ರವೇಶ
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬ್ರೆಜಿಲ್ ತಂಡ ತನ್ನ ಸಾಂಪ್ರದಾಯಿಕ ಆಕ್ರಮಣಕಾರಿ ಸಾಂಬಾ ಶೈಲಿಯ ಆಟಕ್ಕೆ ಮರಳಿದೆ. ಸ್ಕಾಟ್‌ಲ್ಯಾಂಡ್ ವಿರುದ್ಧ ನಡೆದ ಅತ್ಯಂತ ಮಹತ್ವದ ಪಂದ್ಯದಲ್ಲಿ ಬ್ರೆಜಿಲ್ 3-0 ಗೋಲುಗಳ ಭರ್ಜರಿ ಜಯ ಸಾಧಿಸುವ ಮೂಲಕ ಗ್ರೂಪ್ 'ಸಿ' ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ 32 ಹಂತಕ್ಕೆ ಲಗ್ಗೆ ಇಟ್ಟಿದೆ. ಮಿಯಾಮಿಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬ್ರೆಜಿಲ್ ಆಟಗಾರರು ಪಂದ್ಯದಲ್ಲಿ ಪುಟಿದೇಳುವ ಯಾವುದೇ ಅವಕಾಶವನ್ನು ಸ್ಕಾಟಿಷ್ ತಂಡಕ್ಕೆ ನೀಡದೆ ಪೂರ್ಣ ನಿಯಂತ್ರಣ ಸಾಧಿಸಿದರು.
ಬ್ರೆಜಿಲ್ ಪರ ಭರವಸೆಯ ಯುವ ಸ್ಟಾರ್ ಆಟಗಾರ ವಿನೀಶಿಯಸ್ ಜೂನಿಯರ್ ಆಕರ್ಷಕ ಎರಡು ಗೋಲು ಬಾರಿಸಿ ತಂಡದ ಜಯದ ರೂವಾರಿಯಾದರು. ಪಂದ್ಯದ 7 ಹಾಗೂ 45+3ನೇ ನಿಮಿಷದಲ್ಲಿ ಅದ್ಭುತವಾಗಿ ಗೋಲು ಗಳಿಸಿದ ವಿನೀಶಿಯಸ್ ತಂಡಕ್ಕೆ ಭದ್ರ ಮುನ್ನಡೆ ತಂದುಕೊಟ್ಟರು. ಬ್ರೆಜಿಲ್ ಪರ ಮೂರನೇ ಗೋಲನ್ನು ಸ್ಟ್ರೈಕರ್ ಮ್ಯಾಥ್ಯೂಸ್ ಕುನ್ಯಾ ದ್ವಿತೀಯಾರ್ಧದಲ್ಲಿ ತಂದುಕೊಟ್ಟರು. ಈ ಉನ್ನತ ಮಟ್ಟದ ಪ್ರದರ್ಶನ ಬ್ರೆಜಿಲ್ ತಂಡ ಪ್ರಶಸ್ತಿ ಗೆಲ್ಲುವ ಫೆವರೀಟ್ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿತು.

ಈ ಭರ್ಜರಿ ಜಯದೊಂದಿಗೆ ಒಟ್ಟು ಏಳು ಅಂಕಗಳನ್ನು ಕಲೆಹಾಕಿದ ಬ್ರೆಜಿಲ್ ತಂಡ ಗ್ರೂಪ್ ಸಿ ವಿಭಾಗದಲ್ಲಿ ಅಗ್ರಸ್ಥಾನದೊಂದಿಗೆ ಮುನ್ನಡೆದಿದೆ. ಇದೇ ಗ್ರೂಪ್‌ನ ಮತ್ತೊಂದು ಕಠಿಣ ಪಂದ್ಯದಲ್ಲಿ ಮೊರಾಕೊ 4-2 ರಿಂದ ಹೈಟಿ ವಿರುದ್ಧ ಭರ್ಜರಿ ಜಯ ಸಾಧಿಸಿ 7 ಅಂಕಗಳೊಂದಿಗೆ ಎರಡನೇ ಸ್ಥಾನಿಯಾಗಿ ನಾಕೌಟ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಇತ್ತ ಸತತ ಸೋಲು ಕಂಡ ಸ್ಕಾಟ್‌ಲ್ಯಾಂಡ್ ಟೂರ್ನಿಯಿಂದ ಹೊರಬಿದ್ದು ಭಾರೀ ನಿರಾಸೆ ಅನುಭವಿಸಿತು.
ಲಯಕ್ಕೆ ಮರಳಿದ ಬ್ರೆಜಿಲ್
ಪಂದ್ಯದ ಆರಂಭಿಕ ಹಂತದಲ್ಲಿ ಸ್ಕಾಟ್‌ಲ್ಯಾಂಡ್ ತಂಡ ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿ ಬ್ರೆಜಿಲ್ ತಂಡದ ಮೇಲೆ ಒತ್ತಡ ಹೇರಲು ಯತ್ನಿಸಿತು. ಆದರೆ, ಕ್ಯಾನರಿ ಪಡೆ ಧೃತಿಗೆಡದೆ ಮೈದಾನದಲ್ಲಿ ಶಿಸ್ತಿನ ಆಟ ಪ್ರದರ್ಶಿಸಿತು. ಎದುರಾಳಿ ತಂಡದ ತಂತ್ರಗಳನ್ನು ಮೊದಲೇ ಗ್ರಹಿಸಿದ ಬ್ರೆಜಿಲ್ ತರಬೇತುದಾರರ ಯೋಜನೆಗಳಿಗೆ ಪ್ರತ್ಯುತ್ತರ ನೀಡುತ್ತಾ ಸಾಗೀದರು. ಇದು ಪಂದ್ಯದ ದಿಕ್ಕನ್ನೇ ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.
ಪಂದ್ಯದ ಐದನೇ ನಿಮಿಷದಲ್ಲೇ ಬ್ರೆಜಿಲ್ ತಂಡಕ್ಕೆ ಮೊದಲ ಉತ್ತಮ ಕೌಂಟರ್ ಅಟ್ಯಾಕ್ ಅವಕಾಶ ಲಭಿಸಿತು. ಬಲವಿಂಗ್‌ನಿಂದ ಬಂದ ಚೆಂಡನ್ನು ವಿನೀಶಿಯಸ್ ಜೂನಿಯರ್ ಉತ್ತಮ ಕಾಲ್ಚಳಕ ಪ್ರದರ್ಶಿಸಿ ಸ್ಕಾಟ್ಲೆಂಡ್ ಗೋಲ್ ಕೀಪರ್ ವಂಚಿಸುವಲ್ಲಿ ವಿಫಲರಾದರು. ಪಂದ್ಯದ ಏಳನೇ ನಿಮಿಷದಲ್ಲಿ ಸ್ಕಾಟ್‌ಲ್ಯಾಂಡ್ ತಂಡದ ರಕ್ಷಣಾ ಆಟಗಾರರು ಮಾಡಿದ ತಪ್ಪಿನ ಸಂಪೂರ್ಣ ಲಾಭ ಪಡೆದ ಬ್ರೆಜಿಲ್ ಅಬ್ಬರಿಸಿತು. ಗೋಲ್‌ಕೀಪರ್‌ಗೆ ಹಿಮ್ಮುಖವಾಗಿ ಪಾಸ್ ನೀಡುವ ಯತ್ನದಲ್ಲಿ ಸ್ಕಾಟ್ ಮೆಕೆನ್ನಾ ಎಡವಿದ ತಕ್ಷಣ, ಚುರುಕಾಗಿ ಚೆಂಡನ್ನು ತನ್ನ ವಶಕ್ಕೆ ಪಡೆದ ರಯಾನ್ ಅತ್ಯಂತ ಚಾಣಾಕ್ಷತನದಿಂದ ವಿನೀಶಿಯಸ್ ಜೂನಿಯರ್ ಅವರತ್ತ ಕ್ರಾಸ್ ಮಾಡಿದರು. ವಿನೀಶಿಯಸ್ ಯಾವುದೇ ಒತ್ತಡವಿಲ್ಲದೆ ಸುಲಭವಾಗಿ ಗೋಲು ಬಾರಿಸಿ ಸಂಭ್ರಮಿಸಿದರು.
ವಿನೀಶಿಯಸ್ ಜೂನಿಯರ್ ಮಿಂಚು
ಈ ಗೋಲಿನೊಂದಿಗೆ ವಿನೀಶಿಯಸ್ ಜೂನಿಯರ್ ಬ್ರೆಜಿಲ್ ಸಾಕರ್ ಇತಿಹಾಸದ ಶ್ರೇಷ್ಠ ದಂತಕಥೆಗಳ ಸಾಲಿಗೆ ಸೇರಿದರು. ಒಂದೇ ವಿಶ್ವಕಪ್‌ನ ಸತತ ಮೂರು ಗ್ರೂಪ್ ಪಂದ್ಯಗಳಲ್ಲಿ ಗೋಲು ಗಳಿಸಿದ ಬ್ರೆಜಿಲ್‌ನ ಶ್ರೇಷ್ಠ ಆಟಗಾರರಾದ ರೊನಾಲ್ಡೊ ನಜಾರಿಯೋ, ರೊಮಾರಿಯೋ ಮತ್ತು ಜೈರ್ಜಿನ್ಹೋ ಅವರ ಅಪರೂಪದ ಎಲೈಟ್ ಕ್ಲಬ್‌ಗೆ ಇವರು ಸ್ಥಾನ ಪಡೆದರು. ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ (45+3) ಬ್ರೂನೋ ನೀಡಿದ ಅಮೋಘ ಕ್ರಾಸ್ ಅನ್ನು ವಿನೀಶಿಯಸ್ ಅದ್ಭುತ ಹೆಡರ್ ಮುಖಾಂತರ ಎರಡನೇ ಗೋಲಾಗಿ ಪರಿವರ್ತಿಸಿದರು.
ದ್ವಿತೀಯಾರ್ಧದಲ್ಲಿ ಪಂದ್ಯಕ್ಕೆ ಮರಳಲು ಸ್ಕಾಟ್‌ಲ್ಯಾಂಡ್ ಸತತ ರಣತಂತ್ರಗಳನ್ನು ಪ್ರಯತ್ನಿಸಿತು. ಆದರೆ ಫಲ ಲಭಿಸಲಿಲ್ಲ. ಪಂದ್ಯದ 61ನೇ ನಿಮಿಷದಲ್ಲಿ ಬ್ರೆಜಿಲ್ ತಂಡ ಪಂದ್ಯದಲ್ಲಿ ತನ್ನ ಮೂರನೇ ಗೋಲು ದಾಖಲಿಸಿತು. ಮ್ಯಾಥ್ಯೂಸ್ ಕುನ್ಯಾ ಅಮೋಘ ಗೋಲು ದಾಖಲಿಸಿ ಜಯದಲ್ಲಿ ಮಿಂಚಿದರು. ಪರಿಣಾಮ ಬ್ರೆಜಿಲ್ ಸುಲಭ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

