
ಕೋಲ್ಕತ್ತಾ, ಆಗಸ್ಟ್ 9: ಭಾರತ ಫುಟ್ಬಾಲ್ ತಂಡದ ಮಾಜಿ ಡಿಫೆಂಡರ್, ಮೋಹನ್ ಬಗಾನ್ ಎಫ್‌ಸಿಯ ನಾಯಕ ಮಣಿತಂಬಿ ಸಿಂಗ್ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಮಣಿಪುರದ ಇಂಪಾಲ ಸಮೀಪದ ಹಳ್ಳಿಯಲ್ಲಿ ಮಣಿತಂಬಿ ಕೊನೆಯುಸಿರೆಳೆದಿರುವುದಾಗಿ ಕ್ಲಬ್ ಮೂಲ ತಿಳಿಸಿದೆ.
ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಣಿತಂಬಿ ಭಾನುವಾರ ಮುಂಜಾನೆ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಸಿಂಗ್‌ಗೆ 39 ವರ್ಷ ವಯಸ್ಸಾಗಿತ್ತು. ಮಣಿತಂಬಿ ತನ್ನ ಪತ್ನಿ ಮತ್ತು 8ರ ಹರೆಯದ ಪುತ್ರನನ್ನು ಅಗಲಿದ್ದಾರೆ.
'ಕ್ಲಬ್‌ನ ಮಾಜಿ ನಾಯಕ ಮಣಿತಂಬಿ ಸಿಂಗ್ ಅವರ ಅಕಾಲಿಕ ಮರಣಕ್ಕೆ ಮೋಹನ್ ಬಗಾನ್ ತೀವ್ರ ಸಂತಾಪ ಸೂಚಿಸುತ್ತಿದೆ. ಅವರ ಕುಟುಂಬಕ್ಕೆ ಇಂಥ ಸಂಕಷ್ಟದ ಸಂದರ್ಭದಲ್ಲಿ ದೇವರು ಧೈರ್ಯ ತುಂಬಲಿ ಎಂದು ನಾವು ಪ್ರಾರ್ಥಿಸುತ್ತೇವೆ,' ಎಂದು ಮೋಹನ್ ಬಗಾನ್ ಟ್ವಿಟರ್‌ನಲ್ಲಿ ಬರೆದುಕೊಂಡಿದೆ.
ಸ್ಟೀಫನ್ ಕಾನ್ಸ್ಟಂಟೈನ್ ತರಬೇತಿಯಲ್ಲಿದ್ದ ಭಾರತ ಅಂಡರ್-23 ತಂಡದಲ್ಲಿ ಮಣಿತಂಬಿ ಪ್ರಮುಖ ಆಟಗಾರರಾಗಿದ್ದರು. 2003ರಲ್ಲಿ ಭಾರತ-23 ತಂಡ ಹಾಲಿ ಚಾಂಪಿಯನ್ ವಿಯೆಟ್ನಾಂ ಅನ್ನು 3-2 ಸೋಲಿಸಿ ಎಲ್‌ಜಿ ಕಪ್ ಜಯಿಸಿತ್ತು. ಈ ಪಂದ್ಯ ವಿಯೆಟ್ನಾಂನ ಹೋ ಚಿ ಮಿನ್ಹ್ ಸಿಟಿಯಲ್ಲಿ ನಡೆದಿತ್ತು.