
ಬರ್ಲಿನ್, ಸೆಪ್ಟೆಂಬರ್ 27: ಪ್ರತಿಷ್ಠಿತ 'ಯೂರೋ 2024' ಫುಟ್ಬಾಲ್ ಟೂರ್ನಿಯ ಆತಿಥ್ಯ ವಹಿಸುವ ರೇಸ್ ನಲ್ಲಿ ಜರ್ಮನಿ ಮೇಲುಗೈ ಸಾಧಿಸಿದೆ. ಟರ್ಕಿಯಿಂದ ಭರ್ಜರಿ ಸ್ಪರ್ಧೆ ದೊರೆತ ಹೊರತಾಗಿಯೂ ಆತಿಥ್ಯ ವಹಿಸುವ ಜವಾಬ್ದಾರಿ ಜರ್ಮನಿ ಪಾಲಾಗಿದೆ.
2024 ಯೂರೋ ಫುಟ್ಬಾಲ್ ಆತಿಥ್ಯವನ್ನು ಜರ್ಮನಿ ವಹಿಸಿಕೊಳ್ಳಲಿದೆ ಎಂದು ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ಸ್ (ಯುಎಎಫ್ಎ) ಗುರುವಾರ (ಸೆಪ್ಟೆಂಬರ್ 27) ತಿಳಿಸಿದೆ. 2006 ವರ್ಲ್ಡ್ ಕಪ್ ಬಳಿಕ ಜರ್ಮನಿಯಲ್ಲಿ ನಡೆಯಲಿರುವ ಮೊದಲ ಪ್ರಮುಖ ಅಂತಾರಾಷ್ಟ್ರೀಯ ಟೂರ್ನಮೆಂಟ್ ಇದು.
ಜರ್ಮನ್ ತಂಡ ಮೂರು ಬಾರಿ ಯುರೋಪಿಯನ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಡೆಯಬಾರಿ ಜರ್ಮನಿ 1996ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಬೇಯರ್ನ್ ಮ್ಯೂನಿಕ್ ಮತ್ತು ಜರ್ಮನಿ ತಂಡದ ಮಾಜಿ ನಾಯಕ ಫಿಲಿಪ್ ಲಾಮ್ ಅವರು ಆತಿಥ್ಯದ ಬಿಡ್ ವೇಳೆ ಅಂಬಾಸಿಡರ್ ಆಗಿ ಕಾರ್ಯ ನಿರ್ವಹಿಸಿದ್ದರು.