2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟವು ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿದೆ. ಕೋವಿಡ್-19 ಕಾರಣದಿಂದಾಗಿ 2022ರ ಬದಲಾಗಿ 2023ಕ್ಕೆ ಬದಲಾಯಿಸಲಾಗಿದೆ.
ಏಷ್ಯಾದ ಅಗ್ರ ಎಂಟು ತಂಡಗಳಲ್ಲಿ ಸ್ಥಾನ ಪಡೆಯುವ ಮಾನದಂಡಗಳನ್ನು ಭಾರತೀಯ ಫುಟ್ಬಾಲ್ ಪುರುಷ ಮತ್ತು ಮಹಿಳಾ ತಂಡಗಳು ಪೂರೈಸದಿದ್ದ ಕಾರಣ, 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಅನುಮತಿ ನಿರಾಕರಿಸಲಾಗಿತ್ತು.
ಇದೀಗ ಕೇಂದ್ರ ಕ್ರೀಡಾ ಸಚಿವಾಲಯವು ವಿನಾಯಿತಿ ನೀಡಿದ ನಂತರ, ಭಾರತೀಯ ಪುರುಷರ ಮತ್ತು ಮಹಿಳಾ ಫುಟ್ಬಾಲ್ ತಂಡಗಳು ಸೆಪ್ಟೆಂಬರ್‌ನಲ್ಲಿ ಹ್ಯಾಂಗ್‌ಝೌನಲ್ಲಿ 2022ರ ಏಷ್ಯನ್ ಗೇಮ್ಸ್‌ನಲ್ಲಿ ಸ್ಥಾನ ಪಡೆಯಲಿದೆ.

ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಇತ್ತೀಚಿನ ದಿನಗಳಲ್ಲಿ ಭಾರತದ ಪ್ರಭಾವಶಾಲಿ ಪ್ರದರ್ಶನದ ಹಿನ್ನೆಲೆಯಲ್ಲಿ 18ನೇ ಶ್ರೇಯಾಂಕದ ಪುರುಷ ಮತ್ತು 11ನೇ ಶ್ರೇಯಾಂಕದ ಮಹಿಳಾ ತಂಡಕ್ಕೆ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಲಾಗಿತ್ತು.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡಿ, "ನಮ್ಮ ರಾಷ್ಟ್ರೀಯ ಪುರುಷರು ಮತ್ತು ಮಹಿಳಾ ಫುಟ್ಬಾಲ್ ತಂಡಗಳು ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಸಿದ್ಧವಾಗಿವೆ," ಎಂದು ಬರೆದುಕೊಂಡಿದ್ದಾರೆ.
"ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಅಸ್ತಿತ್ವದಲ್ಲಿರುವ ಮಾನದಂಡದ ಪ್ರಕಾರ, ಅರ್ಹತೆ ಪಡೆಯದ ಎರಡೂ ತಂಡಗಳ ಭಾಗವಹಿಸುವಿಕೆಗೆ ಅನುಕೂಲವಾಗುವಂತೆ ನಿಯಮಗಳನ್ನು ಸಡಿಲಿಸಲು ನಿರ್ಧರಿಸಿದೆ," ಎಂದು ತಿಳಿಸಿದ್ದಾರೆ.
ಭಾರತ ಪುರುಷರ ತಂಡವು ಇಂಟರ್‌ಕಾಂಟಿನೆಂಟಲ್ ಕಪ್ ಮತ್ತು ಸತತವಾಗಿ SAFF ಕಪ್ ಅನ್ನು ಕೆಲವು ಪ್ರಭಾವಶಾಲಿ ಪ್ರದರ್ಶನಗಳೊಂದಿಗೆ ಗೆದ್ದಿತು. ಮಹಿಳೆಯರ ತಂಡವು ಏಪ್ರಿಲ್‌ನಲ್ಲಿ ತಮ್ಮ ಮೊದಲ ಸುತ್ತಿನ ಒಲಿಂಪಿಕ್ ಅರ್ಹತಾ ಪಂದ್ಯಗಳನ್ನು ಕಿರ್ಗಿಸ್ತಾನ್ ತಂಡವನ್ನು ಸೋಲಿಸುವ ಮೂಲಕ ಗೆಲುವು ಸಾಧಿಸಿತ್ತು.
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡಕ್ಕೆ ತರಬೇತುದಾರರಾಗಿರುವ ರಾಷ್ಟ್ರೀಯ ಪುರುಷರ ತಂಡದ ಮುಖ್ಯ ಕೋಚ್ ಇಗೊರ್ ಸ್ಟಿಮ್ಯಾಕ್ ಅವರು ಭಾರತದ ಫುಟ್ಬಾಲ್ ತಂಡಗಳಿಗೆ ಅವಕಾಶ ನೀಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಮಧ್ಯಸ್ಥಿಕೆಗೆ ಒತ್ತಾಯಿಸಿದ್ದರು.
2018ರ ಜಕಾರ್ತಾದಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದಿಂದ ಅದೇ ಮಾನದಂಡದ ಪ್ರಕಾರ ಹೊರಗುಳಿದಿತ್ತು. ಇದೀಗ ಭಾರತ ಫುಟ್ಬಾಲ್ ತಂಡವು 2014ರ ನಂತರ ಮೊದಲ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಆಡಲಿದೆ.
ಏಷ್ಯನ್ ಗೇಮ್ಸ್‌ನಲ್ಲಿನ ಫುಟ್‌ಬಾಲ್ ಅಂಡರ-23 ಪಂದ್ಯಾವಳಿಯಾಗಿದ್ದು, ಅದಕ್ಕಿಂತ ಹೆಚ್ಚಿನ ವಯಸ್ಸಿನ ಮೂವರು ಆಟಗಾರರನ್ನು ಸಹ ಭಾರತ ತಂಡದಲ್ಲಿ ಅನುಮತಿಸಲಾಗಿದೆ.
15 ದಿನಗಳ ಕಾಲ ನಡೆಯಲಿರುವ 2023ರ ಏಷ್ಯನ್ ಗೇಮ್ಸ್‌ನಲ್ಲಿ ಏಷ್ಯಾದ 40 ಪ್ರಮುಖ ಕ್ರೀಡೆಗಳನ್ನು ಆಡಿಸಲಾಗುತ್ತದೆ. ಒಲಿಂಪಿಕ್‌ನಂತೆ ನಾಲ್ಕು ವರ್ಷಗಳಿಗೊಮ್ಮೆ ಆಯೋಜನೆಯಾಗುವ ಪಂದ್ಯಾವಳಿಯಲ್ಲಿ ಭಾರತ ಫುಟ್ಬಾಲ್ ತಂಡಗಳು ಭಾಗವಹಿಸಲಿವೆ.