
ಕೋಲ್ಕತ್ತಾ, ಅಕ್ಟೋಬರ್ 26: ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 26) ನಡೆದ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಚೆನ್ನೈಯಿಸ್ ಎಫ್‌ಸಿ ವಿರುದ್ಧ ಎಟಿಕೆ 2-1 ಅಂತರದ ಗೆಲುವು ದಾಖಲಿಸಿದೆ. ಮೂರೂ ಗೋಲ್ ಗಳು ಪಂದ್ಯದ ಪ್ರಥಮಾರ್ಥದಲ್ಲೇ ಲಭಿಸಿದವು.
ಪಂದ್ಯ ಆರಂಭಗೊಂಡ 2ನೇ ನಿಮಿಷದಲ್ಲಿ ಕಲು ಯುಚೆ ಗೋಲ್ ಬಾರಿಸಿ ಎಟಿಕೆಗೆ ಮುನ್ನಡೆ ಕೊಟ್ಟರು. ಅದಾಗಿ 12ನೇ ನಿಮಿಷದಲ್ಲಿ ಜಾನ್ ಜಾನ್ಸನ್ ಎಟಿಕೆ ಪರ ಎರಡನೇ ಗೋಲ್ ಸಿಡಿಸಿದರು. 16ನೇ ನಿಮಿಷದಲ್ಲಿ ಚೆನ್ನೈಯಿಂದ ಕಾರ್ಲೋಸ್ ಸಲೋಮ್ ಗೋಲ್ ಬಾರಿಸಿ ಸೋಲಿನ ಅಂತರವನ್ನು ಕಿರಿದುಗೊಳಿಸಿಕೊಂಡರು.
ತವರಿನಲ್ಲಿ ಪಂದ್ಯ ನಡೆದಿದ್ದರಿಂದ ಎಟಿಕೆ ಗೆಲುವಿನ ವಿಶ್ವಾಸದಲ್ಲೇ ಮೈದಾನಕ್ಕಿಳಿದಿತ್ತು. ಪಂದ್ಯದ ವೇಳೆ ಇತ್ತಂಡಗಳಿಂದ ತಲಾ ಮೂರು ಬಾರಿ ಆಟಗಾರರ ಬದಲಾವಣೆ ನಡೆಯಿತು. ವಿಜೇತ ತಂಡ ಎಟಿಕೆ ವಿರುದ್ಧವೇ ಒಟ್ಟು 4 ಬಾರಿ ಯೆಲ್ಲೋ ಕಾರ್ಡ್ ಪ್ರದರ್ಶಿಸಲ್ಪಟ್ಟಿತು.