
ಗೋವಾ ಜನವರಿ 28: ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ಹಾಗೂ ಹೈದರಾಬಾದ್ ಎಫ್ ಸಿ ನಡುವಿನ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯ 2-2 ಗೋಲುಗಳಿಂದ ಸಮಬಲಗೊಂಡಿತು. ಬೆಂಗಳೂರು 86ನೇ ನಿಮಿಷದವರೆಗೂ 2-0 ಗೋಲಿನಿಂದ ಮೇಲುಗೈ ಸಾಧಿಸಿ ಜಯದ ಹೊಸ್ತಿಲಲ್ಲಿದ್ದಿತು. ಆದರೆ ಅಂತಿಮ ನಾಲ್ಕು ನಿಮಿಷಗಳ ಅಂತರದಲ್ಲಿ ಎರಡು ಗೋಲುಗಳನ್ನು ಗಳಿಸಿದ ಹೈದರಾಬಾದ್ ಪಂದ್ಯದ ಗತಿಯನ್ನೇ ಬದಲಾಯಿಸಿತು. ಬೆಂಗಳೂರು ಪರ ನಾಯಕ ಸುನಿಲ್ ಛೆಟ್ರಿ (9ನೇ ನಿಮಿಷ) ಹಾಗೂ ಲಿಯಾನ್ ಆಗಸ್ಟಿನ್ (61ನೇ ನಿಮಿಷ) ಹಾಗೂ ಹೈದರಾಬಾದ್ ಪರ ಅರಿದಾನೆ ಸ್ಯಾಂಟನಾ (86ನೇ ನಿಮಿಷ) ಹಾಗೂ ಫ್ರಾನ್ಸಿಸ್ಕೊ ಸ್ಯಾಂಡೆಸಾ (90ನೇ ನಿಮಿಷ) ಗೋಲು ಗಳಿಸಿದರು. ಈ ಫಲಿತಾಂಶದೊಂದಿಗೆ ಹೈದರಾಬಾದ್ ನಾಲ್ಕನೇ ಸ್ಥಾನದಲ್ಲಿ ಭದ್ರವಾಗಿ ಉಳಿದರೆ ಬೆಂಗಳೂರು ಏಳನೇ ಸ್ಥಾನ ತಲುಪಿತು.
ಮುನ್ನಡೆದ ಬೆಂಗಳೂರು: ನಾಯಕ ಸುನಿಲ್ ಛೆಟ್ರಿ (9ನೇ ನಿಮಿಷ) ಹೆಡರ್ ಮೂಲಕ ಗಳಿಸಿದ ಗೋಲಿನಿಂದ ಹೈದರಾಬಾದ್ ವಿರುದ್ಧ ಪ್ರಥಮಾರ್ಧದಲ್ಲಿ ಬೆಂಗಳೂರು ಎಫ್ ಸಿ 1-0 ಗೋಲಿನಿಂದ ಮೇಲುಗೈ ಸಾಧಿಸಿತು. ಕ್ಲೈಟನ್ ಸಿಲ್ವಾ ಅವರ ಫ್ರೀ ಕಿಕ್ ನಲ್ಲಿ ಛೆಟ್ರಿ ಹೆಡರ್ ಮೂಲಕ ತಂಡಕ್ಕೆ ಅಮೂಲ್ಯ ಮುನ್ನಡೆ ಕಲ್ಪಿಸಿದರು. ಅಂತಿಮ ಹಂತದಲ್ಲಿ ಬೆಂಗಳೂರು ತಂಡಕ್ಕೆ ಎರಡು ಬಾರಿ ಗೋಲು ಗಳಿಸುವ ಅವಕಾಶವಿದ್ದಿತ್ತು, ಆದರೆ ಹೈದರಾಬಾದ್ ಡಿಫೆಂಡರ್ಸ್ ಅದಕ್ಕೆ ಅವಕಾಶ ಕಲ್ಪಿಸಲಿಲ್ಲ. 45ನೇ ನಿಮಿಷದಲ್ಲಿ ಹೈದರಾಬಾದ್ ಸುಲಭವಾಗಿ ಗೋಲು ಗಳಿಸಬಹುದಾದ ಅವಕಾಶವನ್ನು ಕೈ ಚೆಲ್ಲಿತು.
ಬೆಂಗಳೂರಿಗೆ ಕಾರ್ನರ್ ಕಿಕ್ ಅವಕಾಶ ಸಿಕ್ಕಿತು. ಕ್ಲೈಟನ್ ಸಿಲ್ವಾ ಎಡಭಾಗದಿಂದ ಗೋಲ್ ಬಾಕ್ಸ್ ಕಡೆಗೆ ಚೆಂಡನ್ನು ತುಳಿದರು. ಸುನಿಲ್ ಛೆಟ್ರಿ ಅದನ್ನು ಹೆಡರ್ ಮೂಲಕ ಗೋಲು ಗಳಿಸಲು ಯತ್ನಿಸಿದರು. ಆದರೆ ಚೆಂಡು ಹಿತೇಶ್ ಶರ್ಮಾ ಅವರ ನಿಯಂತ್ರಣಕ್ಕೆ ಸಿಕ್ಕಿತು. ಅವರು ಚೆಂಡನ್ನು ಲಿಸ್ಟನ್ ಕೊಲ್ಯಾಕೊ ಅವರಿಗೆ ನೀಡಿದರು. ಕೊಲ್ಯಾಕೊ ಚೆಂಡನ್ನು ಮಿಡ್ ಫೀಲ್ಡ್ ಮೂಲಕ ಮುನ್ನಡೆಸಿದರು. ನಂತರ ಅಕ್ಷಯ್ ಮಿಶ್ರಾ ಅವರಿಗೆ ಚೆಂಡನ್ನು ಪಾಸ್ ಮಾಡಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಡಿಫೆನ್ಸ್ ಆಟಗಾರರು ಇರಲಿಲ್ಲ. ಹಾಲಿಚರಣ್ ನಾರ್ಜಿ ಅವರಿಗೆ ಸುಲಭವಾಗಿ ಗೋಲು ಗಳಿಸಬಹುದಾಗಿತ್ತು. ಆದರೆ ಅವರು ತುಳಿದ ಚೆಂಡು ಪೋಸ್ಟ್ ಹೊರಭಾಗದಲ್ಲಿ ಸಾಗಿ ಉತ್ತಮ ಅವಕಾಶವೊಂದು ತಪ್ಪಿಹೋಯಿತು.
ಜಯದ ಒತ್ತಡದಲ್ಲಿ ಬೆಂಗಳೂರು: 9ನೇ ಸ್ಥಾನದಲ್ಲಿರುವ ಬೆಂಗಳೂರು ತಂಡಕ್ಕೆ ಹೈದರಾಬಾದ್ ವಿರುದ್ಧ ಜಯದ ಅಗತ್ಯ ಇದೆ. ಜೆಮ್ಷೆಡ್ಪುರ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಡ್ರಾ ಸಾಧಿಸಿದ ತಂತರ ಹೈದರಾಬಾದ್ ತಂಡ ಈ ಪಂದ್ಯಕ್ಕೆ ಅಣಿಯಾಯಿತು. ಕಳೆದ ಮೂರು ಪಂದ್ಯಗಳಲ್ಲೂ ಹೈದರಾಬಾದ್ ಕೇವಲ ಡ್ರಾಗೆ ತೃಪ್ತಿಪಟ್ಟಿತ್ತು. ಆದರೆ ಐದು ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ. ಎರಡು ಜಯ ಕಂಡಿತ್ತು. ಕೋಚ್ ಮಾನ್ವೆಲ್ ಕಾರ್ಕ್ವೇಜ್ ತಂಡದ ಆಟಗಾರರಿಗೆ ಜಯದ ಹೊರತು ಬೇರೇನು ಬೇಡ ಎಂದು ಕರೆ ನೀಡಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಹೈದರಾಬಾದ್ ಕೇವಲ ಒಂದು ಗೋಲನ್ನು ಮಾತ್ರ ಎದುರಾಳಿ ತಂಡಕ್ಕೆ ಗಳಿಸಲು ಅವಕಾಶ ಕಲ್ಪಿಸಿತ್ತು.
ಡಿಫೆನ್ಸ್ ನಲ್ಲಿ ಉತ್ತಮವಾಗಿದ್ದರೂ ಅಟ್ಯಾಕ್ ವಿಭಾಗದಲ್ಲಿ ಹೈದರಾಬಾದ್ ಚೇತರಿಸಿಕೊಳ್ಳಬೇಕಾಗಿದೆ. ಇದು ಬೆಂಗಳೂರು ತಂಡಕ್ಕೆ ಅನುಕೂಲವಾಗಲಿದೆ, ಬೆಂಗಳೂರು ಯಾವ ರೀತಿಯಲ್ಲಿ ಅದನ್ನು ಸದುಪಯೋಗಪಡಿಸಿಕೊಳ್ಳುತ್ತದೆ ಎನ್ನುವುದು ಮುಖ್ಯ. 13 ಪಂದ್ಯಗಳಲ್ಲಿ 17 ಗೋಲುಗಳನ್ನು ನೀಡಿರುವ ಬೆಂಗಳೂರು ಡಿಫೆನ್ಸ್ ವಿಭಾಗದ ಕಡೆಗೆ ಗಮನ ಹರಿಸಬೇಕಾಗಿದೆ. 10 ಪಂದ್ಯಗಳಲ್ಲಿ ತಂಡ ಕ್ಲೀನ್ ಶೀಟ್ ಸಾಧನೆ ಮಾಡಿರಲಿಲ್ಲ. ಒಡಿಶಾ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಎರಿಕ್ ಪಾರ್ಥಲು ಹೆಡರ್ ಮೂಲಕ ಗೋಲು ಗಳಿಸದೇ ಇರುತ್ತಿದ್ದರೆ ತಂಡ ಹೀನಾಯ ಸೋಲಿಗೆ ಶರಣಾಗುತ್ತಿತ್ತು. ಉತ್ತಮ ಆಟಗಾರರಿಂದ ಕೂಡಿರುವ ಬೆಂಗಳೂರು ತಂಡ ಜಯದ ಹಾದಿಗೆ ಮರಳಲು ಇದು ಸೂಕ್ತ ಕಾಲ.