ಐಎಸ್ಎಲ್: ಇಸ್ಮಾಯಿಲ್ ಮಿಂಚು, ಚೆನ್ನೈಯಿನ್ ಎಫ್‌ಸಿಗೆ ಶರಣಾದ ಒಡಿಶಾ ಎಫ್‌ಸಿ

ಗೋವಾ, ಜನವರಿ 13: ಸ್ಟ್ರೈಕರ್ ಇಸ್ಮಾಯಿಲ್ ಗೊನ್ಸಾಲ್ವೆಸ್ (15ನೇ ಮತ್ತು 21ನೇ ನಿಮಿಷ) ಬಾರಿಸಿದ ಡಬಲ್ ಗೋಲ್ ಬಲದಿಂದ ಮಿಂಚಿದ ಚೆನ್ನೈಯಿನ್ ಎಫ್‌ಸಿ ತಂಡ ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ 57ನೇ ಲೀಗ್ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಎದುರು ಜಯ ದಾಖಲಿಸಿದೆ.
ಇಲ್ಲಿನ ಜಿಎಂಸಿ ಕ್ರಿಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮಿಂಚಿದ ಚೆನ್ನೈಯಿನ್ ಎಫ್‌ಸಿ ತಂಡ ಮೊದಲಾರ್ಧದಲ್ಲಿ ಗಳಿಸಿದ ಎರಡು ಗೋಲ್‌ಗಳ ಬಲದಿಂದ ಒಡಿಶಾ ಎಫ್‌ಸಿ ತಂಡವನ್ನು 2-1 ಅಂತರದಲ್ಲಿ ಮಣಿಸುವಲ್ಲಿ ಯಶಸ್ವಿಯಾಯಿತು. ಹೋರಾಟ ಪ್ರದರ್ಶಿಸಿದ ಒಡಿಶಾ ತಂಡ ಪರ ಸ್ಟ್ರೈಕರ್ ಡಿಯೇಗೊ ಮೌರಿಸಿಯೊ (63ನೇ ನಿಮಿಷ) ಏಕೈಕ ಗೋಲ್ ಬಾರಿಸಿ ಸೋಲಿನ ಅಂತರವನ್ನಷ್ಟೇ ತಗ್ಗಿಸಿದರು.
ಇದು ಪ್ರಸಕ್ತ ಐಎಸ್‌ಎಸ್ ಟೂರ್ನಿಯ ಎರಡನೇ ಘಟ್ಟದಲ್ಲಿ ಚೆನ್ನೈಯಿನ್ ತಂಡ ಆಡಿದ ಮೊದಲ ಪಂದ್ಯವಾಗಿದೆ. ಇದಕ್ಕೂ ಮುನ್ನ ಆಡಿದ 10 ಪಂದ್ಯಗಳಿಂದ 11 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿ ಇದ್ದ ಚೆನ್ನೈ ತಂಡ, ಈಗ ಒಡಿಶಾ ಎದುರು ಸಂಪೂರ್ಣ ಮೂರು ಅಂಕಗಳನ್ನು ಬಾಚಿಕೊಂಡು ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದೆ. 11 ಪಂದ್ಯಗಳಿಂದ 14 ಅಂಕಗಳನ್ನು ಸಂಪಾದಿಸಿರುವ ಚೆನ್ನೈ ಪಡೆ ಜಮ್ಷೆಡ್ಪುರ್ ಎಫ್‌ಸಿ, ಬೆಂಗಳೂರು ಎಫ್‌ಸಿ ಮತ್ತು ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ಅಂತಹ ಬಲಿಷ್ಠ ತಂಡಗಳಿಗೆ ಸಡ್ಡು ಹೊಡೆದಿದೆ.

ಕೊನೆಯ ಸ್ಥಾನದಲ್ಲಿ ಒಡಿಶಾ
ಕಳೆದ ಎರಡು ಪಂದ್ಯಗಳಲ್ಲಿ ಗೆಲುವು ಮತ್ತು ಡ್ರಾ ಫಲಿತಾಂಶ ಕಂಡು ಚೇತರಿಸಿದ್ದ ಒಡಿಶಾ ಎಫ್‌ಸಿ ಈಗ ಮತ್ತೆ ಸೋಲಿನ ಹಾದಿ ತುಳಿದಿದೆ. ಪರಿಣಾಮ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲೇ ಉಳಿಯುವಂತಾಗಿದೆ. ಒಡಿಶಾ ತಂಡ ಆಡಿದ 11 ಪಂದ್ಯಗಳಿಂದ ಕೇವಲ 6 ಅಂಕಗಳನ್ನು ಮಾತ್ರವೇ ಗಳಿಸಿದೆ.

ಮೊದಲಾರ್ಧದಲ್ಲೇ ಚೆನ್ನೈಯಿನ್‌ಗೆ ಮೇಲುಗೈ
ಪಂದ್ಯದಲ್ಲಿ ಚೆಂಡಿನ ಮೇಲಿನ ನಿಯಂತ್ರಣವನ್ನು ಶೇ. 40 ರಷ್ಟು ಕಾಯ್ದುಕೊಂಡರು ಕೂಡ ಗೋಲ್‌ಗಳಿಕೆಯ ವಿಚಾರದಲ್ಲಿ ಚೆನ್ನೈ ಮೇಲುಗೈ ಪಡೆದುಕೊಂಡಿತು. ಅದರಲ್ಲೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಸ್ಟ್ರೈಕರ್ ಇಸ್ಮಾಯಿಲ್ 15ನೇ ನಿಮಿಷದಲ್ಲಿ ಏಕಾಂಗಿಯಾಗಿ ಎದುರಾಳಿ ಡಿಫೆಂಡರ್‌ಗಳನ್ನು ವಂಚಿಸಿ ಚೆಂಡನ್ನು ಗುರಿ ಮುಟ್ಟಿಸಿದರೆ, ಇದಾದ 6 ನಿಮಿಷಗಳ ನಂತ ಸಿಕ್ಕ ಪೆನಾಲ್ಟಿ ಸ್ಪಾಟ್ ಕಿಕ್‌ನಲ್ಲಿ ಎರಡನೇ ಗೋಲ್ ಬಾರಿಸಿ ತಂಡಕ್ಕೆ ಗೆಲುವನ್ನು ಖಾತ್ರಿ ಪಡಿಸಿದರು.

ಚೆನ್ನೈಯಿನ್ ರಕ್ಷಣಾತ್ಮಕ ಆಟ
ಮೊದಲಾರ್ಧದಲ್ಲಿ ಸಿಕ್ಕ 2-0 ಅಂತರದ ಭಾರಿ ಮುನ್ನಡೆಯ ಪರಿಣಾಮ ದ್ವಿತೀಯಾರ್ಧದಲ್ಲಿ ಚೆನ್ನೈ ತಂಡ ರಕ್ಷಣಾತ್ಮಕ ಆಟದ ಮೊರೆ ಹೋಯಿತು. ಇಲ್ಲಿ ಪಂದ್ಯ ಉಳಿಸಿಕೊಳ್ಳಲು ಒಡಿಶಾ ಶತಾಯ ಗತಾಯ ಪ್ರಯತ್ನ ಮಾಡಿದ ಸಂದರ್ಭದಲ್ಲಿ ಸ್ಟ್ರೈಕರ್ ಡಿಯೇಗೊಗೆ 63ನೇ ನಿಮಿಷದಲ್ಲಿ ಏಕೈಕ ಗೋಲ್ ಬಾರಿಸುವ ಅವಕಾಶ ಮಾತ್ರವೇ ಲಭ್ಯವಾಯಿತು. ಸಿಕ್ಕ 7 ಕಾರ್ನರ್ ಕಿಕ್‌ಗಳನ್ನು ಗೋಲ್ ಆಗಿ ಪರಿವರ್ತಿಸುವಲ್ಲಿ ಒಡಿಶಾ ವಿಫಲವಾಯಿತು.ಮೊದಲಾರ್ಧದಲ್ಲಿ ಸಿಕ್ಕ 2-0 ಅಂತರದ ಭಾರಿ ಮುನ್ನಡೆಯ ಪರಿಣಾಮ ದ್ವಿತೀಯಾರ್ಧದಲ್ಲಿ ಚೆನ್ನೈ ತಂಡ ರಕ್ಷಣಾತ್ಮಕ ಆಟದ ಮೊರೆ ಹೋಯಿತು. ಇಲ್ಲಿ ಪಂದ್ಯ ಉಳಿಸಿಕೊಳ್ಳಲು ಒಡಿಶಾ ಶತಾಯ ಗತಾಯ ಪ್ರಯತ್ನ ಮಾಡಿದ ಸಂದರ್ಭದಲ್ಲಿ ಸ್ಟ್ರೈಕರ್ ಡಿಯೇಗೊಗೆ 63ನೇ ನಿಮಿಷದಲ್ಲಿ ಏಕೈಕ ಗೋಲ್ ಬಾರಿಸುವ ಅವಕಾಶ ಮಾತ್ರವೇ ಲಭ್ಯವಾಯಿತು. ಸಿಕ್ಕ 7 ಕಾರ್ನರ್ ಕಿಕ್‌ಗಳನ್ನು ಗೋಲ್ ಆಗಿ ಪರಿವರ್ತಿಸುವಲ್ಲಿ ಒಡಿಶಾ ವಿಫಲವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications