
ಗೋವಾ, ಜನವರಿ 5: ಹೊಸ ವರ್ಷ ಎಸ್‌ಸಿ ಈಸ್ಟ್ ಬೆಂಗಾಲ್ ತಂಡದಲ್ಲಿ ನವ ಚೈತನ್ಯ ತಂದಿದ್ದು, ಒಡಿಶಾ ಎಫ್‌ಸಿ ವಿರುದ್ಧ ಜಯ ದಾಖಲಿಸುವ ಮೂಲಕ ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ತನ್ನ ಮೊದಲ ಗೆಲುವಿನ ಸಿಹಿಯುಂಡಿದೆ. ಆದರೆ, ಈ ಗೆಲುವು ಅದೃಷ್ಟದಿಂದ ಮಾತ್ರ ಸಿಕ್ಕಿರುವುದು ಎಂಬುದನ್ನು ದೂರಮಾಡುವ ಸವಾಲು ಈಗ ಈಸ್ಟ್ ಬೆಂಗಾಲ್‌ಗೆ ಎದುರಾಗಿದ್ದು, ಬುಧವಾರ ಇಲ್ಲಿನ ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ಆತಿಥೇಯ ಎಫ್‌ಸಿ ಗೋವಾ ತಂಡದ ಕಠಿಣ ಸವಾಲನ್ನು ಎದುರಿಸಲಿದೆ.
ಈ ಬಾರಿಯ ಟೂರ್ನಿಯಲ್ಲಿ ಇತ್ತಂಡಗಳು ಮೊದಲ ಬಾರಿ ಮುಖಾಮುಖಿಯಾಗುತ್ತಿದ್ದು, ಸಂಪೂರ್ಣ 3 ಅಂಕಗಳನ್ನು ಬಾಚಿಕೊಳ್ಳುವತ್ತ ರಣತಂತ್ರಗಳನ್ನು ರೂಪಿಸಿವೆ. ಅಂದಹಾಗೆ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಅಂಪಟ್ಟಿಯ ಪಾತಾಳದಿಂದ 2ನೇ ಸ್ಥಾನದಲ್ಲಿ ಇದ್ದರೆ, ಅಂಕಪಟ್ಟಿಯ ಟಾಪ್ 4ನಲ್ಲಿ ಗುರುತಿಸಿಕೊಂಡಿರುವ ಎಫ್‌ಸಿ ಗೋವಾ ಮೂರನೇ ಸ್ಥಾನದಲ್ಲಿ ವಿರಾಜಮಾನವಾಗಿದೆ. ಗೋವಾ ಕಳೆದ ಎರಡಯು ಪಂದ್ಯದಲ್ಲಿ ಜಮ್ಷೇದ್ಪುರ್ ಎಫ್‌ಸಿ ಮತ್ತು ಹೈದರಾಬಾದ್ ಎಫ್‌ಸಿ ಎದುರು ಜಯ ದಾಖಲಿಸಿತ್ತು.
ಈ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡ ಗೆಲ್ಲುವ ಹಾಟ್ ಫೇವರಿಟ್ ತಂಡವಾಗಿದೆ ಹೌದು. ಆದರೆ, ಮೊದಲ ಗೆಲುವಿನ ರುಚಿ ನೋಡಿರುವ ರಾಬಿ ಫ್ಲವರ್ ಮಾರ್ಗದರ್ಶನದ ಈಸ್ಟ್ ಬೆಂಗಾಲ್ ತಂಡ ತನ್ನ ಗೆಲುವಿನ ಓಟ ಕಾಯ್ದುಕೊಳ್ಳುವ ಸಲುವಾಗಿ ಸಕಲ ಪ್ರಯತ್ನಗಳನ್ನು ನಡೆಸುವುದಂತೂ ಖಂಡಿತ.
"ಪಂದ್ಯಗಳನ್ನು ಗೆಲ್ಲುವುದೇ ನಮ್ಮ ಗುರಿ. ನಮ್ಮ ಆಟಗಾರರ ಸ್ಥಿತಿ ಈಗ ಸಂಪೂರ್ಣ ಬದಲಾಗಿದೆ. ಕಳೆದ ಕೆಲ ವಾರಗಳಿಗೆ ಹೋಲಿಸಿದರೆ ಈಗ ಸಾಕಷ್ಟು ಸುಧಾರಣೆ ಆಗಿದೆ. ಆದರೆ, ಪಂದ್ಯಕ್ಕೆ ಮುಂದಾದಾಗ ಗೆಲ್ಲುವುದಕ್ಕಷ್ಟೇ ಆಡಬೇಕು ಎಂದು ಅವರಿಗೆ ಸ್ಪಷ್ಟಪಡಿಸಿದ್ದೇನೆ. ನಿಮ್ಮ ಸಹಜ ಆಟವಾಡಿದಲ್ಲಿ ಗೆಲುವು ಖಂಡಿತಾ ಸಾಧ್ಯ ಎಂಬುದನ್ನು ತಿಳಿಸಿಕೊಟ್ಟಿದ್ದೇನೆ. ಇನ್ನು ಕಾಲ ಮಿಂಚಿಲ್ಲ. ಮೊದಲ ಪಂದ್ಯ ಗೆದ್ದಿದ್ದೇವೆ ಎಂದು ಅದರಲ್ಲೇ ಮುಳುಗಿಹೋಗಿಲ್ಲ," ಎಂದು ಫ್ಲವರ್ ಹೇಳಿದ್ದಾರೆ.
"ಗೋವಾ ಚೆಂಡಿನ ಮೇಳೆ ಹೆಚ್ಚು ನಿಯಂತ್ರಣ ಸಾಧಿಸಬಹುದು. ಆದರೆ ನಮ್ಮ ಆಟಗಾರರು ಇಲ್ಲಿ ಎಷ್ಟು ಶ್ರಮವಹಿಸುತ್ತಾರೆ ಎಂಬುದು ಮುಖ್ಯ. ಚೆಂಡನ್ನು ಸಾಧ್ಯವಾದಷ್ಟು ಹಿಂದೆ ಕಳುಹಿಸಿ ಗೋವಾಗ ಆತಂಕ ಒಡ್ಡುವ ಪ್ರಯತ್ನ ಮಾಡಲಿದ್ದೇವೆ. ಈ ಪಂದ್ಯವನ್ನು ಗೆಲ್ಲಲು ಪ್ರಯತ್ನಿಸಲಿದ್ದೇವೆ," ಎಂದು ಹೇಳಿದ್ದಾರೆ. ಗೋವಾ ತಂಡ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆಯಾದರೂ ಪಂದ್ಯದ ಕೊನೆಯ ಹಂತದಲ್ಲಿ ಗೋಲ್ ಬಿಟ್ಟುಕೊಡುವ ಚಾಳಿಗೆ ಸಿಲುಕಿದೆ. ಇದು ತಂಡಕ್ಕೆ ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ.
ಹೀಗಾಗಿ ಗೀವಾ ತಂಡದ ಮುಖ್ಯ ಕೋಚ್ ಜುವಾನ್ ಫರ್ನಾಂಡೊ ಎದುರಾಳಿ ಈಸ್ಟ್ ಬೆಂಗಾಲ್ ತಂಡವನ್ನು ಲಘುವಾಗಿ ಪರಿಗಣಿಸಿಲ್ಲ. "ತಂಡ ಅತ್ಯುತ್ತಮವಾಗಿದ್ದು, ಕಳೆದ ಕೆಲ ಪಂದ್ಯಗಳಲ್ಲಿ ತನ್ನ ಗುಣಮಟ್ಟ ಅನಾವರಣ ಪಡಿಸಿದೆ. ಎರಡು ವಾರಗಳ ಹಿಂದೆ ತಂಡ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿ ಇದ್ದಾಗ ಯಾವುದೇ ಒತ್ತಡ ಇರಲಿಲ್ಲ. ಆದರೆ, ಒಮ್ಮೆ ಸಂಪೂರ್ಣ 3 ಅಂಕ ಲಭ್ಯವಾದರೆ ತಂಡದ ಹುಮ್ಮಸ್ಸು ಬದಲಾಗಿರುತ್ತದೆ. ಈಸ್ಟ್ ಬೆಂಗಾಲ್ ತಂಡ ಯಾವುದೇ ಒತ್ತಡ ಇಲ್ಲದೆ ಪಂದ್ಯಕ್ಕೆ ಎದುರಾಗುತ್ತಿರುವ ಕಾರಣ ನಮ್ಮ ತಂಡ ಎಚ್ಚರಿಕೆಯಿಂದ ಇರುವ ಅಗತ್ಯವಿದೆ. ಅಂದಹಾಗೆ ಪಂದ್ಯ ಗೆಲ್ಲುವ ಅವಕಾಶ ನಮ್ಮ ಕೈಲಿದೆ," ಎಂದಿದ್ದಾರೆ.