ಐಎಸ್‌ಎಲ್: ಹೈದರಾಬಾದ್ ಎಫ್‌ಸಿಗೆ ಶರಣಾದ ಚೆನ್ನೈಯಿನ್

ಗೋವಾ : ಪ್ರಥಮಾರ್ಧದಲ್ಲಿ ಫ್ರಾನ್ ಸ್ಯಾಂಡಜಾ (28ನೇ ನಿಮಿಷ) ಮತ್ತು ದ್ವಿತಿಯಾರ್ಧದಲ್ಲಿ ಜಾಯೆಲ್ ಚಿಯಾನೆಸ್ (83ನೇ ನಿಮಿಷ) ಗೋಲುಗಳ ನೆರವಿನಿಂದ ಚೆನ್ನೈಯಿನ್ ಎಫ್ ಸಿ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಹೈದರಾಬಾದ್ ಎಫ್ ಕ್ಲೀನ್ ಶೀಟ್ ಸಾಧನೆಯೊಂದಿಗೆ ಅಂತಿಮ ನಾಲ್ಕು ತಂಡಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ತಲುಪಿತು. ಮೂರನೇ ಸ್ಥಾನದಲ್ಲಿದ್ದ ಎಫ್ ಸಿ ಗೋವಾ ನಾಲ್ಕನೇ ಸ್ಥಾನಕ್ಕೆ ಕುಸಿಯಿತು. ನಾಲ್ಕನೇ ಸ್ಥಾನದಲ್ಲಿದ್ದ ನಾರ್ಥ್ ಈಸ್ಟ್ ಯುನೈಟೆಡ್ ಮತ್ತೆ ಐದನೇ ಸ್ಥಾನಕ್ಕೆ ಕುಸಿಯಿತು.
ಎಫ್ ಸಿ ಗೋವಾ ಮತ್ತು ನಾರ್ಥ್ ಈಸ್ಟ್ ತಂಡಗಳು 21 ಅಂಕಗಳಿಸಿ ಸಮಬಲ ಸಾಧಿಸಿದ್ದರೂ ನೀಡಿದ ಗೋಲುಗಳ ಆಧಾರದ ಮೇಲೆ ನಾರ್ಥ್ ಈಸ್ಟ್ ಐದನೇ ಸ್ಥಾನಕ್ಕೆ ಕುಸಿಯಿತು. ಈ ಫಲಿತಾಂಶದೊಂದಿಗೆ ಚೆನ್ನೈಯಿನ್ ಎಫ್ ಸಿ ಯ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಯಿತು. ಚೆನ್ನೈಯಿನ್ ತಂಡ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಯಿತು. 2 ಗೋಲುಗಳನ್ನು ಸುಲಭವಾಗಿ ಗಳಿಸಬಹುದಾಗಿತ್ತು. ಆದರೆ ಗುರಿ ಗೋಲ್ ಬಾಕ್ಸ್ ಕಡೆಗೆ ಇರದೆ ಹೊರಭಾಗದಲ್ಲಿ ಸಾಗಿತ್ತು.
ಮುನ್ನಡೆದ ಹೈದರಾಬಾದ್: ತನ್ನ ಸ್ಥಿರ ಪ್ರದರ್ಶನವನ್ನು ಮುಂದುವರಿಸಿದ ಹೈದರಾಬಾದ್ ತಂಡ ಚೆನ್ನೈಯಿನ್ ವಿರುದ್ಧದ ಪಂದ್ಯದಲ್ಲೂ ಪ್ರಥಮಾರ್ಧದಲ್ಲಿ 1-0 ಗೋಲಿನಿಂದ ಮೇಲುಗೈ ಸಾಧಿಸಿದೆ. ಫ್ರಾನ್ ಸ್ಯಾಂಡಜಾ (28ನೇ ನಿಮಿಷ) ಗಳಿಸಿದ ಗೋಲಿನಿಂದ ನಿಜಾಮರ ಪಡೆ ಪ್ರಥಮಾರ್ಧದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಬಾಕ್ಸ್ ನ ಎಡಭಾಗದಿಂದ ಬಂದ ಪಾಸನ್ನು ಸ್ಯಾಂಡಜಾ ದೂರದಲ್ಲಿದ್ದ ಜೊವ್ ವಿಕ್ಟರ್ ಅವರಿಗೆ ಹಿಂದಿರುಗಿಸಿದರು. ವಿಕ್ಟರ್ ಚೆನ್ನೈಯಿನ್ ಡಿಫೆನ್ಸ್ ವಿಭಾಗವನ್ನು ತಪ್ಪಿಸಿ ಪುನಃ ಚೆಂಡನ್ನು ಸ್ಯಾಂಡಜಾ ಅವರಿಗೆ ಹಿಂದಿರುಗಿಸಿದರು. ಚೆನ್ನೈಯಿನ್ ಡಿಫೆಂಡರ್ ದೀಪಕ್ ತಾಂಗ್ರಿ ಅವರ ತಡೆಯನ್ನು ತಪ್ಪಿಸಿಕೊಂಡ ಸ್ಯಾಂಡಜಾ ನೇರವಾಗಿ ಗೋಲ್ ಬಾಕ್ಸ್ ಗೆ ಗುರಿ ಇಟ್ಟಾಗ ಚೆಂಡು ನೆಟ್ ಸೇರಿತ್ತು. ಬೆಂಗಳೂರು ವಿರುದ್ಧವೂ ಡ್ರಾ ಗಳಿಸುವಲ್ಲಿ ಸ್ಯಾಂಡಜಾ ಅವರು ಗಳಿಸಿದ ಗೋಲು ಪ್ರಮುಖವಾಗಿತ್ತು. ಚೆನ್ನೈಯಿನ್ ಗೆ ಮೊದಲಾರ್ಧದಲ್ಲಿ ಉತ್ತಮ ಅವಕಾಶ ಸಿಗಲಿಲ್ಲ.
ಹೈದರಾಬಾದ್ ಅಪಾಯಕಾರಿ: ಬೆಂಗಳೂರು ತಂಡದ ವಿರುದ್ಧ ಜಯ ಗಳಿಸಿರುವ ಹೈದರಾಬಾದ್ ತಂಡವನ್ನು ಚೆನ್ನೈಯಿನ್ ಹಗುರವಾಗಿ ಪರಿಗಣಿಸುವಂತಿಲ್ಲ. ಹಿಂದಿನ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದಾಗ ನಿಜಾಮರ ಪಡೆ 4-1 ಅಂತರದಲ್ಲಿ ಜಯ ಗಳಿಸಿದ್ದನ್ನು ಮರೆಯುವಂತಿಲ್ಲ. ಮುಂಬೈ ಸಿಟಿ ಎಫ್ ಸಿ ವಿರುದ್ಧ ನಾರ್ಥ್ ಈಸ್ಟ್ ಜಯ ಗಳಿಸುವ ಮೂಲಕ ಹೈದರಾಬಾದ್ ಐದನೇ ಸ್ಥಾನಕ್ಕೆ ಕುಸಿದಿದೆ. ಆದ್ದರಿಂದ ತಂಡಕ್ಕೆ ಇಲ್ಲಿ ಜಯ ಗಳಿಸಬೇಕಾದ ಅನಿವಾರ್ಯತೆ ಇದೆ. ಅರಿದಾನೆ ಸ್ಯಾಂಟನಾ ಮತ್ತು ಫ್ರಾನ್ ಸ್ಯಾಂಡಜಾ ಬೆಂಗಳೂರು ವಿರುದ್ಧ ತೋರಿದ ಪ್ರದರ್ಶನವನ್ನೇ ಇಲ್ಲಿ ತೋರಿದರೆ ಚೆನ್ನೈಯಿನ್ ಹಾದಿ ಕಠಿಣವಾಗುವುದು ಸಹಜ. ಇಬ್ಬರು ಆಟಗಾರರು ಇದುವರೆಗೂ ತಂಡಕ್ಕಾಗಿ 7 ಗೋಲುಗಳನ್ನು ಗಳಿಸಿದ್ದಾರೆ. ಮುಂಬೈ ವಿರುದ್ಧ 1-1 ಗೋಲುಗಳಿಂದ ಡ್ರಾ ಸಾಧನೆ ಮಾಡಿದ ನಂತರ ಚೆನ್ನೈಯಿನ್ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ. ಚೆನ್ನೈಯಿನ್ ತಂಡ ಗೋಲು ಗಳಿಸುವಲ್ಲಿ ವಿಫಲವಾಗಿರುವುದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. 147 ಅವಕಾಶಗಳು ನಿರ್ಮಾಣವಾಗಿದ್ದರೂ ತಂಡ ಗಳಿಸಿದ್ದು 11 ಗೋಲುಗಳು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications