
ನಾರ್ಥ್ ಈಸ್ಟ್ ಮುನ್ನಡೆ
45 ನಿಮಿಷಗಳ ಆಟದಲ್ಲಿ ನಾರ್ಥ್ ಈಸ್ಟ್ ತಂಡ 3-1 ಗೋಲಿನಿಂದ ಮೇಲುಗೈ ಸಾಧಿಸಿ ಜಯಕ್ಕೆ ಅಗತ್ಯ ಇರುವ ವೇದಿಕೆ ನಿರ್ಮಿಸಿಕೊಂಡಿತು. 24 ನಿಮಿಷಗಳ ಅಂತರದಲ್ಲಿ ತಂಡ ಮೂರು ಗೋಲು ಗಳಿಸಿತು. ಲೂಯಿಸ್ ಮಚಾಡೋ (9 ಮತ್ತು 24ನೇ ನಿಮಿಷ) ಮತ್ತು ದೆಶ್ರಾನ್ ಬ್ರೌನ್ (19ನೇ ನಿಮಿಷ) ಗೋಲು ಗಳಿಸಿ ತಂಡದ ಮುನ್ನಡೆಗೆ ನೆರವಾದರು. ಒಡಿಶಾ ಪರ ಬ್ರಾಡಿನ್ ಇನ್ಮಾನ್ (45ನೇ ನಿಮಿಷ) ಗೋಲು ಗಳಿಸಿ ಅಂತರವನ್ನು ಕಡಿಮೆ ಮಾಡಿದರು. ನಾರ್ಥ್ ಈಸ್ಟ್ ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಪಾನಾಲ್ಟಿ ವಲಯಕ್ಕೆ ಮೇಲಿಂದ ಬಂದ ಪಾಸನ್ನು ಅದೇ ವೇಗದಲ್ಲಿ ನೆಟ್ ಗೆ ತಳ್ಳಿದ ಮಚಾಡೋ ಅದ್ಭುತ ಗೋಲು ಗಳಿಸಿ ಎದುರಾಳಿಯನ್ನು ಮೌನಕ್ಕೆ ಸರಿಯುವಂತೆ ಮಾಡಿದರು. ಒಡಿಶಾದ ಡಿಫೆನ್ಸ್ ಛಿದ್ರವಾದ ಕಾರಣ ಮತ್ತೆರಡು ಗೋಲುಗಳು ಸುಲಭವಾಗಿ ದಾಖಲಾದವು. ಅದ್ಭುತ ಫುಟ್ಬಾಲ್ ನಲ್ಲಿ ನಾರ್ಥ್ ಈಸ್ಟ್ 3-1 ಗೋಲುಗಳಿಂದ ಮುನ್ನಡೆ ಕಾಯ್ದುಕೊಂಡಿತು.

ಈಸ್ಟ್ ಗೆ ಸುಲಭ ಹಾದಿ
ಆಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಒಡಿಶಾ ತಂಡಕ್ಕೆ ಐದನೇ ಸ್ಥಾನದಲ್ಲಿರುವ ನಾರ್ಥ್ ಈಸ್ಟ್ ಯುನೈಟೆಡ್ ತಂಡಗಳು ಪರಸ್ಪರ ಮುಖಾಮುಖಿಯಾದವು. ಕಳೆದ ಎರಡು ದಿನಗಳಲ್ಲಿ ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡವು, ಹೈದರಾಬಾದ್ ಹಾಗೂ ಈಸ್ಟ್ ಬೆಂಗಾಲ್ ನಡುವಿನ ಪಂದ್ಯ 1-1ರಲ್ಲಿ ಸಮಬಲಗೊಂಡರೆ ಎಫ್ ಸಿ ಗೋವಾ 2-2 ಗೋಲುಗಳಿಂದ ಚೆನ್ನೈಯಿನ್ ತಂಡದ ಜಯವನ್ನು ಕಸಿದುಕೊಂಡಿತ್ತು. ಈ ಫಲಿತಾಂಶ ನಾರ್ಥ್ ಈಸ್ಟ್ ಪಾಲಿಗೆ ವರವಾಗಿ ಪರಿಣಮಿಸಿತು, 23 ಅಂಕಗಳನ್ನು ಗಳಿಸಿರುವ ನಾರ್ಥ್ ಈಸ್ಟ್ ತಂಡ ಗೋವಾ ಮತ್ತು ಹೈದರಾಬಾದ್ ಗಿಂತ ಕೇವಲ ಒಂದು ಅಂಕ ಹಿಂದೆ ಬಿದ್ದಿದೆ. ಇಲ್ಲಿ ಜಯ ಗಳಿಸಿದರೆ ತಂಡ ಮೂರನೇ ಸ್ಥಾನ ತಲಪುವುದಲ್ಲದೆ 2 ಅಂಕ ಮುನ್ನಡೆ ಕಾಣಲಿದೆ.

ಜಿದ್ದಾಜಿದ್ದಿನ ಹೋರಾಟ
ಇತ್ತೀಚಿನ ಫಾರ್ಮ್ ಗಮನಿಸಿದರೆ ಪರ್ವತ ತಪ್ಪಲಿನ ತಂಡ ಮೂರು ಅಂಕಗಳನ್ನು ಗಳಿಸುವ ಸಾಧ್ಯತೆ ಇದೆ. ಮಧ್ಯಂತರ ಕೋಚ್ ಖಾಲೀದ್ ಜಮೀಲ್ ಅವರ ಮುಂದಾಳತ್ವದಲ್ಲಿ ತಂಡ ಸತತ ಆರು ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ. ಕಳಿಂಗ ವಾರಿಯರ್ಸ್ ಖ್ಯಾತಿಯ ಒಡಿಶಾ ಈಗಾಗಲೇ ಪ್ಲೇ ಆಫ್ ಸ್ಪರ್ಧೆಯಿಂದ ಹೊರಬಿದ್ದಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧ 2-2 ಗೋಲುಗಳಿಂದ ಡ್ರಾ ಸಾಧಿಸಿದ ಒಡಿಶಾ ಈಸ್ಪರ್ಧೆಗೆ ಅತ್ಯಂತ ಆತ್ಮವಿಶ್ವಾಸದಲ್ಲಿ ಬಂದಿದೆ. ಡಿಗೋ ಮೌರಾಸಿಯೋ 9 ಗೋಲುಗಳನ್ನು ಗಳಿಸಿ ತಂಡದ ಗೌರವ ಕಾಪಾಡಿದ್ದಾರೆ, ಅದೇ ಪ್ರದರ್ಶನವನ್ನು ಮುಂದುವರಿಸಿದರೆ ನಾರ್ಥ್ ಈಸ್ಟ್ ಜಯಕ್ಕಾಗಿ ಕಠಿಣ ಹೋರಾಟ ನಡೆಸಬೇಕಾಗಬಹುದು.


Click it and Unblock the Notifications


